ಮುನಿರಾಬಾದ್: ಪ್ರಸಕ್ತ ಸಾಲಿನ ನವೆಂಬರ್ ತಿಂಗಳಿನಿಂದ ತುಂಗಭದ್ರಾ ಜಲಾಶಯಕ್ಕೆ ನೂತನ ಗೇಟ್ ಅಳವಡಿಕೆ ಕಾರ್ಯ ಪ್ರಾರಂಭವಾಗಲಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದ್ದಾರೆ.
ಕಂಪನಿಯು ಜುಲೈಯಿಂದ ಅಕ್ಟೋಬರ್ ವರೆಗೆ 33 ಗೇಟುಗಳನ್ನು ತಯಾರಿಸಲಿದ್ದು, ಆನಂತರ ಅದನ್ನು ಗದಗ ಮತ್ತು ತುಂಗಭದ್ರಾ ಮಂಡಳಿಯ ಕಚೇರಿಯ ಹಿಂಭಾಗದಿಂದ ತುಂಗಭದ್ರಾ ಜಲಾಶಯಕ್ಕೆ ಸಾಗಿಸಿ ಹಂತ ಹಂತವಾಗಿ ಅಳವಡಿಸಲಿದೆ ಎಂದು ತಿಳಿಸಿದರು.
ಗುತ್ತಿಗೆದಾರರು ನವೆಂಬರ್‌ನಿಂದ ಪ್ರತಿ ತಿಂಗಳು ತುಂಗಭದ್ರಾ ಜಲಾಶಯಕ್ಕೆ ಕನಿಷ್ಠ 4 ನೂತನ ಗೇಟುಗಳನ್ನು ಅಳವಡಿಸುವುದಾಗಿ ಭರವಸೆ ನೀಡಿದ್ದಾರೆ. ಅಂದರೆ ನವೆಂಬರ್ ತಿಂಗಳಿನಿಂದ ಜೂನ್ 2026 ರ ವರೆಗೆ ಜಲಾಶಯದ ಶಿಥಿಲಗೊಂಡ ಎಲ್ಲ 33 ಗೇಟುಗಳ ಬದಲಿಸಿ ನೂತನ ಗೇಟುಗಳನ್ನು ಅಳವಡಿಸಲಾಗುವುದು. 2026ನೇ ಸಾಲಿನ ಮುಂಗಾರು ಬೆಳೆಗಳಿಗೆ ತುಂಗಭದ್ರಾ ಜಲಾಶಯದ ನೀರು ಸಿಗಲಿದೆ ಎಂದು ಸಂಸದರು ನುಡಿದರು.ಜಲಾಶಯದ 33 ಗೇಟಗಳು ಶೀತಲಗೊಂಡ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಜಲಾಶಯದಲ್ಲಿ 80 ಟಿಎಂಸಿ ಮಾತ್ರ ಶೇಖರಣೆ ಮಾಡಲಾಗುವುದು. ಈ ಬಾರಿ ಮುಂಗಾರು ಚುರುಕಾಗಿದೆ. ಈ ವರ್ಷ ಜಲಾಶಯದಲ್ಲಿ ಸುಮಾರು 65 ಟಿಎಂಸಿಯಷ್ಟು ನೀರು ಶೇಖರಣೆಯಾಗಿದೆ. ನೀರಾವರಿ ಸಲಹಾ ಸಮಿತಿಯಲ್ಲಿ ಜು. 2ರಿಂದ ರೈತರ ಗದ್ದೆಗಳಿಗೆ ಕಾಲುವೆಗಳ ಮೂಲಕ ನೀರು ಹರಿಸಲು ನಿರ್ಧರಿಸಲಾಗಿದೆ, ಅಚ್ಚುಕಟ್ಟು ಪ್ರದೇಶದ ರೈತರಿಗೆ ಮುಂಗಾರು ಬೆಳೆಗೆ ನೀರಿನ ಕೊರತೆಯಾಗುವುದಿಲ್ಲ, ರೈತರು ಆತಂಕಪಡುವ ಅಗತ್ಯವಿಲ್ಲ ಎಂದರು.
ಜಲಾಶಯದ ನೂತನ ಗೇಟುಗಳ ಅಳವಡಿಕೆಯಿಂದ ರೈತರ ಗದ್ದೆಗಳಿಗೆ ನೀರು ಹರಿಸುವ ಪ್ರಕ್ರಿಯೆಯಲ್ಲಿ ವ್ಯತ್ಯಯವಾಗುವುದಿಲ್ಲ. ರೈತರು ಆತಂಕಪಡುವ ಅಗತ್ಯ ಇಲ್ಲ ಎಂದು ಸಂಸದ ರಾಜಶೇಖರ್ ಹಿಟ್ನಾಳ ಹೇಳಿದ್ದಾರೆ.