ಕನ್ನಡಪ್ರಭ ವಾರ್ತೆ ಬೆಳಗಾವಿ

ಗ್ರಾಮೀಣ ಬಡ ಕುಟುಂಬಗಳಿಗೆ ಉದ್ಯೋಗ ಭದ್ರತೆ ಕಲ್ಪಿಸುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಆ್ಯಂಡ್‌ ಅಜೀವಿಕ ಮಿಶನ್ (ಗ್ರಾಮೀಣ) ಕಾಯ್ದೆ-2025 ವಿಬಿ-ಜಿ ರ‍್ಯಾಮ್ ಜಿ ಯೋಜನೆಯ ಸೌಲಭ್ಯವನ್ನು ಎಲ್ಲ ಅರ್ಹ ಕುಟುಂಬಗಳು ಪಡೆಯಬೇಕು ಎಂದು ಖಾನಾಪೂರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಮೇತ್ರಿ ಹೇಳಿದರು.

ಜುಲೈ 1, 2026ರಿಂದ ಯೋಜನೆಯಡಿ ಕೂಲಿಕಾರರ ದಿನಗೂಲಿ ₹370 ರಿಂದ ₹382ಕ್ಕೆ ಏರಿಕೆಯಾಗಿದೆ. ದಿನಕ್ಕೆ ₹12 ಹೆಚ್ಚಳವಾಗಿದೆ. ಇದರಿಂದ ಸಾವಿರಾರು ಕೂಲಿಕಾರರ ಆದಾಯ ಹೆಚ್ಚಲಿದೆ. ಹಣಕಾಸು ವರ್ಷದಲ್ಲಿ ಕೆಲಸದ ದಿನಗಳನ್ನು 100 ರಿಂದ 125ಕ್ಕೆ ಹೆಚ್ಚಿಸಲಾಗಿದೆ. ಕೇಂದ್ರ ಶೇಕಡಾ 60, ರಾಜ್ಯ ಶೇಕಡಾ 40 ಅನುದಾನ ನೀಡಲಿದೆ. ಜಲ ಸಂರಕ್ಷಣೆ, ಮಳೆನೀರು ಕೊಯ್ಲು, ಶಾಲೆ ಅಭಿವೃದ್ಧಿ, ಅಂಗನವಾಡಿ, ಕೆರೆ-ಹಳ್ಳ ಪುನಶ್ಚೇತನ, ಗಿಡ ನೆಡುವುದು, ಗ್ರಾಮೀಣ ರಸ್ತೆ, ಚರಂಡಿ ನಿರ್ಮಾಣ ಸೇರಿ ಸಮುದಾಯ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಕುರಿ ಶೆಡ್, ದನದ ಕೊಟ್ಟಿಗೆ, ಕೃಷಿ ಹೊಂಡ, ರೇಷ್ಮೆ, ತೋಟಗಾರಿಕೆ ಬೆಳೆಗಳಂತಹ ವೈಯಕ್ತಿಕ ಕಾಮಗಾರಿಗಳಿಗೂ ಅವಕಾಶವಿದೆ. ಸೌಲಭ್ಯ ಪಡೆಯಲು ಜಾಬ್ ಕಾರ್ಡ್ ಕಡ್ಡಾಯ. ಇಲ್ಲದವರು ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಬಹುದು. ಕೆಲಸದ ಬೇಡಿಕೆ ಸಲ್ಲಿಸಿದ ನಿಗದಿತ ಅವಧಿಯಲ್ಲಿ ಉದ್ಯೋಗ ನೀಡಲಾಗುತ್ತದೆ. ಈ ಯೋಜನೆ ಶಾಶ್ವತ ಆಸ್ತಿ ನಿರ್ಮಾಣ, ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಹಾಗೂ ಗ್ರಾಮೀಣ ಆರ್ಥಿಕತೆ ಸದೃಢೀಕರಣಕ್ಕೆ ಸಹಕಾರಿ. ಹೆಚ್ಚಿನ ಮಾಹಿತಿಗೆ ಗ್ರಾಮ ಪಂಚಾಯತಿ ಅಥವಾ ಖಾನಾಪೂರ ತಾಲೂಕು ಪಂಚಾಯತಿ ಕಚೇರಿ ಸಂಪರ್ಕಿಸಿ ಎಂದು ಮೇತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.