ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್, ಮೈಸೂರು ಕಾವೇರಿ ಪ್ರಾದೇಶಿಕ ಸಂಸ್ಥೆ (ಎಂವೈಕೆಎಪಿಎಸ್-ಮೈಕಾಪ್ಸ್) ಯ ಉಪಾಧ್ಯಕ್ಷ ತ.ಮ.ವಿಜಯ ಭಾಸ್ಕರ್, ಜಿಪಂ ಸಿಇಒ ಮೋನಾ ರೋತ್ ಸಮ್ಮುಖದಲ್ಲಿ ಮಲೆಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು, ಮೈಸೂರು ಕಾವೇರಿ ಪ್ರಾದೇಶಿಕ ಸಂಸ್ಥೆಯ (ಎಂವೈಕೆಎಪಿಎಸ್-ಮೈಕಾಪ್ಸ್) ಕಾರ್ಯನಿರ್ವಾಹಕ ನಿರ್ದೇಶಕ ಅಶ್ರಪ್ ಉಲ್ ಹಸನ್ ಹಾಗೂ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕಿರಣ್ ಅವರು ಯೋಜನೆ ಅನುಷ್ಠಾನದ ಒಪ್ಪಂದಕ್ಕೆ ಸಹಿ ಹಾಕಿದರು.
ಹಸಿರು ನಾಳೆ, ಮಲೆ ಮಹದೇಶ್ವರ ಬೆಟ್ಟ (ಗ್ರೀನ್ ಟುಮಾರೊ, ಎಂಎಂಹಿಲ್) ಯೋಜನೆಯು ಮೂರು ವರ್ಷಗಳದಾಗಿದ್ದು, ತ್ಯಾಜ್ಯ ನಿರ್ವಹಣೆಯ ಎಲ್ಲ ವಿಭಾಗಗಳಲ್ಲಿ ಸಮರ್ಪಕವಾಗಿ ಯೋಜನೆ ಅನುಷ್ಠಾನವಾಗಲಿದೆ. ಎಲ್ಐಸಿ ಎಚ್ಎಫ್ಎಲ್ ಸಂಸ್ಥೆಯು ಯೋಜನೆಗೆ ಅಗತ್ಯವಾದ ಅನುದಾನದ ನೆರವು ನೀಡಲಿದ್ದು, ಮೈಕಾಪ್ಸ್ ಸಂಸ್ಥೆಯು ಯೋಜನೆ ಅನುಷ್ಠಾನ ನಿರ್ವಹಣೆ ಹೊತ್ತಿದೆ. ಯೋಜನೆಯು ಮಲೆಮಹದೇಶ್ವರ ಬೆಟ್ಟವನ್ನು ಹಸಿರುಮಯವಾಗಿಸುವ ಖಾತರಿಯೊಂದಿಗೆ ಅಗತ್ಯವಿರುವ ಸಮಗ್ರ ತ್ಯಾಜ್ಯ ನಿರ್ವಹಣೆ ಯೋಜನೆ, ತ್ಯಾಜ್ಯ ಸಂಗ್ರಹ ವ್ಯವಸ್ಥೆಯನ್ನ ಸುಸ್ಥಿರಗೊಳಿಸುವ, ತ್ಯಾಜ್ಯ ಸಂಗ್ರಹಣೆಯಿಂದ ಬರುವ ಆದಾಯವನ್ನು ಸ್ಥಳೀಯವಾಗಿ ನೀಡುವುದೂ ಸೇರಿದಂತೆ ಒಟ್ಟಾರೆ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಮಾಡುವ ಉದ್ದೇಶ ಹೊಂದಿದೆ.ಒಡಂಬಡಿಕೆ ಸಂದರ್ಭದಲ್ಲಿ ಮಾತನಾಡಿದ ಮೈಕಾಪ್ಸ್ ಸಂಸ್ಥೆಯ ಉಪಾಧ್ಯಕ್ಷ ತ.ಮ.ವಿಜಯ ಭಾಸ್ಕರ್, ಕಾವೇರಿ ಪ್ರಾದೇಶಿಕ ಸಂಸ್ಥೆಯು ಕಾವೇರಿ ನದಿಯ ಜಿಲ್ಲೆಗಳಲ್ಲಿ ಬಹುಮುಖ್ಯ ಯೋಜನೆಗಳನ್ನು ಜಾರಿಗೆ ತರುವಲ್ಲಿ ಮುಂದಾಗಿದೆ. ದಕ್ಷಿಣ ಕರ್ನಾಟಕದ ಚಾಮರಾಜನಗರ ಜಿಲ್ಲೆಗೆ ಅನುಕೂಲವಾಗುವ ಇನ್ನೂ ಹೆಚ್ಚು ಪ್ರಾಜೆಕ್ಟ್‌ಗಳನ್ನು ತೆಗೆದುಕೊಳ್ಳಲಿದ್ದೇವೆ. ಅಧಿಕ ಕೆಲಸ ಕಾರ್ಯಗಳನ್ನು ಜಿಲ್ಲೆಯಲ್ಲಿ ಕೈಗೊಳ್ಳಲಿದ್ದೇವೆ ಎಂದರು.
ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಮಲೆಮಹದೇಶ್ವರ ಬೆಟ್ಟಕ್ಕೆ ರಾಜ್ಯದ ವಿವಿಧ ಭಾಗಗಳು ಅಲ್ಲದೇ ತಮಿಳುನಾಡಿನಿಂದಲೂ ಸಾಕಷ್ಟು ಭಕ್ತಾಧಿಗಳು ಬರುತ್ತಿದ್ದಾರೆ. ಜಾತ್ರಾ ಸಂದರ್ಭದಲ್ಲಂತು ತ್ಯಾಜ್ಯ ನಿರ್ವಹಣೆ ಬಹು ಸವಾಲಿನ ಕಾರ್ಯವಾಗಿದೆ. ಇದೀಗ ಮೈ ಕಾಪ್ಸ್ ಸಂಸ್ಥೆಯು ತ್ಯಾಜ್ಯ ನಿರ್ವಹಣೆ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವುದು ಅತ್ಯಂತ ಅಭಿನಂದನೀಯ ಹಾಗೂ ಉಪಯೋಗಿ ಕಾರ್ಯವಾಗಿದೆ ಎಂದರು.
ಮೈಸೂರು ಕಾವೇರಿ ಪ್ರಾದೇಶಿಕ ಸಂಸ್ಥೆಯ (ಎಂವೈಕೆಎಬಿಎಸ್-ಮೈಕಾಪ್ಸ್) ಕಾರ್ಯನಿರ್ವಾಹಕ ನಿರ್ದೇಶಕ ಅಶ್ರಪ್ ಉಲ್ ಹಸನ್ ಮಾತನಾಡಿ, ಈಗಾಗಲೇ ಯೋಜನೆ ಸಂಬಂಧ ಭಾಗೀದಾರರ ಸಭೆ ನಡೆಸಲಾಗಿದೆ. ಸರ್ವೇ ಸಮೀಕ್ಷೆ ಕಾರ್ಯಗಳನ್ನು ಆರಂಭಿಸಲಾಗಿದೆ. ನಮ್ಮ ಸಂಸ್ಥೆಯಿಂದ ಸ್ಥಳೀಯರನ್ನು ಸಿಬ್ಬಂದಿಯಾಗಿ ನಿಯೋಜಿಸಿಕೊಂಡಿದ್ದೇವೆ. ಯೋಜನೆಗಾಗಿ ಅಗತ್ಯವಿರುವ ಸಹಕಾರವನ್ನು ಬಯಸುವುದಾಗಿ ತಿಳಿಸಿದರು.