‘ಕಾಂಗ್ರೆಸ್‌ನಿಂದ ಗೆದ್ದಿರುವ ಮೂರು ಮಂದಿ ರಾಜ್ಯಸಭೆ ಸಭೆ ಸದಸ್ಯರು ತೆರಿಗೆ ಪಾಲು ಕಡಿತ, ವಿಶೇಷ ಅನುದಾನ ನಿರಾಕರಣೆ, ಅಭಿವೃದ್ದಿ ಯೋಜನೆಗಳಿಗೆ ದೊರಕದ ಅನುದಾನ ಸೇರಿದಂತೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯಗಳ ವಿರುದ್ಧ ರಾಜ್ಯಸಭೆಯಲ್ಲಿ ಧ್ವನಿ ಎತ್ತಲಿದ್ದಾರೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ, ಬೆಂಗಳೂರು
‘ಕಾಂಗ್ರೆಸ್‌ನಿಂದ ಗೆದ್ದಿರುವ ಮೂರು ಮಂದಿ ರಾಜ್ಯಸಭೆ ಸಭೆ ಸದಸ್ಯರು ತೆರಿಗೆ ಪಾಲು ಕಡಿತ, ವಿಶೇಷ ಅನುದಾನ ನಿರಾಕರಣೆ, ಅಭಿವೃದ್ದಿ ಯೋಜನೆಗಳಿಗೆ ದೊರಕದ ಅನುದಾನ ಸೇರಿದಂತೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯಗಳ ವಿರುದ್ಧ ರಾಜ್ಯಸಭೆಯಲ್ಲಿ ಧ್ವನಿ ಎತ್ತಲಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ರಾಜ್ಯಸಭೆಗೆ 4 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜಯಗಳಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳಾದ ಅಜಯ್ ಮಾಕನ್, ನಾಸಿರ್ ಹುಸೇನ್ ಹಾಗೂ ಜಿ.ಸಿ. ಚಂದ್ರಶೇಖರ್ ಅವರಿಗೆ ಅಭಿನಂದನೆಗಳು.
ಅವರು ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ರಾಜ್ಯಸಭೆಯಲ್ಲಿ ಧ್ವನಿಯೆತ್ತಿ, ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಲು ಶ್ರಮಿಸುತ್ತಾರೆ. ಅವರೆಲ್ಲರ ಗೆಲುವಿನಿಂದ ನಾಡಿನ ನ್ಯಾಯದ ಕೂಗಿಗೆ ಬಲ ಬಂದಿದೆ’ ಎಂದಿದ್ದಾರೆ.
ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದನೇ ಅಭ್ಯರ್ಥಿ ಕಣಕ್ಕಿಳಿಸಲು ಅವರ ಬಳಿ ಇರುವುದೇ 19 ಮತ. ನಮ್ಮ ಎಲ್ಲಾ ಶಾಸಕರು ನಿಷ್ಠೆಯಿಂದ ಕಾಂಗ್ರೆಸ್ ಪರವಾಗಿ ಮತ ಹಾಕಿದ್ದೇವೆ.
ಜೆಡಿಎಸ್ ಐದನೇ ಅಭ್ಯರ್ಥಿಯನ್ನು ನಿಲ್ಲಿಸಿದ್ದರಿಂದ ನಾವೆಲ್ಲ ಒಟ್ಟಿಗೆ ಇದ್ದು ಮತ ಹಾಕಬೇಕಾಯಿತು. ನಮ್ಮ ಶಾಸಕರಿಗೆ ಆಸೆ ಆಮಿಷಗಳನ್ನು ಒಡ್ಡುವುದು ಬೆದರಿಕೆ ಹಾಕುವುದನ್ನು ಮಾಡುತ್ತಿದ್ದರು. ಅದಕ್ಕೆ ಎಲ್ಲರೂ ಒಟ್ಟಿಗಿದ್ದು ಮತ ಚಲಾಯಿಸಿದ್ದೇವೆ ಎಂದು ಹೇಳಿದರು.
ಜೆಡಿಎಸ್ಗೆ ಆತ್ಮಸಾಕ್ಷಿ ಎನ್ನುವುದೇ ಇಲ್ಲ. ಜೆಡಿಎಸ್ ಎಂದು ಹೆಸರಿಟ್ಟುಕೊಂಡು ಬಿಜೆಪಿ ಜೊತೆ ಸೇರಿರುವವರಿಗೆ ಆತ್ಮ ಎಲ್ಲಿದೆ? ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.