ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರವು ಜು.8 ರಂದು ಮುಂಬೈನ ವಿಧಾನಭವನದಲ್ಲಿ ಉನ್ನತಾಧಿಕಾರ ಸಮಿತಿ ಸಭೆ ನಡೆಸುತ್ತಿದ್ದು, ಗಡಿ ಭಾಗದಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಜೂ.30 ರಂದು ನಡೆಯಬೇಕಿದ್ದು ಈ ಸಭೆಯನ್ನು ಅನಿವಾರ್ಯ ಕಾರಣಗಳಿಂದ ಈಗ ಜು.8 ರಂದು ಮುಂದೂಡಲಾಗಿದೆ.

ಬೆಳಗಾವಿಯ ಮರಾಠ ಮಂದಿರದಲ್ಲಿ ಎಂಇಎಸ್ ಅಧ್ಯಕ್ಷ ಪ್ರಕಾಶ ಮರಗಾಳೆ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ಬಂದ ಪತ್ರವನ್ನು ಪ್ರಧಾನ ಕಾರ್ಯದರ್ಶಿ ಮಾಳೋಜಿ ಅಷ್ಟೇಕರ್ ಸಭೆ ಗಮನ ತಂದಿದ್ದಾರೆ. ಜು.8ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರು, ಹಿರಿಯ ಅಧಿಕಾರಿಗಳು, ತಜ್ಞರ ಸಮಿತಿ ಸದಸ್ಯರು ಹಾಗೂ ಎಂಇಎಸ್ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.ಒಂದು ವರ್ಷದಿಂದ ಒತ್ತಡ:

ಗಡಿ ವಿವಾದದ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ಹಲವು ವರ್ಷಗಳಿಂದ ಬಾಕಿ ಇರುವ ಹಿನ್ನೆಲೆಯಲ್ಲಿ ಅದಕ್ಕೆ ವೇಗ ನೀಡಲು ಉನ್ನತಾಧಿಕಾರ ಸಮಿತಿ ಸಭೆ ಕರೆಯಬೇಕು ಎಂದು ಎಂಇಎಸ್ ಕಳೆದ ಒಂದು ವರ್ಷದಿಂದ ಮಹಾರಾಷ್ಟ್ರ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುತ್ತಿತ್ತು. ಈ ಸಂಬಂಧ ಆಡಳಿತ ಹಾಗೂ ಪ್ರತಿಪಕ್ಷ ನಾಯಕರಿಗೆ ಹಲವು ಬಾರಿ ಪತ್ರ ಬರೆದು ಸಭೆ ಕರೆಯುವಂತೆ ಮನವಿ ಮಾಡಲಾಗಿತ್ತು. ಅದರ ಪರಿಣಾಮವಾಗಿ ಮಹಾರಾಷ್ಟ್ರ ಸರ್ಕಾರ ಈಗ ಸಭೆ ಕರೆದಿದೆ.ಬೆಳಗಾವಿ ಸೇರಿದಂತೆ ಗಡಿ ಭಾಗಗಳು ಕರ್ನಾಟಕದ ಅವಿಭಾಜ್ಯ ಅಂಗಗಳಾಗಿವೆ ಎಂಬುದು ಕರ್ನಾಟಕದ ಸ್ಪಷ್ಟ ಮತ್ತು ಅಚಲ ನಿಲುವಾಗಿದೆ. ಭಾಷಾವಾರು ಪ್ರಾಂತ್ಯ ಪುನರ್‌ರಚನೆಯ ಬಳಿಕ ಬೆಳಗಾವಿ ಜಿಲ್ಲೆ ಸೇರಿದಂತೆ ಗಡಿ ಪ್ರದೇಶಗಳು ಕಾನೂನುಬದ್ಧವಾಗಿ ಕರ್ನಾಟಕದ ಭಾಗವಾಗಿವೆ. ಆಡಳಿತಾತ್ಮಕ, ಐತಿಹಾಸಿಕ, ಸಾಂಸ್ಕೃತಿಕ ಮತ್ತು ಭಾಷಿಕವಾಗಿ ಈ ಪ್ರದೇಶಗಳು ಕರ್ನಾಟಕದೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ.ಗಡಿ ವಿವಾದ ಕುರಿತು ರಚಿಸಲ್ಪಟ್ಟ ಮಹಾಜನ್ ಆಯೋಗವೂ ಬೆಳಗಾವಿ ಸೇರಿದಂತೆ ಬಹುತೇಕ ವಿವಾದಿತ ಪ್ರದೇಶಗಳು ಕರ್ನಾಟಕದಲ್ಲಿಯೇ ಉಳಿಯಬೇಕು ಎಂದು ಶಿಫಾರಸು ಮಾಡಿತ್ತು. ಕರ್ನಾಟಕವು ಮಹಾಜನ್ ವರದಿಯನ್ನು ಅಂತಿಮವೆಂದು ಪರಿಗಣಿಸಿದ್ದು, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಮತ್ತು ಗಡಿ ವಿವಾದ ಮುಗಿದ ಅಧ್ಯಾಯ ಎಂಬ ನಿಲುವನ್ನು ಪುನರುಚ್ಚರಿಸುತ್ತಲೇ ಬಂದಿದೆ.ಬೆಳಗಾವಿ ಕರ್ನಾಟಕದ ಎರಡನೇ ರಾಜಧಾನಿಯಾಗಿ ಬೆಳೆದಿದೆ. ಸುವರ್ಣ ವಿಧಾನಸೌಧ ನಿರ್ಮಾಣದ ನಂತರ ರಾಜ್ಯದ ಆಡಳಿತಾತ್ಮಕ ಚಟುವಟಿಕೆಗಳಿಗೆ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ. ಕೈಗಾರಿಕೆ, ಶಿಕ್ಷಣ, ವಾಣಿಜ್ಯ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಗಮನಾರ್ಹ ಪ್ರಗತಿ ಕಂಡಿರುವ ಈ ಭಾಗದಲ್ಲಿ ಮತ್ತೆ ಮತ್ತೆ ಗಡಿ ವಿವಾದವನ್ನು ಕೆದಕುವ ಪ್ರಯತ್ನಗಳು ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತಿವೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.ಕರ್ನಾಟಕದಲ್ಲಿ ಗಡಿ ಉಸ್ತುವಾರಿ ಸಚಿವರೇ ಇಲ್ಲ:


ಈ ಮಧ್ಯೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಗಡಿ ಉಸ್ತುವಾರಿ ಸಚಿವರೇ ಇಲ್ಲದಿರುವುದು ಗಡಿ ಭಾಗದ ಕನ್ನಡಿಗರಲ್ಲಿ ಆತಂಕ ಮೂಡಿಸಿದೆ. ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರನ್ನು ನೇಮಕ ಮಾಡಲಾಗಿದ್ದರೂ, ಆಯೋಗದ ಚಟುವಟಿಕೆಗಳು ನೆಲಮಟ್ಟದಲ್ಲಿ ಕಾಣುತ್ತಿಲ್ಲ ಎಂಬ ಟೀಕೆ ಕೇಳಿಬರುತ್ತಿದೆ.ಈ ಹಿಂದೆ ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷರಾಗಿದ್ದ ಶಿವರಾಜ ಪಾಟೀಲ ರಾಜೀನಾಮೆ ನೀಡಿದ ಬಳಿಕ ಗಡಿ ಪ್ರಶ್ನೆ ಕುರಿತಾಗಿ ರಾಜ್ಯ ಸರ್ಕಾರದ ಸ್ಪಷ್ಟ ಕಾರ್ಯತಂತ್ರ ಏನು ಎಂಬ ಪ್ರಶ್ನೆ ಉದ್ಭವಿಸಿದೆ. ಮತ್ತೊಂದೆಡೆ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿ ಕಾರ್ಯನಿರ್ವಹಿಸುತ್ತಿದ್ದು, ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಉಸ್ತುವಾರಿ ವ್ಯವಸ್ಥೆಯೂ ಇದೆ. ಇದರಿಂದ ಗಡಿ ಭಾಗದ ಕನ್ನಡಿಗರಲ್ಲಿ ನಮ್ಮ ಪರವಾಗಿ ಮಾತನಾಡುವವರು ಯಾರು? ಎಂಬ ಪ್ರಶ್ನೆ ಎದುರಾಗಿದೆ.ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಜು.8 ರಂದು ಉನ್ನತಾಧಿಕಾರ ಸಮಿತಿ ಸಭೆ ಕರೆದಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಕರ್ನಾಟಕ ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಕೂಡಲೇ ಕಾನೂನು ತಜ್ಞರು, ಹಿರಿಯ ಕನ್ನಡ ಹೋರಾಟಗಾರರು ಮತ್ತು ಗಡಿ ಭಾಗದ ಜನಪ್ರತಿನಿಧಿಗಳ ಸಭೆ ಕರೆದು ಮುಂದಿನ ಕಾರ್ಯತಂತ್ರ ರೂಪಿಸಬೇಕು.

-ಅಶೋಕ ಚಂದರಗಿ,

ಹಿರಿಯ ಕನ್ನಡ ಹೋರಾಟಗಾರಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಇರುವುದನ್ನು ನೆಪ ಮಾಡಿಕೊಂಡು ಎಂಇಎಸ್ ಪದೇ ಪದೇ ಗಡಿ ಪ್ರಶ್ನೆಯನ್ನು ಜೀವಂತವಾಗಿಡಲು ಯತ್ನಿಸುತ್ತಿದೆ. ಆದರೆ ಬೆಳಗಾವಿ ಸೇರಿದಂತೆ ಗಡಿ ಪ್ರದೇಶಗಳು ಕರ್ನಾಟಕದ ಅವಿಭಾಜ್ಯ ಅಂಗ ಎಂಬುದು ಐತಿಹಾಸಿಕ ಸತ್ಯ. ಮಹಾಜನ್ ವರದಿಯನ್ನು ಜಾರಿಗೊಳಿಸಿ ಈ ಅನಗತ್ಯ ವಿವಾದಕ್ಕೆ ಶಾಶ್ವತ ತೆರೆ ಎಳೆಯಬೇಕು.

-ದೀಪಕ ಗುಡಗನಟ್ಟಿ,
ಜಿಲ್ಲಾಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ).