ಸಗಟು ಈರುಳ್ಳಿ ಬೆಲೆ ಕುಸಿತ, ನಷ್ಟ ಅನುಭವಿಸುತ್ತಿರುವ ರೈತ

KannadaprabhaNewsNetwork | Published : Nov 11, 2023 1:15 AM

ಸಾರಾಂಶ

ಗದಗ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿಂದಾಗಿ ಈರುಳ್ಳಿ ಸಂಪೂರ್ಣ ಹಾಳಾಗಿದ್ದು, ಉಳಿದಿರುವ ಅಲ್ಪ ಸ್ವಲ್ಪ ಈರುಳ್ಳಿಯನ್ನು ಮಾರಾಟಕ್ಕೆ ತಂದಿರುವ ಜಿಲ್ಲೆಯ ರೈತರಿಗೆ ಈಗ ಬೆಲೆ ಕುಸಿತದ ಸಂಕಟ ಕಾಡುತ್ತಿದೆ.

ಶಿವಕುಮಾರ ಕುಷ್ಟಗಿ

ಕನ್ನಡಪ್ರಭ ವಾರ್ತೆ ಗದಗ

ದೇಶಾದ್ಯಂತ ಈರುಳ್ಳಿ ತನ್ನ ಬೆಲೆ ಹೆಚ್ಚಳದಿಂದಾಗಿ ಸುದ್ದಿಯಲ್ಲಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಜಿಲ್ಲೆಯಾಗಿರುವ ಗದಗ ಜಿಲ್ಲೆಯ ರೈತರಿಗೆ ಮಾತ್ರ ಬೆಲೆ ಹೆಚ್ಚಳದ ಲಾಭ ಲಭಿಸುತ್ತಿಲ್ಲ.

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿಂದಾಗಿ ಈರುಳ್ಳಿ ಸಂಪೂರ್ಣ ಹಾಳಾಗಿದ್ದು, ಉಳಿದಿರುವ ಅಲ್ಪ ಸ್ವಲ್ಪ ಈರುಳ್ಳಿಯನ್ನು ಮಾರಾಟಕ್ಕೆ ತಂದಿರುವ ಜಿಲ್ಲೆಯ ರೈತರಿಗೆ ಈಗ ಬೆಲೆ ಕುಸಿತದ ಸಂಕಟ ಕಾಡುತ್ತಿದೆ.

ಸಗಟು ದರದಲ್ಲಿ ಭಾರಿ ಕುಸಿತ: ಈರುಳ್ಳಿ ದರದಲ್ಲಿ ವ್ಯಾಪಕ ಹೆಚ್ಚಳವಾಗಿದ್ದು, ಗ್ರಾಹಕರು ಪ್ರತಿ ಕೆಜಿಗೆ 70 ರಿಂದ 80 ರುಪಾಯಿಗೆ ಖರೀದಿಸುವಂತಾಗಿದೆ. ಆದರೆ ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ಸಗಟು ಈರುಳ್ಳಿ ಪ್ರತಿ ಕ್ವಿಂಟಾಲ್‌ಗೆ ಗರಿಷ್ಠ ₹ 4 ಸಾವಿರದವರೆಗೆ ಮಾರಾಟವಾಗುತ್ತಿದೆ. ಇದರಿಂದಾಗಿ ಉತ್ತಮ ಬೆಲೆ ನಿರೀಕ್ಷೆಯೊಂದಿಗೆ ಮಾರುಕಟ್ಟೆಗೆ ಬಂದ ರೈತನಿಗೆ ನಿರಾಸೆಯಾಗುತ್ತಿದೆ.

ಬಿತ್ತನೆಯಲ್ಲಿ ಹೆಚ್ಚಳ: ಗದಗ ಜಿಲ್ಲೆ ಈರುಳ್ಳಿ ಬೆಳೆಯಲು ಹೇಳಿ ಮಾಡಿಸಿದಂತ ಕಪ್ಪು ಮಣ್ಣಿನ ಭೂಮಿಯನ್ನು ಹೊಂದಿದ್ದು, ಪ್ರತಿ ವರ್ಷ 2 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಆಗುತ್ತಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಮುಂಗಾರು ಕೊರತೆಯಿಂದಾಗಿ ಜಿಲ್ಲೆಯಲ್ಲಿ ಕೇವಲ 27 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಈರುಳ್ಳಿ ಬಿತ್ತನೆಯಾಗಿತ್ತು. ಸದ್ಯ ಕಟಾವಿಗೆ ಬಂದಿರುವ ಅಲ್ಪ ಈರುಳ್ಳಿಯನ್ನು ರೈತರು ಪ್ರಸ್ತುತ ದರದಲ್ಲಿ ಮಾರಾಟ ಮಾಡದಂತಾ ಸ್ಥಿತಿ ನಿರ್ಮಾಣವಾಗಿದೆ.

ಇಬ್ಬರ ಕಣ್ಣಲ್ಲಿಯೂ ನೀರು: ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಈರುಳ್ಳಿ ನೂರು ರುಪಾಯಿ ಸನಿಹದಲ್ಲಿ ಮಾರಾಟವಾಗುತ್ತಿದೆ. ಸಹಜವಾಗಿಯೇ ಕೊಳ್ಳುವ ಗ್ರಾಹಕರ ಕಣ್ಣಲ್ಲಿ ನೀರು ಬರುತ್ತಿದೆ. ಉತ್ತಮ ಬೆಲೆ ಆಸೆಯೊಂದಿಗೆ ತಮ್ಮ ಈರುಳ್ಳಿ ಮಾರಾಟಕ್ಕೆ ತರುವ ರೈತರಿಗೆ ಸಗಟು ದರದಲ್ಲಿನ ಕುಸಿತ ರೈತರ ಕಣ್ಣಲ್ಲಿಯೂ ನೀರು ತರಿಸುತ್ತಿದೆ. ರೈತ ಮತ್ತು ಗ್ರಾಹಕ ಇಬ್ಬರನ್ನು ಸಂಕಷ್ಟಕೀಡು ಮಾಡಿರುವ ಈರುಳ್ಳಿಯ ದರ ಹೆಚ್ಚಳದ ಲಾಭ ಮಧ್ಯವರ್ತಿಗಳ ಪಾಲಾಗುತ್ತಿದೆ.

ಮಳೆ ಕೊರತೆ ಮಧ್ಯೆ ಈರುಳ್ಳಿ ಬಿತ್ತನೆ ಮಾಡಿದ್ದ ರೈತರು ತಮ್ಮ ಜಮೀನುಗಳ ಪಕ್ಕದಲ್ಲಿನ ಹಳ್ಳಗಳು, ಕೃಷಿ ಪಂಪ್ ಸೆಟ್‌ಗಳು ಹಾಗೂ ಇರುವ ಅಲ್ಪ ನೀರಾವರಿ ಸೌಲಭ್ಯದ ಮೂಲಕ ಈರುಳ್ಳಿ ಬೆಳೆದಿದ್ದಾರೆ. ಪ್ರತಿ ಎಕರೆಗೆ 15ರಿಂದ 20 ಸಾವಿರ ಖರ್ಚು ಕೂಡಾ ಮಾಡಿಕೊಂಡಿದ್ದಾರೆ. ಮಳೆ ಕೊರತೆಯಿಂದಾಗಿ ಇಳುವರಿಯಲ್ಲಿಯೂ ತೀವ್ರ ಕುಸಿತವಾಗಿದ್ದು ಪ್ರತಿ ಎಕರೆಗೆ ಸರಾಸರಿ 5 ಕ್ವಿಂಟಲ್ ಮಾತ್ರ ಬರುತ್ತಿದೆ. ಇದರಿಂದಾಗಿ ಈರುಳ್ಳಿ ಬೆಳೆದ ರೈತನಿಗೆ ಬೆಳೆಗಾಗಿ ಮಾಡಿದ ಖರ್ಚು ಕೂಡಾ ಮರಳಿ ಬರದಂತಾಗಿದೆ.

ಮಳೆಯು ಕಾರಣವಂತೆ: ಕಳೆದ ನಾಲ್ಕೈದು ತಿಂಗಳಿಂದ ಮಾಯವಾಗಿದ್ದ ಮಳೆ, ಮೂರು ದಿನಗಳಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮವಾಗಿ ಸುರಿದಿದೆ. ಸುರಿದಿರುವ ಮಳೆ ಕೂಡಾ ಮಾರಾಟಕ್ಕೆ ಸಿದ್ಧವಾಗಿದ್ದ ಈರುಳ್ಳಿಯನ್ನು ನೆನೆಸಿದ್ದು, ಈ ಹಿನ್ನೆಲೆಯಲ್ಲಿ ದರದಲ್ಲಿ ಕುಸಿತವಾಗುತ್ತಿದೆ. ಗುಣಮಟ್ಟದ ಈರುಳ್ಳಿ, ಮಾರಾಟಕ್ಕೆ ಬರುತ್ತಿಲ್ಲ ಹಾಗಾಗಿ ಸಗಟು ದರದಲ್ಲಿಯೂ ಕೂಡ ಕುಸಿತವಾಗಿದೆ. ಈಗಲೂ ಉತ್ತಮ ಈರುಳ್ಳಿಗೆ ಉತ್ತಮ ಬೆಲೆ ಇದೆ ಎನ್ನುತ್ತಾರೆ ವ್ಯಾಪಾರಸ್ಥರು.

ನಾವು ವರ್ಷಪೂರ್ತಿ ಕಷ್ಟಪಟ್ಟು ವಿದ್ಯುತ್ ಕೊರತೆ ಮಧ್ಯೆ ರಾತ್ರಿಯಲ್ಲಾ ಕಾಯ್ದು ಈರುಳ್ಳಿ ಹೊಲಗಳಿಗೆ ನೀರು ಹಾಯಿಸಿದ್ದೇವೆ. ನಿರೀಕ್ಷಿಸಿದಷ್ಟು ಇಳುವರಿಯೂ ಬಂದಿಲ್ಲ. ಆದರೆ ಮಾರುಕಟ್ಟೆಯಲ್ಲಿ ಸದ್ಯ ಉತ್ತಮ ಬೆಲೆ ಇದೆ ಎಂದು ಈರುಳ್ಳಿ ಮಾರಾಟಕ್ಕೆ ತಂದರೆ ಇಲ್ಲಿಯೂ ರೇಟ್ ಕುಸಿದು ಹೋಗಿದೆ. ಪ್ರತಿ ವರ್ಷವೂ ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರ ಈರುಳ್ಳಿ‌ ಮಾರಾಟಕ್ಕೆ ಬರುತ್ತಿದ್ದಂತೆ ದರದಲ್ಲಿ ಭಾರೀ ಕುಸಿತವಾಗುತ್ತಿದೆ. ಈ ಬಗ್ಗೆ ಎಪಿಎಂಸಿ ಅಧಿಕಾರಿಗಳು, ಸರ್ಕಾರ ಗಮನ ಹರಿಸಬೇಕಿದೆ ಎಂದು ನಾಗಸಮುದ್ರದ ರೈತ ಸುರೇಶ್ ಹೇಳುತ್ತಾರೆ.

Share this article