ಬೆಳಗಾವಿಯ ಮಚ್ಚೆ ಕೈಗಾರಿಕಾ ವಲಯದಲ್ಲಿರುವ ಪೊಜಿಸ್ಟ್ರಾನ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಗುರುವಾರ ಅಗ್ನಿ ಅವಘಡ ಸಂಭವಿಸಿದರೆ ಹೇಗೆ ರಕ್ಷಣಾ ಕಾರ್ಯಾಚರಣೆ ನಡೆಸಬೇಕು ಎಂಬ ಕುರಿತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಎಸ್‌ಡಿಆರ್‌ಎಫ್‌, ಸಿವಿಲ್ ಡಿಫೆನ್ಸ್ ಹಾಗೂ ಹೋಮ್ ಗಾರ್ಡ್ಸ್ ಸಿಬ್ಬಂದಿ ಜಂಟಿಯಾಗಿ ಸಾಹಸಮಯ ಅಣಕು ಪ್ರದರ್ಶನ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿಯ ಮಚ್ಚೆ ಕೈಗಾರಿಕಾ ವಲಯದಲ್ಲಿರುವ ಪೊಜಿಸ್ಟ್ರಾನ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಗುರುವಾರ ಅಗ್ನಿ ಅವಘಡ ಸಂಭವಿಸಿದರೆ ಹೇಗೆ ರಕ್ಷಣಾ ಕಾರ್ಯಾಚರಣೆ ನಡೆಸಬೇಕು ಎಂಬ ಕುರಿತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಎಸ್‌ಡಿಆರ್‌ಎಫ್‌, ಸಿವಿಲ್ ಡಿಫೆನ್ಸ್ ಹಾಗೂ ಹೋಮ್ ಗಾರ್ಡ್ಸ್ ಸಿಬ್ಬಂದಿ ಜಂಟಿಯಾಗಿ ಸಾಹಸಮಯ ಅಣಕು ಪ್ರದರ್ಶನ ನಡೆಸಿದರು.

ಅಣಕು ಪ್ರದರ್ಶನದ ಆರಂಭದಲ್ಲೇ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಸನ್ನಿವೇಶ ಸೃಷ್ಟಿಸಲಾಯಿತು. ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರನ್ನು ರಕ್ಷಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದರು. ಎಸ್‌ಡಿಆರ್‌ಎಫ್‌, ಹೋಮ್ ಗಾರ್ಡ್ಸ್ ಹಾಗೂ ಸಿವಿಲ್ ಡಿಫೆನ್ಸ್ ತಂಡಗಳ ಸಹಕಾರದೊಂದಿಗೆ ಗಾಯಾಳುಗಳನ್ನು ಸುರಕ್ಷಿತವಾಗಿ ಹೊರತೆಗೆದು, ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸುವ ಪ್ರಾತ್ಯಕ್ಷಿಕೆ ನೀಡಲಾಯಿತು.ಕಾರ್ಖಾನೆಯಲ್ಲಿ ಅಳವಡಿಸಲಾಗಿರುವ ಸ್ಮೋಕ್ ಡಿಟೆಕ್ಟರ್, ಹೈಡ್ರೆಂಟ್ ವ್ಯವಸ್ಥೆ ಹಾಗೂ ಹೋಸ್ ರೀಲ್‌ಗಳನ್ನು ಬಳಸಿಕೊಂಡು ಬೆಂಕಿಯನ್ನು ನಿಯಂತ್ರಿಸುವ ವಿಧಾನವನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಲಾಯಿತು. ಬೆಂಕಿ ಕಾಣಿಸಿಕೊಂಡ ತಕ್ಷಣ ಯಾವ ಕ್ರಮಗಳನ್ನು ಕೈಗೊಳ್ಳಬೇಕು? ಸುರಕ್ಷಿತವಾಗಿ ಹೊರಬರುವ ಮಾರ್ಗಗಳು ಯಾವುವು? ರಕ್ಷಣಾ ತಂಡಗಳಿಗೆ ಹೇಗೆ ಸಹಕರಿಸಬೇಕು ಎಂಬ ಬಗ್ಗೆ ಕಾರ್ಮಿಕರಿಗೆ ಸಮಗ್ರ ಮಾಹಿತಿ ನೀಡಲಾಯಿತು.ಈ ವೇಳೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಂಗನಾಥ್ ಮಾತನಾಡಿ, ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ನಿರ್ದೇಶನದಂತೆ ರಾಜ್ಯದ 30 ಜಿಲ್ಲೆಗಳಲ್ಲಿ ಒಂದೇ ದಿನ ಅಗ್ನಿ ಅನಾಹುತಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಅಣಕು ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಕೈಗಾರಿಕೆಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳು, ಶಾಲಾ-ಕಾಲೇಜುಗಳು ಹಾಗೂ ಆಸ್ಪತ್ರೆಗಳಲ್ಲಿ ಸಂಭವಿಸುವ ಅಗ್ನಿ ಅವಘಡಗಳಿಂದ ಜೀವಹಾನಿ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮಗಳು ಮತ್ತು ರಕ್ಷಣಾ ಕಾರ್ಯಾಚರಣೆಗಳ ಕುರಿತು ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.ಗೃಹರಕ್ಷಕ ದಳದ ಡೆಪ್ಯುಟಿ ಕಮಾಂಡೆಂಟ್ ಕಾಂಬಳೆ ಮಾತನಾಡಿ, ಕಮಾಂಡೆಂಟ್ ನಾಗೇಶ್ ಯಡಾಲ್ ಅವರ ನಿರ್ದೇಶನದಂತೆ ಜುಲೈ 2ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಈ ಅಣಕು ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ. ಅದರ ಭಾಗವಾಗಿ ಬೆಳಗಾವಿಯಲ್ಲಿ ಜಿಲ್ಲಾ ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್‌, ಸಿವಿಲ್ ಡಿಫೆನ್ಸ್ ಹಾಗೂ ಹೋಮ್ ಗಾರ್ಡ್ಸ್ ಸಿಬ್ಬಂದಿ ಜಂಟಿಯಾಗಿ ಈ ಮಾಕ್ ಡ್ರಿಲ್ ನಡೆಸಿದ್ದಾರೆ. ಅಗ್ನಿ ಅವಘಡ ಅಥವಾ ನೈಸರ್ಗಿಕ ವಿಕೋಪ ಸಂಭವಿಸಿದಾಗ ರಕ್ಷಣಾ ಪಡೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಕಾರ್ಮಿಕರಿಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದರು.ಕಂಪನಿಯ ಪ್ರಮುಖ ವೀರಭದ್ರ ಹೆಬ್ಬಳ್ಳಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಲೇಕ್‌ವ್ಯೂ ಆಸ್ಪತ್ರೆಯ ವೈದ್ಯಕೀಯ ತಂಡ ಆಂಬ್ಯುಲೆನ್ಸ್ ವ್ಯವಸ್ಥೆಯೊಂದಿಗೆ ಪಾಲ್ಗೊಂಡಿತ್ತು. ಸಮಾಜ ಸೇವಕ ಸತೀಶ ಕುಲಕರ್ಣಿ, ಕಂಪನಿಯ ಹಿರಿಯ ಅಧಿಕಾರಿಗಳು, ಸೇಫ್ಟಿ ವಿಭಾಗದ ಮುಖ್ಯಸ್ಥರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.