ಅಬಕಾರಿ ಇಲಾಖೆಯಲ್ಲಿ ವರ್ಗಾವಣೆಗೆ ಹೊಸ ನಿಯಮ: ಸಚಿವ ತಿಮ್ಮಾಪೂರ

KannadaprabhaNewsNetwork |  
Published : Jan 18, 2025, 12:45 AM IST
(ಫೋಟೋ 17ಬಿಕೆಟಿ5, ಅಬಕಾರಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪೂರ) | Kannada Prabha

ಸಾರಾಂಶ

ಅಬಕಾರಿ ಇಲಾಖೆ ವರ್ಗಾವಣೆ ನಿಯಮಗಳನ್ನು ಮಾರ್ಪಾಡು ಮಾಡುವ ಮೂಲಕ ಪಾರದರ್ಶಕ ಮತ್ತು ನಿಯಮಾಧಾರಿತ ವರ್ಗಾವಣೆ ಪದ್ಧತಿ ಜಾರಿಗೊಳಿಸುವುದರಿಂದ ಇತರೆ ಪ್ರಭಾವಗಳಿಗೆ ಒಳಗಾಗುವುದನ್ನು ತಡೆಗಟ್ಟಲು ಸಾಧ್ಯವಾಗಲಿದೆ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅಬಕಾರಿ ಇಲಾಖೆಯಲ್ಲಿ ಸುಧಾರಣೆ ಹಾಗೂ ಪಾರದರ್ಶಕತೆ ತರುವ ಹಿನ್ನೆಲೆಯಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಲಾಖೆಯಲ್ಲಿನ ವರ್ಗಾವಣೆಗೆ ಹೊಸ ನಿಯಮ ರೂಪಿಸಲಾಗಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ತಿಳಿಸಿದ್ದಾರೆ.

ಅಬಕಾರಿ ಇಲಾಖೆ ವರ್ಗಾವಣೆ ನಿಯಮಗಳನ್ನು ಮಾರ್ಪಾಡು ಮಾಡುವ ಮೂಲಕ ಪಾರದರ್ಶಕ ಮತ್ತು ನಿಯಮಾಧಾರಿತ ವರ್ಗಾವಣೆ ಪದ್ಧತಿ ಜಾರಿಗೊಳಿಸುವುದರಿಂದ ಇತರೆ ಪ್ರಭಾವಗಳಿಗೆ ಒಳಗಾಗುವುದನ್ನು ತಡೆಗಟ್ಟಲು ಸಾಧ್ಯವಾಗಲಿದೆ ಎಂದು ಸಚಿವರು ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ನಾಗರಿಕ ಸೇವೆಗಳು (ಅಬಕಾರಿ ಇಲಾಖೆ ವರ್ಗಾವಣೆ) ನಿಯಮಗಳು, 2025 ಅನುಮೋದನೆ ನೀಡಲಾಗಿದೆ. ಅನುಬಂಧದಲ್ಲಿ ನೀಡಲಾದ ಕರಡನ್ನು ಹೊರಡಿಸಿ, ಸಂಬಂಧಪಟ್ಟವರಿಂದ ಆಕ್ಷೇಪಣೆ ಅಥವಾ ಸಲಹೆ ಆಹ್ವಾನಿಸುವುದು. ಹಾಗೂ ಸ್ವೀಕೃತವಾಗಬಹುದಾದ ಆಕ್ಷೇಪಣೆ ಅಥವಾ ಸಲಹೆ ಪರಿಗಣಿಸಿದ ನಂತರ ಕರ್ನಾಟಕ ನಾಗರಿಕ ಸೇವೆಗಳು (ಅಬಕಾರಿ ಇಲಾಖೆ ವರ್ಗಾವಣೆ) ನಿಯಮಗಳು, 2025 ಅನ್ನು ಅಂತಿಮಗೊಳಿಸಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದಿದ್ದಾರೆ.

ಅಬಕಾರಿ ಇಲಾಖೆಯಲ್ಲಿನ ಹುದ್ದೆಗಳನ್ನು ಕಾರ್ಯನಿರ್ವಾಹಕ ಮತ್ತು ಕಾರ್ಯನಿರ್ವಾಹಕೇತರ ಎಂದು ವಿಂಗಡಿಸಿ, ಅಬಕಾರಿ ನಿರೀಕ್ಷಕರು, ಉಪ ನಿರೀಕ್ಷಕರು, ಮುಖ್ಯ ಪೇದೆ ಮತ್ತು ಪೇದೆಗಳ ವರ್ಗಾವಣೆ ಕೌನ್ಸೆಲಿಂಗ್ ಮುಖಾಂತರ ಮಾಡಲು ನಿರ್ಧರಿಸಲಾಗಿದೆ. ಜೊತೆಗೆ ಒಬ್ಬ ಅಧಿಕಾರಿ/ಸಿಬ್ಬಂದಿ ಸತತವಾಗಿ ಎರಡಕ್ಕಿಂತ ಹೆಚ್ಚು ಅವಧಿಗೆ ಕಾರ್ಯನಿರ್ವಾಹಕ ಹುದ್ದೆಗೆ ವರ್ಗಾಯಿಸುವಂತಿಲ್ಲ. ಜತೆಗೆ ಅಬಕಾರಿ ಅಧಿಕಾರಿಗಳ ಕಡ್ಡಾಯ ವರ್ಗಾವಣೆಗೆ ಹೊಸ ನಿಯಮದಲ್ಲಿ ಪ್ರಸ್ತಾಪಿಸಲಾಗಿದೆ.

ಕಳೆದ 5 ವರ್ಷಗಳಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿನ ಕಾರ್ಯನಿರ್ವಾಹಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ ಅಬಕಾರಿ ಜಂಟಿ ಆಯುಕ್ತರು, ಉಪ ಆಯುಕ್ತರು, ಅಧೀಕ್ಷಕರು, ನಿರೀಕ್ಷಕರು ಮತ್ತು ಉಪ ನಿರೀಕ್ಷಕರನ್ನು ಸದರಿ ಜಿಲ್ಲೆ ಹೊರತುಪಡಿಸಿ ಇತರೆ ಜಿಲ್ಲೆಗಳಿಗೆ ವರ್ಗಾಯಿಸಲು ಹೊಸ ನಿಯಮದಲ್ಲಿ ಉಲ್ಲೇಖಿಸಲಾಗಿದೆ.

ಅಬಕಾರಿ ಇಲಾಖೆಯು ಸಮವಸ್ತ್ರಾಧಾರಿತ ಮತ್ತು ನಿಯಂತ್ರಕ ಇಲಾಖೆ ಆಗಿರುವುದರಿಂದ ಹೊಸ ವರ್ಗಾವಣೆ ನಿಯಮ ಇಲಾಖೆಯಲ್ಲಿ ಜಾರಿ ಮತ್ತು ತನಿಖೆ ಕಾರ್ಯ ಪರಿಣಾಮಕಾರಿ ಕೈಗೊಳ್ಳಲು ಅನುಕೂಲವಾಗಲಿದೆ. ಜೊತೆಗೆ ಇಲಾಖೆಯಲ್ಲಿ ಪಾರದರ್ಶಕತೆ ವ್ಯವಸ್ಥೆ ಜಾರಿಯಾಗುವುದರಿಂದ ಭ್ರಷ್ಟಾಚಾರಕ್ಕೆ ಆಸ್ಪದ ಸಿಗುವುದಿಲ್ಲ ಮತ್ತು ಸರ್ಕಾರಕ್ಕೆ ಆದಾಯ ಕೂಡ ಹೆಚ್ಚಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!