ಕ್ಷಯರೋಗದ ಪತ್ತೆ, ಚಿಕಿತ್ಸೆಗೆ ಹೊಸ ಯಂತ್ರ

KannadaprabhaNewsNetwork |  
Published : Nov 26, 2025, 01:45 AM IST
ಸ್ವಯಂಚಾಲಿತ ಕಾರ್ಟ್ರಿಡ್ಜ್ ಆಧಾರಿತ ನ್ಯೂಕಿಯಿಕ್ ಆಮ್ಲ ವರ್ಧನೆ ಪರೀಕ್ಷೆ(CBNAAT) ಯಂತ್ರ ವನ್ನು ಆಸ್ಪತ್ರೆ ಪರವಾಗಿ ಸಂಸದ ರಾಘವೇಂದ್ರ ಮೂಲಕ ಹಸ್ತಾಂತರಗೊಳಿಸಲಾಯಿತು. | Kannada Prabha

ಸಾರಾಂಶ

ರೋಗಿಗಳಿಗೆ ಗುಣಮಟ್ಟದ ಸೇವೆ ದೊರಕಿಸುವಲ್ಲಿ ಖಾಸಗಿ ಆಸ್ಪತ್ರೆಗೆ ಸಮಾನವಾದ ಸೌಲಭ್ಯ ಹೊಂದಿರುವ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಮಂಗಳವಾರ ಕ್ಷಯ ರೋಗದ ಆರಂಭಿಕ ಪತ್ತೆ ಹಾಗೂ ಚಿಕಿತ್ಸೆಗೆ ನಿಖರವಾಗಿ ಸಹಕರಿಸುವ ಸಂಪೂರ್ಣ ಸ್ವಯಂಚಾಲಿತ ಕಾರ್ಟ್ರಿಡ್ಜ್ ಆಧಾರಿತ ನ್ಯೂಕ್ಲಿಯಿಕ್ ಆಮ್ಲ ವರ್ಧನೆ ಪರೀಕ್ಷೆ(CBNAAT)ಅತ್ಯಾಧುನಿಕ ಯಂತ್ರ ಸೇರ್ಪಡೆಯಾಗಿದೆ.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ರೋಗಿಗಳಿಗೆ ಗುಣಮಟ್ಟದ ಸೇವೆ ದೊರಕಿಸುವಲ್ಲಿ ಖಾಸಗಿ ಆಸ್ಪತ್ರೆಗೆ ಸಮಾನವಾದ ಸೌಲಭ್ಯ ಹೊಂದಿರುವ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಮಂಗಳವಾರ ಕ್ಷಯ ರೋಗದ ಆರಂಭಿಕ ಪತ್ತೆ ಹಾಗೂ ಚಿಕಿತ್ಸೆಗೆ ನಿಖರವಾಗಿ ಸಹಕರಿಸುವ ಸಂಪೂರ್ಣ ಸ್ವಯಂಚಾಲಿತ ಕಾರ್ಟ್ರಿಡ್ಜ್ ಆಧಾರಿತ ನ್ಯೂಕ್ಲಿಯಿಕ್ ಆಮ್ಲ ವರ್ಧನೆ ಪರೀಕ್ಷೆ(CBNAAT)ಅತ್ಯಾಧುನಿಕ ಯಂತ್ರ ಸೇರ್ಪಡೆಯಾಗಿದೆ.

ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾದ ಅವಧಿಯಲ್ಲಿ ಮೇಲ್ದರ್ಜೆಗೇರಿ ಹಲವು ಅತ್ಯಾಧುನಿಕ ಚಿಕಿತ್ಸಾ ಯಂತ್ರೋಪಕರಣದ ಮೂಲಕ ಗುಣಮಟ್ಟದ ಸೇವೆಗೆ ಹೆಸರುವಾಸಿಯಾಗಿ ನಿತ್ಯ ತಾಲೂಕಿನ ಜತೆಗೆ ಅಕ್ಕಪಕ್ಕದ ತಾಲೂಕಿನ 800 ರಿಂದ 1000 ಹೊರ ರೋಗಿಗಳು ಆಗಮಿಸುತ್ತಿರುವ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಇದೀಗ ನೂತನ ಯಂತ್ರದಿಂದ ರೋಗಿಗಳ ನಿರೀಕ್ಷೆ ಹೆಚ್ಚಿಸಿದೆ.

ಮಂಗಳವಾರ ಸಂಸದ ರಾಘವೇಂದ್ರ ಯಂತ್ರೋಪಕರಣದ ಘಟಕವನ್ನು ಲೋಕಾರ್ಪಣೆಗೊಳಿಸಿದರು.

ಪ್ರಧಾನಿ ಮೋದಿ ಕ್ಷಯ ರೋಗಮುಕ್ತ ದೇಶವನ್ನಾಗಿಸಲು ಕರೆ ನೀಡಿದ ಹಿನ್ನಲೆ ರೋಗದ ಸಂಪೂರ್ಣ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಹೆಚ್ಚಿನ ಮಹತ್ವ ನೀಡಿದೆ. ಈ ದಿಸೆಯಲ್ಲಿ ಕ್ಷಯ ರೋಗವನ್ನು ತ್ವರಿತಗತಿಯಲ್ಲಿ ಪತ್ತೆ ಹಚ್ಚಲು ಅತ್ಯಾಧುನಿಕ ಯಂತ್ರೋಪಕರಣ ಪರಿಚಯಿಸಲಾಗಿದ್ದು, ಕ್ಷಯ ರೋಗಿಗಳಿಗೆ ನಿಕ್ಷಯ್ ಪೋಷಣ್ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ನೀಡಲಾಗುತ್ತಿದ್ದ ರು.500 ಸಹಾಯಧನವನ್ನು ರು.1000ಕ್ಕೆ ಹೆಚ್ಚಿಸಿ ನೇರವಾಗಿ ರೋಗಿಗಳ ಬ್ಯಾಂಕ್ ಖಾತೆಗೆ ಪಾವತಿಸಲಾಗುತ್ತಿದೆ. ಕ್ಷಯ ರೋಗಿಗಳಿಗೆ ಚಿಕಿತ್ಸೆಗಾಗಿ ಕಳೆದ ಕೆಲ ವರ್ಷದ ಹಿಂದೆ ಅಂದಾಜು ರು. 10 ಲಕ್ಷ ವೆಚ್ಚದಲ್ಲಿ ಟ್ರೂನ್ಯಾಟ್ ಎಂಬ ಯಂತ್ರೋಪಕರಣದ ಮೂಲಕ ಚಿಕಿತ್ಸೆ ನೀಡಲಾಗುತ್ತಿದ್ದು, ಮಾಸಿಕ 400-500 ರೋಗಿಗಳು ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡುತ್ತಿದ್ದರು. ಅಂದಾಜು 10-15 ರೋಗಿಗಳನ್ನು ಪತ್ತೆ ಹಚ್ಚಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ಹೆಚ್ಚಿನ ಮಹತ್ವ ನೀಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಚೇರಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಸಾರ್ವಜನಿಕ ಆಸ್ಪತ್ರೆ ಪ್ರೋತ್ಸಾಹದಿಂದ ಶಾಹಿ ಎಕ್ಸ್ ಪೋರ್ಟ್ ಪ್ರೈ.ಲಿ ಬೆಂಗಳೂರುರವರ ಸಹಕಾರದಿಂದ ಅತ್ಯಾಧುನಿಕ ಕ್ಷಯ ರೋಗ ಪತ್ತೆಹಚ್ಚುವ ಸಿಬಿನ್ಯಾಟ್ ( ಜೀನ್ ಎಕ್ಸಪರ್ಟ್ ) ಯಂತ್ರವನ್ನು ಇದೀಗ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ.

ಅಂದಾಜು ರು.20 ಲಕ್ಷ ಮೊತ್ತದ ನೂತನ ಸಂಪೂರ್ಣ ಸ್ವಯಂಚಾಲಿತ ಕಾರ್ಟ್ರಿಡ್ಜ್ ಆಧಾರಿತ ನ್ಯೂಕ್ಲಿಯಿಕ್ ಆಮ್ಲ ವರ್ಧನೆ ಪರೀಕ್ಷೆ (CBNAAT) ಅತ್ಯಾಧುನಿಕ ಯಂತ್ರವನ್ನು ಕ್ಷಯ ರೋಗ ನಿರ್ಣಯಕ್ಕೆ ಬಳಸಿಕೊಳ್ಳಲಾಗುತ್ತದೆ. ಕೇವಲ 2 ಗಂಟೆಗಳಲ್ಲಿ ಸಂಸ್ಕರಿಸಿದ ಕಫ ಮಾದರಿಯಿಂದ ಫಲಿತಾಂಶ ಪಡೆಯಲಾಗುತ್ತದೆ. ಇದರಿಂದಾಗಿ ರೋಗಿಗಳ ಆರಂಭಿಕ ಪತ್ತೆ ಮತ್ತು ಚಿಕಿತ್ಸೆಯಲ್ಲಿ ಹೆಚ್ಚಿನ ರೀತಿಯಲ್ಲಿ ಸಹಕಾರಿಯಾಗಲಿದೆ.

ತಾಲೂಕಿನಲ್ಲಿನ 22 ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ರೋಗಿಗಳ ಕಫ ಮಾದರಿಯನ್ನು ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಕಳುಹಿಸದೆ, ಕ್ಷಿಪ್ರಗತಿಯಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿ ರೋಗ ಪತ್ತೆ ಹಚ್ಚಿ ಕೂಡಲೇ ಚಿಕಿತ್ಸೆ ನೀಡಿ ಸಂಪೂರ್ಣ ಕ್ಷಯ ರೋಗ ನಿಯಂತ್ರಣಕ್ಕೆ ನೂತನ ಯಂತ್ರದಿಂದ ಪ್ರಯೋಜನವಾಗಲಿದೆ.

ಮಂಗಳವಾರ ಸಂಸದ ರಾಘವೇಂದ್ರ ನೂತನ ಯಂತ್ರೋಪಕರಣ ಘಟಕವನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಶಾಹಿ ಎಕ್ಸ್‌ಪೋರ್ಟ್ ಪ್ರೈ.ಲಿ ನ ಹಿರಿಯ ಅಧಿಕಾರಿ ಪ್ರಶಾಂತ್, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಅರುಣ್ ಕುಮಾರ್, ಸರ್ಜನ್ ಡಾ.ಶ್ರೀನಿವಾಸ್, ಡಾ.ಶಿವಾನಂದ್, ಡಾ.ಮಾರುತಿ, ಡಾ.ಬಸವ ಕುಲಾಲ್, ಡಾ.ರಾಕೇಶ್ ಸಹಿತ ಆಸ್ಪತ್ರೆಯ ವೈದ್ಯ ಸಿಬ್ಬಂದಿ, ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ ಮುಖಂಡ ಸುಧೀರ್, ಸುನಂದ ಮಂಜುನಾಥ್ ಮತ್ತಿತರರು ಹಾಜರಿದ್ದರು.

PREV

Recommended Stories

ವಾಟರ್‌ ಬಾಟಲ್‌ ತಯಾರಿಸಲು ಬೆಂಗಳೂರು ಜಲಮಂಡಳಿ ಸಿದ್ಧತೆ: ಶೀಘ್ರ ಮಾರುಕಟ್ಟೆಗೆ ಲಭ್ಯ
ತಾಯಿಯಿಂದಲೇ 3 ದಿನದ ಶಿಶು ಉಸಿರುಗಟ್ಟಿಸಿ ಕೊಲೆ