ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರಪಂಚದಲ್ಲಿಯೇ ಭಾರತೀಯರು ಮಾತನಾಡುವ ಇಂಗ್ಲಿಷ್‌ ಭಾಷೆ ಪರಿಪೂರ್ಣ ಹಾಗೂ ಪರಿಶುದ್ಧ ಎಂದು ಪರಿಗಣಿತವಾಗಿದೆ ಎಂದು ಮುಖ್ಯ ಅತಿಥಿ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗದ ಮುಖ್ಯಸ್ಥ ಹಾಗೂ ಮೌಲ್ಯಮಾಪನ ಉಪಕುಲಸಚಿವ ಡಾ.ದೀಪಕ ಶಿಂಧೆ ಅಭಿಪ್ರಾಯಪಟ್ಟರು.

ನಗರದ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ವ್ಯವಹಾರ ಅಧ್ಯಯನ ಕಾಲೇಜಿನ ಆಶ್ರಯದಲ್ಲಿ ನಡೆದ ಇಂಗ್ಲಿಷ್‌ ಗ್ರಾಮರ್‌ ಸ್ಕೂಲ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಂಗ್ಲಿಷ್ ಭಾಷೆ ಅಂತಾರಾಷ್ಟ್ರೀಯ ಭಾಷೆಯಾಗಿದ್ದು, ಇಂದು ಎಲ್ಲ ರಂಗಗಳಲ್ಲಿ ಅದರ ಉಪಯೋಗವಾಗುತ್ತಿದೆ. ಕನ್ನಡ, ಉರ್ದು, ಮರಾಠಿ ಹಾಗೂ ಇತರ ಮಾತೃಭಾಷೆಯ ಮಕ್ಕಳು ಪರಿಶ್ರಮ ಪಟ್ಟರೆ ಇಂಗ್ಲಿಷ್‌ ಮಾಧ್ಯಮದ ಮಕ್ಕಳಿಗಿಂತಲೂ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯ. ಗ್ರಾಮೀಣ ವಿದ್ಯಾರ್ಥಿಗಳು ಕೀಳರಿಮೆ ಹಾಗೂ ಹಿಂಜರಿಕೆ ಬಿಟ್ಟು ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಅವರು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷರಿಗೆ ಕಿವಿಮಾತು ಹೇಳಿದರು.

ನಿವೃತ್ತ ಇಂಗ್ಲಿಷ್‌ ಪ್ರಾಧ್ಯಾಪಕ ಹಾಗೂ ಪ್ರಾಚಾರ್ಯ ಪ್ರೊ.ಮನೋಜ ಕೊಟ್ನಿಸ್ ಹಾಗೂ ಪ್ರೊ. ಸುಜಾತಾ ಕಟ್ಟಿಮನಿ ಇಂಗ್ಲಿಷ್‌ ಭಾಷೆಯ ಮಹತ್ವ ವಿವರಿಸಿದರು. ಸಿಕ್ಯಾಬ್ ಸಂಸ್ಥೆಯ ಕಾರ್ಯದರ್ಶಿ ಎ.ಎಸ್. ಪಾಟೀಲ, ಸಿಕ್ಯಾಬ್ ಸಂಸ್ಥೆಯ ಅಧ್ಯಕ್ಷ ಎಸ್.ಎಸ್. ಪುಣೇಕರ, ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಪದ್ಮಾ ಅಲಬಾಳ, ಪ್ರಾಚಾರ್ಯ ಡಾ.ಎಚ್.ಕೆ. ಯಡಹಳ್ಳಿ ಮಾತನಾಡಿದರು.

ವೇದಿಕೆಯಲ್ಲಿ ಸಿಕ್ಯಾಬ್ ಪಿ.ಯು ಕಾಲೇಜುಗಳ ಡೀನ್ ಪ್ರೊ. ಎನ್.ಎಸ್. ಭೂಸನೂರ, ಪ್ರೊ.ಬಸವರಾಜ ಥೋರಟ, ಪ್ರೊ.ವಿದ್ಯಾವತಿ ಬೆಣ್ಣೂರ ಇದ್ದರು. ಪ್ರೊ.ನಾಜಿಮಾ ಪಠಾಣ ಸ್ವಾಗತಿಸಿದರು. ಪ್ರೊ.ಶಬೀನಾ ಪಟೇಲ ಪರಿಚಯಿಸಿದರು. ಪ್ರೊ.ಸುಶ್ಮಿತಾ ಆಕಾಶಿ ನಿರೂಪಿಸಿದರು. ಪ್ರೊ.ಅಬ್ದುಲ್‌ರಜಾಕ ಅರಳಿಮಟ್ಟಿ ವಂದಿಸಿದರು.