ಹೊಸ ಆವಿಷ್ಕಾರಗಳು ಎಂಜಿನೀಯರಿಂಗ್ ವೃತ್ತಿಗೆ ಸವಾಲು

KannadaprabhaNewsNetwork | Published : Mar 20, 2024 1:17 AM

ಸಾರಾಂಶ

ಗ್ರಾಮೀಣ ಪ್ರತಿಭೆಗಳಿಗೆ ಎಂಜಿನೀಯರಿಂಗ್ ಕ್ಷೇತ್ರದಲ್ಲಿ ಅವಕಾಶ ನೀಡುವ ನಿಟ್ಟಿನಲ್ಲಿ ವೆಂಕಪ್ಪ ಅಗಡಿ ದೂರ ದೃಷ್ಟಿ ಎದ್ದು ಕಾಣುತ್ತದೆ. ಶಿಕ್ಷಣ ಎನ್ನುವುದು ಇಂದು ವ್ಯಾಪಾರೀಕರಣವಾಗುತ್ತಿರುವುದು ನೋವಿನ ಸಂಗತಿಯಾಗಿದೆ

ಲಕ್ಷ್ಮೇಶ್ವರ: ಆಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳು ಮತ್ತು ಉದ್ಯಮಶೀಲತೆ ಬೆಳೆಯಬೇಕು ಎಂದು ಬೆಂಗಳೂರಿನ ಸೋನಾಟಾ ಕಂಪನಿಯ ವೈಸ್ ಚೇರಮನ್ ಶ್ರೀಕರ ರೆಡ್ಡಿ ಹೇಳಿದರು.

ಮಂಗಳವಾರ ಪಟ್ಟಣದ ಕಮಲಾ ವೆಂಕಪ್ಪ ಅಗಡಿ ಎಂಜಿನೀಯರಿಂಗ್ ಕಾಲೇಜಿನ 20 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಗ್ರಾಮೀಣ ಪ್ರತಿಭೆಗಳಿಗೆ ಎಂಜಿನೀಯರಿಂಗ್ ಕ್ಷೇತ್ರದಲ್ಲಿ ಅವಕಾಶ ನೀಡುವ ನಿಟ್ಟಿನಲ್ಲಿ ವೆಂಕಪ್ಪ ಅಗಡಿ ದೂರ ದೃಷ್ಟಿ ಎದ್ದು ಕಾಣುತ್ತದೆ. ಶಿಕ್ಷಣ ಎನ್ನುವುದು ಇಂದು ವ್ಯಾಪಾರೀಕರಣವಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಆಧುನಿಕ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಯಾವುದೆ ಸಂಸ್ಥೆ ಬೆಳೆಯಲು ಸಾಮೂಹಿಕ ಶ್ರಮವು ಕಾರಣವಾಗಿದೆ. ಕಠಿಣ ಪರಿಶ್ರಮದಿಂದ ಎತ್ತರಕ್ಕೆ ಬೆಳೆಯುವ ಅವಕಾಶ ಎಂಜಿನೀಯರಿಂಗ್ ಕ್ಷೇತ್ರದಲ್ಲಿದೆ. ಎಂಜಿನೀಯರಿಂಗ್ ಶಿಕ್ಷಣ ಸಾಕಷ್ಟು ಉದ್ಯೋಗ ಅವಕಾಶ ನೀಡಿದೆ. ಆಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯು ಹೊಸ ಅವಕಾಶ ಎಂಜಿನೀಯರಿಂಗ್ ವಿದ್ಯಾರ್ಥಿಗಳಿಗೆ ನೀಡುತ್ತಿದೆ. ನಿಮ್ಮಲ್ಲಿನ ಹೊಸ ಕೌಶಲ್ಯಗಳು ನಿಮಗೆ ಅನೇಕ ಮಹತ್ವದ ಉದ್ಯೋಗದ ಅವಕಾಶ ನೀಡುತ್ತದೆ ಎಂದು ಹೇಳಿದರು.

ಈ ವೇಳೆ ಲಕ್ಷ್ಮೇಶ್ವರದ ಅಗಡಿ ಎಂಜಿನೀಯರಿಂಗ್ ಕಾಲೇಜಿನ ಚೇರಮನ್ ಹರ್ಷವರ್ಧನ ಅಗಡಿ ಮಾತನಾಡಿ, ಆಧುನಿಕ ಶಿಕ್ಷಣವು ಯುವಕರನ್ನು ಹೆಚ್ಚು ಸ್ವಾವಲಂಬನೆಯ ಹಾದಿಯತ್ತ ಸಾಗುವಂತೆ ಮಾಡಿಕೊಡುತ್ತದೆ. ಈ ವರ್ಷದಿಂದ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಹೊಸ ಸಂಶೋಧನೆಯಲ್ಲಿ ತೊಡಗಿಕೊಂಡು ₹1 ಕೋಟಿ ಶಿಷ್ಯ ವೇತನ ಪಡೆಯಬಹುದು. ಅಲ್ಲದೆ ವಿದ್ಯಾರ್ಥಿಗಳು ಹೊಸ ಸಂಶೋಧನೆಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು. ನಮ್ಮ ತಂದೆಯವರು ಲಕ್ಷ್ಮೇಶ್ವರ ಪಟ್ಟಣದಲ್ಲಿ ಎಂಜಿನೀಯರಿಂಗ್ ಕಾಲೇಜು ಸ್ಥಾಪನೆ ಮಾಡಿ ಮಹತ್ತರ ಸಾಧನೆ ಮಾಡಿದ್ದಾರೆ.

ಕೃತಕ ಬುದ್ಧಿಮತ್ತೆಯು ಹೊಸ ಎಂಜಿನೀಯರಿಂಗ್ ಜಗತ್ತಿನ ಭಾಷೆಯಾಗಿದೆ. ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹೊಸ ಹೊಸ ಸಂಶೋಧನಾ ಕಾರ್ಯದಲ್ಲಿ ತೊಡಗಿಸಿಕೊಂಡ ಸಾಧನೆ ಮಾಡಬೇಕು. ಮಹಿಳೆಯರು ಎಲ್ಲ ರಂಗಗಳಲ್ಲೂ ನಿಮ್ಮೊಂದಿಗೆ ಪೈಪೋಟಿ ನೀಡುತ್ತಿದ್ದಾರೆ.ನೀವು ಮಾಡುವ ಕಾರ್ಯಗಳು ಇನ್ನೊಬ್ಬರಿಗೆ ಮಾದರಿಯಾಗುವಂತೆ ರೂಪುಗೊಳ್ಳಬೇಕು. ಸಾಧನೆಗೆ ಯಾವುದೇ ಅಡ್ಡ ದಾರಿಗಳು ಇಲ್ಲ. ಕಠಿಣ ಪರಿಶ್ರಮ ಮಾತ್ರ ನಮ್ಮನ್ನು ಸಾಧನೆಯ ಶಿಖರ ಮುಟ್ಟುವಂತೆ ಮಾಡುತ್ತದೆ ಎಂದು ಹೇಳಿದರು.

ಈ ವೇಳೆ ಶ್ರೀಮತಿ ಹರ್ಷವರ್ಧನ ಅಗಡಿ, ಪ್ರಾಚಾರ್ಯ ಡಾ. ಪರಶುರಾಮ ಬಾರ್ಕಿ. ಪ್ರೋ. ಎನ್.ಹಯವದನ ಹಾಗೂ ಕಾಲೇಜಿನ ಉಪನ್ಯಾಸಕರು. ವಿದ್ಯಾರ್ಥಿಗಳು ಇದ್ದರು.

Share this article