ಮಂಗಳೂರು: ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡ ಶಾಸಕ ಬಿ.ಎಸ್.ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ಮತ್ತು ವಿಜಯೇಂದ್ರ ಜೊತೆಯಾಗಿಯೇ ಪಕ್ಷವನ್ನು ಮರಳಿ ರಾಜ್ಯದಲ್ಲಿ ಅಧಿಕಾರಕ್ಕೆ ತರುವಲ್ಲಿ ಶ್ರಮಿಸುತ್ತೇವೆ ಎಂದು ನಿರ್ಗಮನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಶುಕ್ರವಾರ ಮಂಗಳೂರಿನಲ್ಲಿ ಸುದ್ದಿಗಾರರಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಅವರು ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ನಮ್ಮ ಜತೆ ಪ್ರವಾಸ ಮಾಡುತ್ತಿದ್ದವರು. ಯುವ ಮೋರ್ಚಾ ರಾಜ್ಯಾಧ್ಯಕ್ಷರಾಗಿಯೂ ಓಡಾಟ ನಡೆಸಿದ ಅನುಭವಿ. ಅವರು ಉತ್ತಮ ರೀತಿಯಲ್ಲಿ ಪಕ್ಷ ಸಂಘಟಿಸಿ ಬಿಜೆಪಿಯನ್ನು ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ತರುವಲ್ಲಿ ಶ್ರಮಿಸುತ್ತಾರೆ. ನಾನೂ ಅವರ ಜತೆಯಲ್ಲಿ ರಾಜ್ಯ ಓಡಾಟ ನಡೆಸುತ್ತೇವೆ ಎಂದಿದ್ದಾರೆ.ವಿಜಯೇಂದ್ರ ಆಯ್ಕೆಯಿಂದ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಿದೆ. ಕಾಂಗ್ರೆಸ್ ಪಕ್ಷದ ಆಡಳಿತ ವೈಫಲ್ಯಗಳು ಕಂಡುಬರುತ್ತಿವೆ. ಕಳೆದ ಆರು ತಿಂಗಳ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಈ ಎಲ್ಲದರ ವಿರುದ್ಧ ಹೋರಾಟ ಕೈಗೆತ್ತಿಕೊಂಡು ಪಾರ್ಟಿಯನ್ನು ತಳಮಟ್ಟದಿಂದ ಮತ್ತೆ ಸಂಘಟನೆ ಮಾಡುವ ಶಕ್ತಿ ವಿಜಯೇಂದ್ರಗೆ ಇದೆ. ಕಳೆದ ನಾಲ್ಕು ವರ್ಷ ಅವಧಿಯಲ್ಲಿ ರಾಜ್ಯಧ್ಯಕ್ಷನಾಗಿ ತೃಪ್ತಿ ಇದೆ ಎಂದರು.
ರಾಜಕೀಯದಿಂದ ನಿವೃತ್ತಿ ಪಡೆಯುತ್ತೀರಾ ಎಂಬ ಪ್ರಶ್ನೆಗೆ ನಳಿನ್ ಕುಮಾರ್ ನಕ್ಕು ಸುಮ್ಮನಾದರು.