ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ಪುರಸಭೆಯ 2024 -25 ರ ಆಯ ವ್ಯಯ ಮಂಡನೆಯಾಗಿದ್ದು 9 ಲಕ್ಷ 23 ಸಾವಿರ ರು.ಗಳ ಉಳಿತಾಯ ಬಜೆಟ್‌ನ್ನು ಮಡಿಕೇರಿ ಉಪ ವಿಭಾಗಾಧಿಕಾರಿ ಹಾಗೂ ಕುಶಾಲನಗರ ಪುರಸಭೆ ಆಡಳಿತ ಅಧಿಕಾರಿಯಾಗಿರುವ ವಿನಾಯಕ ನಾರ್ವಡೆ ಮಂಡಿಸಿದರು.
ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ಗ್ರಂಥಾಲಯದ ಕಟ್ಟಡ ನಿರ್ಮಾಣಕ್ಕಾಗಿ ಸಿ.ಎ. ನಿವೇಶನವನ್ನು ಒದಗಿಸಿ ತಾಲೂಕು ಗ್ರಂಥಾಲಯ ನಿರ್ಮಿಸಲು ಉದ್ದೇಶ ಗೊಂದಲಾಗಿದೆ ಎಂದು ವಿನಾಯಕ ನಾರ್ವಡೆ ತಿಳಿಸಿದ್ದಾರೆ.
ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಸಮುದಾಯ ಭವನಗಳನ್ನು ಅಭಿವೃದ್ಧಿಪಡಿಸಲು ಒಂದು ಕೋಟಿ , ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ವಾಣಿಜ್ಯ ಕಟ್ಟಡಕ್ಕೆ ಮೂರು ಕೋಟಿ ರೂಪಾಯಿ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.ಸ್ಮಶಾನ ಅಭಿವೃದ್ಧಿಗಾಗಿ 30 ಲಕ್ಷ ರು., ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಲಭ್ಯವಿರುವ ಜಾಗಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು 50 ಲಕ್ಷ ರು. ಮೀಸಲಿರಿಸಲಾಗಿದೆ ಎಂದು ಹೇಳಿದ ಉಪವಿಭಾಗಾಧಿಕಾರಿಗಳು ಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಿ ಆದ್ಯತೆ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಪ್ರದೇಶಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ಆದ್ಯ ಕರ್ತವ್ಯವಾಗಿದ್ದು ರಸ್ತೆ ನೀರು ಚರಂಡಿ ನೈರ್ಮಲ್ಯ ಬೀದಿ ದೀಪ ವ್ಯವಸ್ಥೆ ಯೊಂದಿಗೆ ಈಗಿನ ಪರಿಸ್ಥಿತಿಗೆ ಅನುಗುಣ ವಾಗಿ ವೈಜ್ಞಾನಿಕ ಕೆಲಸ ಮಾಡಲಾಗುವುದು ಎಂದು ಬಜೆಟ್ ಮಂಡನೆ ಸಂದರ್ಭ ಹೇಳಿದರು.ತೆರಿಗೆ ಸಂಗ್ರಹಕ್ಕೆ ಶ್ರಮ: ಪುರಸಭೆಯನ್ನು ಆರ್ಥಿಕವಾಗಿ ಸದೃಢಗೊಳಿಸುವುದು, ಅದಕ್ಕೆ ತಕ್ಕ ಆದಾಯ ಮೂಲಗಳಾದ ತೆರಿಗೆ ಸಂಗ್ರಹ ಮತ್ತು ಅನುದಾನವನ್ನು ಪಡೆಯುವಲ್ಲಿ ಎಲ್ಲಾ ಶ್ರಮ ವಹಿಸಲಾಗುವುದು ಎಂದು ತಿಳಿಸಿದ ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್, ಬಜೆಟ್ ಒಳಗೊಂಡು ಬರುವ ಆದಾಯಗಳಲ್ಲಿ ಆಸ್ತಿ ತೆರಿಗೆ ವಾಣಿಜ್ಯ ಮಳಿಗೆ ಬಾಡಿಗೆ ಉದ್ದಿಮೆ ಪರವಾನಗಿ ಮಾರುಕಟ್ಟೆ ಬಾಡಿಗೆಗಳು ಹಾಗೂ ಇತರೆ ಶುಲ್ಕಗಳು ಮತ್ತು ಸರ್ಕಾರದಿಂದ ಬಿಡುಗಡೆಯಾಗುವ ಅನುದಾನಗಳು, ಹಣಕಾಸು ಆಯೋಗದ ಅನುದಾನ ಎಸ್ ಎಫ್ ಸಿ ವಿಶೇಷ ಅನುದಾನ ಇವೆಲ್ಲವನ್ನು ಅಂದಾಜಿಸಿ ಪಟ್ಟಣದ ಬಡಾವಣೆಗಳಲ್ಲಿ ಚರಂಡಿ ನಿರ್ಮಾಣ, ಬೀದಿ ದೀಪ ಅಳವಡಿಕೆ , ನೀರು ವಿತರಣಾ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ, ವಾಣಿಜ್ಯ ಮಳಿಗಳ ನಿರ್ಮಾಣ, ಸ್ಥಿರಾಸ್ತಿ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಹೇಳಿದರು.
ಪುರಸಭೆ ಸದಸ್ಯರಾದ ಡಿ ಕೆ ತಿಮ್ಮಪ್ಪ, ಪ್ರಮೋದ್ ಮುತ್ತಪ್ಪ, ಜಯ ವರ್ಧನ್, ಅಮೃತರಾಜ್, ರೇಣುಕಾ ಮತ್ತಿತರರು ಈ ಬಗ್ಗೆ ಮಾತನಾಡಿ ಬಜೆಟ್ ನಲ್ಲಿ ಪೌರ ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ, ನದಿ ಸಂರಕ್ಷಣೆ, ಸ್ವಚ್ಛತೆಗೆ ಆದ್ಯತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.ಪುರಸಭೆಯ ಎಲ್ಲಾ ಸದಸ್ಯರು ಹಾಗೂ ಅಧಿಕಾರಿ ಸಿಬ್ಬಂದಿ ವರ್ಗ ಸಭೆಯಲ್ಲಿ ಪಾಲ್ಗೊಂಡಿದ್ದರು.