ಕನ್ನಡಪ್ರಭ ವಾರ್ತೆ ಮಳವಳ್ಳಿ
ನೂತನ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರು ಕಾವೇರಿ ನದಿ ನೀರಿನ ಹಂಚಿಕೆ ಸಮಸ್ಯೆ ಬಗೆಹರಿಸುವ ಜೊತೆಗೆ ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಲು ಶ್ರಮಿಸಲಿದ್ದಾರೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಹೇಳಿದರು.ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರಿನ ಸಮಸ್ಯೆ ರಾಜರ ಕಾಲದಿಂದ ಇಲ್ಲಿಯವರೆವಿಗೂ ಮುಂದುವರೆದುಕೊಂಡು ಬರುತ್ತಿದೆ. ಕೇಂದ್ರ ಸರ್ಕಾರದ ಮಂತ್ರಿಯಾಗುವ ಕುಮಾರಸ್ವಾಮಿ ಅವರು ಕಾವೇರಿ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದರು.
ಮಂಡ್ಯ, ರಾಮನಗರ, ಚನ್ನಪಟ್ಟಣ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮೇಕೆದಾಟು ಯೋಜನೆ ಮುಂದುವರಿಯಲು ಅನುಮತಿ ಕೊಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.ಮಳವಳ್ಳಿ ತಾಲೂಕು ಎರಡು ರಾಷ್ಟ್ರೀಯ ಹೆದ್ದಾರಿ ಹೊಂದಿರುವುದರ ಜೊತೆಗೆ ಬೆಂಗಳೂರು- ಮೈಸೂರಿಗೆ ಹತ್ತಿರದಲ್ಲೇ ಇರುವುದರಿಂದ ವ್ಯಾಪಾರಕ್ಕೆ ಸೂಕ್ತ ಸ್ಥಳವಾಗಿದೆ. ಆದ್ದರಿಂದ ರೈಲ್ವೆ ಯೋಜನೆ ಜಾರಿಗೆ ತರಬೇಕೆಂದು ಕೋರಿದರು.
1996ರಲ್ಲಿ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ಬೆಂಗಳೂರು- ಕನಕಪುರ- ಮಳವಳ್ಳಿ ಮಾರ್ಗವಾಗಿ ಸತ್ಯಮಂಗಲ ಹೋಗಲು ರೈಲೈ ಯೋಜನೆ ಮಂಜೂರು ಮಾಡಿರುವುದು ಇತಿಹಾಸ. ಸಂಸತ್ ಸದಸ್ಯರಾಗಿದ್ದ ವೇಳೆ ಸರ್ವೆ ಕಾರ್ಯವು ಸಂಪೂರ್ಣವಾಗಿ ಮುಗಿದಿದೆ. ಈ ರೈಲ್ವೆ ಯೋಜನೆ ತರಬೇಕಾಗಿರುವುದು ಬಹಳ ಮುಖ್ಯವಾಗಿದೆ ಎಂದರು.ಕಾಕತಾಳೀಯ ಎಂಬಂತೆ ದೇವೇಗೌಡರ ಪುತ್ರರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಸಂಸತ್ ಸದಸ್ಯರಾಗಿ ಬಂದಿದ್ದಾರೆ. ರೈಲ್ವೆ ಯೋಜನೆಗೆ ಹಣ ಬಿಡುಗಡೆಗೊಳಿಸಿ ಕಾಮಗಾರಿ ತಕ್ಷಣದಲ್ಲಿಯೇ ಆರಂಭಿಸಬೇಕೆಂದು ತಾಲೂಕಿನ ಜನರ ಪರವಾಗಿ ಒತ್ತಾಯಿಸುತ್ತೇನೆ ಎಂದರು.
ಮಳವಳ್ಳಿ ತಾಲೂಕಿನಲ್ಲಿ ಕಾವೇರಿ, ಮಾಧವ ಮಂತ್ರಿ, ಶಿಂಷಾ ಸೇರಿದಂತೆ ಹಲವು ನದಿಗಳು ಹರಿಯುತ್ತಿವೆ. ಬಹುತೇಕ ಕಾಲುವೆಗಳು ಹೂಳುತುಂಬಿ ನೀರು ಕೊನೆ ಭಾಗಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಸಂಸದರು ನಾಲಾ ಆಧುನೀಕರಣಕ್ಕೆ ಹೆಚ್ಚು ಒತ್ತು ಕೊಟ್ಟು ನೀರಿನ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ತಿಳಿಸಿದರು.ಲೋಕಸಭೆ ಹಾಗೂ ಶಿಕ್ಷಕ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಅಭೂತ ಪೂರ್ವ ಗೆಲುವು ಸಾಧಿಸಲು ಕಾರಣಕರ್ತರಾದ ಮತದಾರರಿಗೆ ಹಾಗೂ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯರಾದ ನಂದಕುಮಾರ್, ಪ್ರಶಾಂತ್, ಸಿದ್ದರಾಜು, ರವಿ, ಮುಖಂಡರಾದ ಹನುಮಂತು, ಸಿದ್ದಚಾರಿ, ನಾಗರಾಜು, ಸದಾನಂದ್, ಕಾಂತರಾಜು, ಪ್ರಭು, ಕಂಬರಾಜು, ಬಿಜೆಪಿ ಪಟ್ಟಣದ ಅಧ್ಯಕ್ಷ ವೇಣು,ಪದ್ಮಮ್ಮ ಸೇರಿದಂತೆ ಇತರರು ಇದ್ದರು.