ಕನ್ನಡಪ್ರಭ ವಾರ್ತೆ ಮಡಿಕೇರಿ
ರಾಜ್ಯದಲ್ಲಿ ಹೋಂ ಸ್ಟೇ ನಿರ್ವಹಣೆ ಸಂಬಂಧ ನೂತನ ನೀತಿಯನ್ನು ಮುಂದಿನ ಜನವರಿ-ಫೆಬ್ರವರಿಯಲ್ಲಿ ಪ್ರಕಟಿಸಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.ನಗರ ಹೊರವಲಯದ ಖಾಸಗಿ ರೆಸಾರ್ಟ್‌ನಲ್ಲಿ ಗುರುವಾರ ನಡೆದ ‘ಕನೆಕ್ಟ್ ಕರ್ನಾಟಕ-2024’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರವಾಸೋದ್ಯಮ ಇಲಾಖೆಯ ಕಾರ್ಯಚಟುವಟಿಕೆಗಳು, ಪ್ರವಾಸೋದ್ಯಮ ನೀತಿ, ಮೂಲಭೂತ ಸೌಕರ್ಯ ಅಭಿವೃದ್ಧಿ, ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಪ್ರಚಾರಾಂದೋಲನ, ಪ್ರವಾಸಿಗರನ್ನು ಆಕರ್ಷಿಸುವುದು ಹಾಗೂ ಪ್ರವಾಸಿ ಕ್ಷೇತ್ರದಲ್ಲಿ ತೊಡಗಿರುವ ಪಾಲುಗಾರರಿಗೆ ಉತ್ತೇಜನ ನೀಡುವ ಸಲುವಾಗಿ ಪ್ರಸ್ತುತ ರಾಜ್ಯದಲ್ಲಿನ ಪ್ರಮುಖ ಜಿಲ್ಲಾ ಕೇಂದ್ರಗಳನ್ನು ಸಂಪರ್ಕಿಸಿ ರಾಜ್ಯದ ಎಲ್ಲಾ ಪ್ರವಾಸಿ ಸಹಭಾಗಿದಾರರನ್ನು ಒಗ್ಗೂಡಿಸುವ ಸಂಬಂಧ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.ಹೋಂಸ್ಟೇಗಳಿಗೆ ಸಂಬಂಧಿಸಿದಂತೆ ಒಂದು ನೀತಿ ಬೇಕಿದೆ ಎಂದು ಹಲವು ದಶಕಗಳಿಂದ ಕೇಳಿ ಬರುತ್ತಿದ್ದು, ಈ ಹಿನ್ನೆಲೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಮುಂದಿನ ಕ್ಯಾಲೆಂಡರ್ ವರ್ಷದ ಆರಂಭದಲ್ಲಿಯೇ ಹೋಂಸ್ಟೇಗಳಿಗೆ ಹೊಸ ನೀತಿಯನ್ನು ಸರ್ಕಾರ ಘೋಷಿಸಲಿದೆ ಎಂದು ಅವರು ಹೇಳಿದರು.
ಪ್ರವಾಸಿ ಸ್ಥಳಗಳಲ್ಲಿ ಕುಡಿಯುವ ನೀರು, ಶೌಚಾಲಯ, ವಾಹನ ನಿಲುಗಡೆಗೆ ವ್ಯವಸ್ಥೆ ಹೀಗೆ ಮತ್ತಿತರ ‘ಡೆಸ್ಟಿನೇಷನ್ ಟೂರಿಸಂಗೆ’ ಒತ್ತು ನೀಡುವುದು ಅಗತ್ಯ ಎಂದರು.ಸಂವಾದ ಸಂದರ್ಭದಲ್ಲಿ ಮಾತನಾಡಿದ ಹೋಂ ಸ್ಟೇ ಅಸೋಸಿಯೇಶನ್ ಪ್ರಮುಖರಾದ ಮೋಂತಿ ಗಣೇಶ್, ಕೊಡಗು ಜಿಲ್ಲೆಯಲ್ಲಿ 2003ರಲ್ಲಿ ಹೋಂಸ್ಟೇಗಳ ಪರಿಕಲ್ಪನೆ ಆರಂಭವಾಯಿತು. ಜಿಲ್ಲೆಯಲ್ಲಿ 2200 ಕ್ಕೂ ಹೆಚ್ಚು ಹೋಂಸ್ಟೇಗಳು ನೋಂದಣಿಯಾಗಿದ್ದು, ಹೋಂಸ್ಟೇಗಳಿಗೆ ಒಂದು ನೀತಿ ಜಾರಿಗೊಳಿಸಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಮಾತನಾಡಿ, ಕೊಡಗು ಜಿಲ್ಲೆಗೆ ಪ್ರತೀ ವಾರಾಂತ್ಯದಲ್ಲಿ ಲಕ್ಷ ಜನರು ಭೇಟಿ ನೀಡುತ್ತಾರೆ. ಆದ್ದರಿಂದ ವಿವಿಧೋದ್ದೇಶ ಯೋಜನೆಯಡಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು ಎಂದು ಕೋರಿದರು.ಕರ್ನಾಟಕ ಪ್ರವಾಸೋದ್ಯಮ ಸಂಸ್ಥೆ ಅಧ್ಯಕ್ಷ ಕೆ.ಶ್ಯಾಮರಾಜ್, ಕರ್ನಾಟಕ ಹೊಟೇಲ್ ಅಸೋಷಿಯೇಷನ್ ಅಧ್ಯಕ್ಷ ಜಿ.ಕೆ.ಶೆಟ್ಟಿ, ಕರ್ನಾಟಕ ಪ್ರವಾಸೋದ್ಯಮ ಸಂಸ್ಥೆ ಸದಸ್ಯ ಅಯ್ಯಪ್ಪ ಸೋಮಯ್ಯ, ಬೆಂಗಳೂರು ಹೊಟೇಲ್ ಅಸೋಷಿಯೇಷನ್ ಅಧ್ಯಕ್ಷ ಪಿ.ಸಿ.ರಾವ್, ಜಿಲ್ಲಾ ಹೋಟೆಲ್ ಅಸೋಷಿಯೇಷನ್ ಅಧ್ಯಕ್ಷ ದಿನೇಶ್ ಕಾರ್ಯಪ್ಪ, ಜಿಲ್ಲಾ ಹೊಟೇಲ್ ಅಸೋಷಿಯೇಷನ್ ಸಂಸ್ಥೆಯ ಸಲಹೆಗಾರ ಜಿ.ಚಿದ್ವಿಲಾಸ್, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಜಿಲ್ಲಾ ಹೊಟೇಲ್ ಅಸೋಷಿಯೇಷನ್ ಸಂಸ್ಥೆಯ ಕಾರ್ಯದರ್ಶಿ ನಾಜೀರ್, ಜಿಲ್ಲಾ ಟೂರ್ ಅಂಡ್ ಟ್ರಾವೆಲ್ ಸಂಸ್ಥೆ ಅಧ್ಯಕ್ಷ ವಸಂತ, ಛಾಯಾ ನಂಜಪ್ಪ, ಕರ್ನಾಟಕ ಪ್ಲಾಂಟರ್ ಅಸೋಷಿಯೇಷನ್‌ನ ಸದಸ್ಯ ಮೋಹನ್ ದಾಸ್, ಪ್ರವಾಸೋದ್ಯಮ ಸಂಘದ ಗೌರವ ಸಲಹೆಗಾರ ಅನಿಲ್ ಎಚ್.ಟಿ. ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಸಮಾಲೋಚಕ ಜತಿನ್ ಬೋಪಣ್ಣ ಇತರರು ಇದ್ದರು.
ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಅನಿತಾ ಭಾಸ್ಕರ್ ಸ್ವಾಗತಿಸಿದರು, ಜಿಲ್ಲಾ ಹೋಟೆಲ್ ಅಸೋಷಿಯೇಷನ್‌ನ ಸಲಹೆಗಾರ ಜಿ.ಚಿದ್ವಿಲಾಸ್ ನಿರೂಪಿಸಿದರು. ಸ್ವಪ್ನಾ ಹಾಗೂ ಚೋಂದಮ್ಮ ನಾಡಗೀತೆ ಹಾಡಿದರು, ಹೊಟೇಲ್ ಅಸೋಷಿಯೇಷನ್ ಜಿಲ್ಲಾ ಅಧ್ಯಕ್ಷ ದಿನೇಶ್ ಕಾರ್ಯಪ್ಪ ವಂದಿಸಿದರು.