ಮಂಗಳೂರು: ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ (ಎನ್‌ಎಂಪಿಎ) ಸರಕು ನಿರ್ವಹಣಾ ಮೂಲಸೌಕರ್ಯ ಬಲವರ್ಧನೆ ಹಾಗೂ ಕ್ರೂಸ್ ಪ್ರಯಾಣಿಕರಿಗೆ ಆಧುನಿಕ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಒಟ್ಟು ₹ 9.48 ಕೋಟಿ ವೆಚ್ಚದ ಎರಡು ಪ್ರಮುಖ ಯೋಜನೆಗಳನ್ನು ಶುಕ್ರವಾರ ಉದ್ಘಾಟಿಸಲಾಯಿತು.ನವ ಮಂಗಳೂರು ಬಂದರು ಪ್ರಾಧಿಕಾರ ಹಾಗೂ ದೀನದಯಾಳ್ ಬಂದರು ಪ್ರಾಧಿಕಾರದ ಅಧ್ಯಕ್ಷ ಸುಶೀಲ್ ಕುಮಾರ್ ಸಿಂಗ್ ಅವರು ನೂತನ ಸರಕು ಸಂಗ್ರಹಣಾ ಶೆಡ್ ಮತ್ತು ನವೀಕರಿಸಿದ ಅಂತಾರಾಷ್ಟ್ರೀಯ ಕ್ರೂಸ್ ಲೌಂಜ್‌ಗೆ ಚಾಲನೆ ನೀಡಿದರು.
ಸರಕುಗಳಿಗೆ ಮಳೆ ಸೇರಿದಂತೆ ಹವಾಮಾನ ವೈಪರೀತ್ಯಗಳಿಂದ ರಕ್ಷಣೆ ಒದಗಿಸುವುದರ ಜತೆಗೆ ಸಂಗ್ರಹಣೆ ಮತ್ತು ನಿರ್ವಹಣಾ ದಕ್ಷತೆ ಹೆಚ್ಚಿಸಲು ಈ ಸೌಲಭ್ಯ ಸಹಕಾರಿಯಾಗಲಿದೆ. ಹೆಚ್ಚುತ್ತಿರುವ ವ್ಯಾಪಾರ ಬೇಡಿಕೆಯನ್ನು ಪೂರೈಸುವುದರೊಂದಿಗೆ ಬಂದರಿನಲ್ಲಿ ಹೊಸ ಸರಕುಗಳ ನಿರ್ವಹಣೆಗೂ ಇದು ಅವಕಾಶ ಕಲ್ಪಿಸಲಿದೆ.
ಇದೇ ವೇಳೆ ₹ 83.26 ಲಕ್ಷ ವೆಚ್ಚದಲ್ಲಿ ನವೀಕರಿಸಲಾದ ಎನ್‌ಎಂಪಿಎ ಅಂತಾರಾಷ್ಟ್ರೀಯ ಕ್ರೂಸ್ ಲೌಂಜ್ ಕೂಡ ಉದ್ಘಾಟಿಸಲಾಯಿತು. ಸುಮಾರು 18 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಲೌಂಜ್‌ನ್ನು ಅಂತಾರಾಷ್ಟ್ರೀಯ ಕ್ರೂಸ್ ಪ್ರಯಾಣಿಕರು ಹಾಗೂ ವಿದೇಶಿ ಪ್ರವಾಸಿಗರಿಗೆ ಆಧುನಿಕ ಮತ್ತು ಆರಾಮದಾಯಕ ವಾತಾವರಣ ಕಲ್ಪಿಸುವ ಉದ್ದೇಶದಿಂದ ಸಮಗ್ರವಾಗಿ ನವೀಕರಿಸಲಾಗಿದೆ.2,582 ಚದರ ಮೀಟರ್ ವಿಸ್ತೀರ್ಣದ ಪ್ರದೇಶದಲ್ಲಿ ನವೀಕರಣ ಕಾಮಗಾರಿ ಕೈಗೊಳ್ಳಲಾಗಿದ್ದು, ಹೆಚ್ಚುವರಿಯಾಗಿ 432 ಚದರ ಮೀಟರ್ ವಿಸ್ತರಣೆ ಮಾಡಲಾಗಿದೆ. ಹೊಸ ವಿಟ್ರಿಫೈಡ್ ಟೈಲ್ಸ್ ನೆಲಹಾಸು, ಅಲ್ಯೂಮಿನಿಯಂ ಕಾಂಪೋಸಿಟ್ ಪ್ಯಾನೆಲ್ ಹೊದಿಕೆ ಹಾಗೂ ಫಾಲ್ಸ್ ಸೀಲಿಂಗ್ ಅಳವಡಿಸಲಾಗಿದೆ.ಈ ಎರಡೂ ಯೋಜನೆಗಳು ಬಂದರಿನ ಸರಕು ನಿರ್ವಹಣಾ ಸಾಮರ್ಥ್ಯ ಹೆಚ್ಚಿಸುವುದು, ಆಮದು-ರಫ್ತು ವ್ಯಾಪಾರಕ್ಕೆ ಉತ್ತೇಜನ ನೀಡುವುದು ಹಾಗೂ ಕ್ರೂಸ್ ಪ್ರವಾಸೋದ್ಯಮಕ್ಕೆ ಪೂರಕ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿವೆ.