ಹೊಸ ಮೆನು: ಬಿ.ಸಿ.ರೋಡಿನ ಇಂದಿರಾ ಕ್ಯಾಂಟೀನ್‌ಗೆ ಮತ್ತೆ ಬೇಡಿಕೆ

KannadaprabhaNewsNetwork | Published : Jul 15, 2024 1:47 AM

ಸಾರಾಂಶ

ಈ ಇಂದಿರಾ ಕ್ಯಾಂಟೀನ್ ಆರಂಭಿಸಲು ಉತ್ಸಾಹ ತೋರಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದ್ದು, ಉದ್ಘಾಟನೆ ವೇಳೆ ಹಾಲಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಶಾಸಕರಾಗಿದ್ದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಬಿ.ಸಿ.ರೋಡು ಮಿನಿ ವಿಧಾನಸೌಧ ಬಳಿ ಭಾರೀ ರಾಜಕೀಯ ವಿವಾದಗಳ ನಡುವೆ ಕಳೆದ ಆರು ವರ್ಷಗಳ ಹಿಂದೆ ಆರಂಭಗೊಂಡಿದ್ದ ‘ಇಂದಿರಾ ಕ್ಯಾಂಟೀನ್’ ಇದೀಗ ಹೊಸ ಮೆನು ಜೊತೆಗೆ ಜನಾಕರ್ಷಣೆ ಪಡೆಯುತ್ತಿದೆ. ಈ ಹಿಂದೆ ಕೇವಲ 5 ರು.ಗೆ ಬೆಳಗ್ಗೆ ಮತ್ತು ಸಂಜೆ ತಿಂಡಿ, 10 ರು.ಗೆ ಮಧ್ಯಾಹ್ನ ಅನ್ನ ಸಾಂಬಾರ್ ನೀಡುತ್ತಿದ್ದ ಇಂದಿರಾ ಕ್ಯಾಂಟೀನ್ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರದಲ್ಲಿ ಒಂದೂವರೆ ವರ್ಷ ದಾಟುತ್ತಿದ್ದಂತೆಯೇ ಆಯಾಯ ಜಿಲ್ಲೆಗೆ ತಕ್ಕಂತೆ ಜು.1ರಿಂದ ‘ಹೊಸ ಮೆನು’ ಜಾರಿಗೊಳಿಸಿದೆ.

ಮೆನು ಹೀಗಿದೆ: ಸೋಮವಾರ: ನೀರು ದೋಸೆ ಚಟ್ನಿ ಮತ್ತು ಇಡ್ಲಿ ಸಾಂಬಾರು, ಮಂಗಳವಾರ: ಇಡ್ಲಿ ಸಾಂಬಾರು ಮತ್ತು ಸಜ್ಜಿಗೆ -ಅವಲಕ್ಕಿ, ಬುಧವಾರ: ಇಡ್ಲಿ ಸಾಂಬಾರು ಮತ್ತು ಪುಂಡಿ ಗಸಿ, ಗುರುವಾರ: ಇಡ್ಲಿ ಸಾಂಬಾರು ಮತ್ತು ಪುಲಾವ್, ಶುಕ್ರವಾರ: ಇಡ್ಲಿ ಸಾಂಬಾರು ಮತ್ತು ಕಡ್ಲೆ- ಅವಲಕ್ಕಿ, ಶನಿವಾರ: ಇಡ್ಲಿ ಸಾಂಬಾರು ಮತ್ತು ಬನ್ಸ್, ಭಾನುವಾರ: ಇಡ್ಲಿ ಸಾಂಬಾರು ಮತ್ತು ಕ್ಷೀರ ಸಿಗುತ್ತಿದೆ.

ಬೆಳಗ್ಗೆ ಗಂಟೆ 7ರಿಂದ 10 ಗಂಟೆತನಕ ಮತ್ತು ಸಂಜೆ ಗಂಟೆ 5ರಿಂದ 7 ಗಂಟೆತನಕ ಬಿಸಿ ಬಿಸಿ ತಿಂಡಿ ಕೇವಲ ರು. 5ಗೆ ಇಲ್ಲಿ ಸಿಗುತ್ತಿದೆ.

ಮಧ್ಯಾಹ್ನ ಗಂಟೆ 12.30ರಿಂದ 3 ಗಂಟೆ ತನಕ ಚಪಾತಿ ಸಹಿತ ಊಟ ಸಿಗುತ್ತಿದೆ. ಈ ಹಿಂದೆ 10 ರು.ಗೆ ಕುಚಲಕ್ಕಿ ಅನ್ನ ಸಾಂಬಾರು ಜೊತೆಗೆ ಉಪ್ಪಿನಕಾಯಿ ಮತ್ತು ಪಲ್ಯ ಸಿಗುತ್ತಿತ್ತು. ಇದೀಗ 10 ರು. ಊಟದ ಜೊತೆಗೆ ಹೆಚ್ಚುವರಿ ರು. 10 ಪಾವತಿಸಿದರೆ ಎರಡು ಚಪಾತಿ ಮತ್ತು ಬಟಾಟೆ ಬಾಜಿಯೂ ಸಿಗುತ್ತಿದೆ.

ಈ ನಡುವೆ ಸೋಮವಾರ, ಗುರುವಾರ ಮತ್ತು ಶನಿವಾರ ಊಟದ ಜೊತೆಗೆ ಪಾಯಸವೂ ಸಿಗುತ್ತಿರುವುದು ಗ್ರಾಹಕರಲ್ಲಿ ಸಂತಸ ಮೂಡಿಸಿದೆ.

ಗ್ರಾಹಕರ ಸಂಖ್ಯೆ ಹೆಚ್ಚಳ: ಕಳೆದ ಐದಾರು ವರ್ಷಗಳಲ್ಲಿ ಕೇವಲ 200 ಮಂದಿ ಮಾತ್ರ ತಿಂಡಿ ಮತ್ತು ಊಟಕ್ಕೆ ಬರುತ್ತಿದ್ದು, ಈ ಪೈಕಿ ರಿಕ್ಷಾ ಚಾಲಕರು ಮತ್ತು ಕೂಲಿ ಕಾರ್ಮಿಕರು ಗರಿಷ್ಠ ಸಂಖ್ಯೆಯಲ್ಲಿದ್ದರು. ಜು.1ರಿಂದ 250-300 ಮಂದಿ ಬರುತ್ತಿದ್ದಾರೆ. ಇದರಿಂದಾಗಿ ಚಪಾತಿ ಬೇಗನೆ ಖಾಲಿಯಾಗುತ್ತಿದೆ. ಇದೀಗ ವಿವಿಧ ಇಲಾಖೆಗಳಿಗೆ ಬರುವ ಗ್ರಾಮೀಣ ಜನರು ಮಾತ್ರವಲ್ಲದೆ ಅಲ್ಲಿನ ಸಿಬ್ಬಂದಿ ಮತ್ತು ಅಧಿಕಾರಿಗಳು ಕೂಡಾ ಬರುತ್ತಿದ್ದಾರೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ ಆನಂದ ಪೂಜಾರಿ ಮತ್ತು ಅಬ್ದುಲ್ ರಝಾಕ್.‌

ಪ್ರಸ್ತುತ ಇಲ್ಲಿ ಜಯಪೂಜಾರಿ, ಚಂದ್ರಾವತಿ, ಆನಂದ ಪೂಜಾರಿ, ಅಬ್ದುಲ್‌ರಝಾಕ್‌ ಮತ್ತು ರೇಣುಕಾ ಕಾರ್ಯನಿರ್ವಹಿಸುತ್ತಿದ್ದಾರೆ.

ಬೇಡಿಕೆ: ಕಳೆದ ಐದಾರು ವರ್ಷಗಳಿಂದಲೂ ಕೇವಲ ನಾಲ್ಕು ಮಂದಿ ಸಿಬ್ಬಂದಿ ಮಾತ್ರ ಇದ್ದೇವೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿಯೂ ರಜೆ ಹಾಕದೆ ನಿಷ್ಠೆಯಿಂದ ದುಡಿದಿದ್ದೇವೆ. ಇದೀಗ ಗ್ರಾಹಕರು ಹೆಚ್ಚಾದಂತೆ ಸಿಬ್ಬಂದಿ ಹೆಚ್ಚಳವೂ ಅಗತ್ಯವಿದೆ. ಇಲ್ಲಿನ ಫ್ರಿಜ್ ಕೆಟ್ಟು ಎರಡು ವರ್ಷ ಕಳೆದರೂ ದುರಸ್ತಿಗೊಳಿಸಿಲ್ಲ. ನಮಗೆ ವೇತನ ಹೆಚ್ಚಳದ ಜೊತೆಗೆ ಆರೋಗ್ಯ ವಿಮೆ, ಪಿಂಚಣಿ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಈಚೆಗಷ್ಟೇ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಅಡುಗೆ ಸಿಬ್ಬಂದಿ ಜಯ ಪೂಜಾರಿ ಮತ್ತು ಚಂದ್ರಾವತಿ ಅಳಲು ತೋಡಿಕೊಂಡಿದ್ದಾರೆ.

ಈ ಇಂದಿರಾ ಕ್ಯಾಂಟೀನ್ ಆರಂಭಿಸಲು ಉತ್ಸಾಹ ತೋರಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದ್ದು, ಉದ್ಘಾಟನೆ ವೇಳೆ ಹಾಲಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಶಾಸಕರಾಗಿದ್ದರು.

Share this article