ಕಾರವಾರ: ಛಾಯಾಚಿತ್ರ ಕೇವಲ ಹವ್ಯಾಸವಲ್ಲ, ಬದುಕಿನ ಹಾದಿ ಎಂಬ ನಂಬಿಕೆಯನ್ನು ನೆಲೆಯಾಗಿ ಮಾಡಿಕೊಂಡು ಕಾರವಾರ ತಾಲೂಕು ಛಾಯಾಚಿತ್ರಕಾರರ ಹಾಗೂ ವಿಡಿಯೋಚಿತ್ರಕಾರರ ನೂತನ ಸಂಘದ ಉದ್ಘಾಟನಾ ಸಮಾರಂಭ ಕಾರವಾರದ ಬಾಡ ಶಿವಾಜಿ ಹಾಲ್‌ನಲ್ಲಿ ಅದ್ಧೂರಿಯಾಗಿ ಜರುಗಿತು.
ಉದ್ಘಾಟಕರಾಗಿ ಆಗಮಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ ಸಂಘವನ್ನು ಉದ್ಘಾಟಿಸಿ, ಛಾಯಾಗ್ರಾಹಕರ ಬದುಕಿನ ಸವಾಲು ಮತ್ತು ಅವಕಾಶಗಳ ಕುರಿತು ಸವಿಸ್ತಾರವಾಗಿ ಮಾತನಾಡಿದರು.ಛಾಯಾಗ್ರಹಣವೆಂಬ ಕಲೆ ಸಮಾಜದ ಪ್ರತಿ ಕ್ಷಣವನ್ನು ಶಾಶ್ವತಗೊಳಿಸುವ ಶಕ್ತಿ ಹೊಂದಿದೆ. ನಿಮ್ಮ ಸಂಘಟನೆಗೆ ನನ್ನಿಂದ ಯಾವತ್ತೂ ಸಹಕಾರ ಇರುತ್ತದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೇಕರ ಉಪಸ್ಥಿತರಿದ್ದರು. ಮುಖ್ಯ ಅತಿಥಿಯಾಗಿ ವಿನಾಯಕ ಕೆ. ಜೋಶಿ, ಸರೋಜಾ ಬಾಳಾ ದೇಸಾಯಿ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ನರೇಂದ್ರ ದೇಸಾಯಿ, ಕಾರ್ಮಿಕ ನಿರೀಕ್ಷಕ ವೆಂಕಟೇಶ ಬಾಬು, ರವೀಂದ್ರ ಕಲಾ ಮಹಾವಿದ್ಯಾಲಯದ ನಿವೃತ್ತ ಉಪನ್ಯಾಸಕರಾದ ಜೋನ್ ಹಾಗೂ ಪರ್ಭತ್ ಎಸ್. ನಾಯ್ಕ ಪಾಲ್ಗೊಂಡು ನೂತನ ಸಂಘಕ್ಕೆ ಶುಭ ಹಾರೈಸಿದರು.186ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ 5 ವರ್ಷದೊಳಗಿನ ಮಕ್ಕಳಿಗಾಗಿ “ಮುದ್ದು ಕೃಷ್ಣ” ಸ್ಪರ್ಧೆ ಆಯೋಜಿಸಲಾಯಿತು. ಸಣ್ಣ ಮಕ್ಕಳ ಹನಿಗನಸು ಮುಖ ಮತ್ತು ನವಿಲು ನೃತ್ಯದಂತೆ ತೇಲಿದ ಆಕರ್ಷಕ ವೇಷಭೂಷಣವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ವಿಜೇತರಾದ ಮಕ್ಕಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ 10 ಮಂದಿಗೆ ಸಮಾಧಾನಕರ ಬಹುಮಾನಗಳನ್ನು ಗಣ್ಯರು ನೀಡಿದರು.
ತಾಲೂಕಿನ ಐದು ಹಿರಿಯ ಛಾಯಾಗ್ರಾಹಕರಾದ ಬಸೀರ್ ದಾವೂದ ಶೇಖ (ಸದಾಶಿವಗಡ), ರಾಜೇಶ ನಾಯ್ಕ (ಸದಾಶಿವಗಡ), ಲಕ್ಷ್ಮೀಕಾಂತ ಮುರಾರಿ ರೇವಂಡಿಕರ (ಕೋಡಿಬಾಗ), ಚೇತನ ದಿಲೀಪ ಬಾನಾವಳಿ (ಸದಾಶಿವಗಡ) ಹಾಗೂ ಶ್ರೀಕಾಂತ ಹರಿಶ್ಚಂದ್ರ ನಾಯ್ಕ (ಉಳಗಾ) ಅವರಿಗೆ ಸನ್ಮಾನ ಮಾಡಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವನಿತಾ ರಾಜೇಶ ನಿರೂಪಿಸಿದರು.