ಹೊಸ ತಾಲೂಕು ರಟ್ಟೀಹಳ್ಳಿ ನಾಮಫಲಕಕ್ಕೆ ಸೀಮಿತ

KannadaprabhaNewsNetwork |  
Published : Mar 02, 2026, 02:45 AM IST
ರಟ್ಟೀಹಳ್ಳಿ ತಹಸೀಲ್ದಾರ ಕಚೇರಿ. | Kannada Prabha

ಸಾರಾಂಶ

ರಟ್ಟೀಹಳ್ಳಿ ತಾಲೂಕು ರಚನೆಯಾಗಿ ಸುಮಾರು 7-8 ವರ್ಷ ಗತಿಸಿದರೂ ಅಭಿವೃದ್ಧಿ ಕಾಣದೇ ಕೇವಲ ಇಲಾಖೆಗಳ ನಾಮಫಲಕಕ್ಕಷ್ಟೇ ಸೀಮಿತವಾಗಿದೆ. ಪ್ರಸ್ತುತ ಬಜೆಟ್ನiಲ್ಲಾದರೂ ತಾಲೂಕಿನ ಅಭಿವೃದ್ಧಿಗಾಗಿ ಸಮರ್ಪಕ ಅನುದಾನ ಮೀಸಲಿಡುವರೋ ಕಾದು ನೋಡಬೇಕು.

ಸತೀಶ ಸಿ.ಎಸ್.

ಕನ್ನಡಪ್ರಭ ವಾರ್ತೆ ರಟ್ಟೀಹಳ್ಳಿ

ರಟ್ಟೀಹಳ್ಳಿ ತಾಲೂಕು ರಚನೆಯಾಗಿ ಸುಮಾರು 7-8 ವರ್ಷ ಗತಿಸಿದರೂ ಅಭಿವೃದ್ಧಿ ಕಾಣದೇ ಕೇವಲ ಇಲಾಖೆಗಳ ನಾಮಫಲಕಕ್ಕಷ್ಟೇ ಸೀಮಿತವಾಗಿದೆ. ಪ್ರಸ್ತುತ ಬಜೆಟ್‍ನಲ್ಲಾದರೂ ತಾಲೂಕಿನ ಅಭಿವೃದ್ಧಿಗಾಗಿ ಸಮರ್ಪಕ ಅನುದಾನ ಮೀಸಲಿಡುವರೋ ಕಾದು ನೋಡಬೇಕು.ರಟ್ಟೀಹಳ್ಳಿ ತಾಲೂಕು ಎಂದು ನಾಮಫಲಕಗಳು ಎಲ್ಲೆಡೆ ರಾರಾಜಿಸುತ್ತಿವೆ. ಆದರೆ, ಸಾರ್ವಜನಿಕರ ಅನುಕೂಲಕ್ಕಾಗಿ ಎಲ್ಲ ಇಲಾಖೆಗಳು ಪ್ರಾರಂಭವಾಗದೇ ಹಿರೇಕೆರೂರಿಗೆ ಅಲೆದಾಟ ತಪ್ಪಿಲ್ಲ ಎಂಬುದು ತಾಲೂಕಿನ ಜನರು ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಮುಖವಾಗಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಪ್ರತ್ಯೇಕ ಕ್ಷೇತ್ರ ಶಿಕ್ಷಣಾಧಿಕಾರಿ ನೇಮಕ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಸಮಾಜ ಕಲ್ಯಾಣ ಕಚೇರಿ, ಉಪ ನೋಂದಣಿ ಅಧಿಕಾರಿ ಮತ್ತು ವಿವಾಹ ನೋಂದಣಿ ಅಧಿಕಾರಿ ಕಾರ್ಯಾಲಯ ಸೇರಿದಂತೆ ಇನ್ನೂ ಅನೇಕ ಪ್ರಮುಖ ಕಚೇರಿಗಳನ್ನು ಪ್ರಾರಂಭಿಸಿ ಅಗತ್ಯ ಸಿಬ್ಬಂದಿ ನೇಮಿಸಬೇಕು ಎಂಬುದು ತಾಲೂಕಿನ ಜನತೆಯ ಆಗ್ರಹವಾಗಿದೆ. ತ್ರಿಪದಿಗಳ ಬ್ರಹ್ಮ ಸರ್ವಜ್ಞನ ಐಕ್ಯಸ್ಥಳ ಅಭಿವೃದ್ಧಿಯಾಗದೇ ಅನಾಥವಾಗಿದೆ. ಇದು ತಾಲೂಕಿನ ಮತ್ತೊಂದು ಪ್ರಮುಖ ಬೇಡಿಕೆ. ಪ್ರಸ್ತುತ ಬಜೆಟ್‍ನಲ್ಲಾದರೂ ಅನುದಾನ ಮೀಸಲಿಟ್ಟು, ಸರ್ವಜ್ಞರ ವಚನಗಳು ಹಾಗೂ ಕುರುಹುಗಳು ಉಳಿಯಬೇಕು ಎಂಬುದು ಎಲ್ಲರ ಆಶಯವಾಗಿದೆ.2012ರಲ್ಲಿ ಸರ್ವಜ್ಞನ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡಲಾಯಿತು. ನಂತರ ಸರ್ವಜ್ಞರ ಸಾಹಿತ್ಯ ಮತ್ತು ತ್ರಿಪದಿಗಳನ್ನು ಜನಪ್ರಿಯಗೊಳಿಸಲು 2021ರಲ್ಲಿ ಅಂದಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಒತ್ತಾಯಿಸಿದ್ದರು. ಕಾರಣ ಫೆ. 20ನ್ನು ಜಯಂತಿ ಆಚರಿಸಲು ಅಂದಿನ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತು. ಅಲ್ಲದೇ ಅದೇ ವರ್ಷ ₹5 ಕೋಟಿಯನ್ನು ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರಕ್ಕೂ ಹಣ ಬಿಡುಗಡೆ ಮಾಡಲಾಗಿತ್ತು. ಆದರೆ ಅದನ್ನು ಸಮರ್ಪಕ ಬಳಕೆಯಾಗಲಿಲ್ಲ.

ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ವಜ್ಞ ಪ್ರಾಧಿಕಾರಕ್ಕೆ ₹25 ಕೋಟಿ ಬಿಡುಗಡೆ ಮಾಡಿದ್ದರು. ಆದರೆ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದ ದಿವ್ಯ ನಿರ್ಲಕ್ಷ್ಯದಿಂದಾಗಿ ಸಮರ್ಪಕ ಕ್ರಿಯಾಯೋಜನೆ ಮಾಡದ ಕಾರಣ ಬಿಡುಗಡೆಯಾದ ₹25 ಕೋಟಿ ವಾಪಸಾಗಿತ್ತು. ಆಕ್ರೋಶಗೊಂಡ ಜನತೆ ಗ್ರಾಮ ಪಂಚಾಯಿತಿಗೆ ಬೀಗ ಜಡಿದರು. ಅಹೋರಾತ್ರಿ ಧರಣಿ, ರಸ್ತೆ ತಡೆ, ಗ್ರಾಮವನ್ನು ಸಂಪೂರ್ಣ ಬಂದ್ ಮಾಡಿ ಹೋರಾಟ ಮಾಡಿದರೂ ಯಾವೊಬ್ಬ ಅಧಿಕಾರಿಯಾಗಲಿ, ಜನಪ್ರತಿನಿಧಿಯಾಗಲಿ ಕ್ಯಾರೆ ಎನ್ನಲಿಲ್ಲ.

ಹಾಲಿ ಶಾಸಕ ಯು.ಬಿ. ಬಣಕಾರ ಹೋರಾಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೊಂದಲ, ತಾಂತ್ರಿಕ ಅಡಚಣೆಗಳನ್ನು ನಿವಾರಣೆ ಮಾಡಿದರು. ಸರ್ವಜ್ಞ ಪ್ರಾಧಿಕಾರದ ಅಭಿವೃದ್ಧಿಗಾಗಿ ₹30 ಕೋಟಿ ಹಣ ಮಂಜೂರು ಮಾಡುವಂತೆ ಶಾಸಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಪ್ರಮುಖ ಬೇಡಿಕೆಗಳು: ಸರ್ವಜ್ಞರ ಐಕ್ಯಸ್ಥಳ ಕುಮದ್ವತಿ ನದಿ ದಂಡೆ ಮೇಲಿರುವ ಕಾರಣ ಪ್ರವಾಹ ಸಂದರ್ಭದಲ್ಲಿ ಕೊಚ್ಚಿ ಹೋಗದಂತೆ ತಡೆಗೋಡೆಯಾಗಬೇಕು. ಪ್ರವಾಸಿಗರ ಅನುಕೂಲಕ್ಕಾಗಿ ಮಾರ್ಗಸೂಚಿ ಫಲಕಗಳ ಅಳವಡಿಕೆ, ಮುಂದಿನ ಪೀಳಿಗೆಗೆ ಸರ್ವಜ್ಞರ ವಚನಗಳು ಬಹುಭಾಷೆಗಳಿಗೆ ಭಾಷಾಂತರವಾಗಬೇಕು, ಸರ್ವಜ್ಞರ ತಂದೆ-ತಾಯಿ ಆರಾಧಿಸುವ ಕಾಶಿ ವಿಶ್ವನಾಥನ ದೇವಸ್ಥಾನ ಅಭಿವೃದ್ಧಿಪಡಿಸಬೇಕು, ಸರ್ವಜ್ಞರ ವಚನಗಳ ಗ್ರಂಥಾಲಯ ನಿರ್ಮಾಣ ಮಾಡಬೇಕು ಎನ್ನುವುದು ಹೋರಾಟಗಾರರ ಹಕ್ಕೊತ್ತಾಯವಾಗಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗುತ್ತಿದ್ದರೂ ಇದುವರೆಗೂ ರಟ್ಟೀಹಳ್ಳಿಯಲ್ಲಿ ಪ್ರಮುಖ ಕಚೇರಿಗಳು ಪ್ರಾರಂಭವಾಗದೇ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕಳೆದ ತಿಂಗಳಷ್ಟೇ ಪ್ರಜಾಸೌಧ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದು ಬಿಟ್ಟರೆ, ಯಾವುದೇ ಅಭಿವೃದ್ಧಿ ಕಾರ್ಯಗಳಾಗಲಿ, ಕಚೇರಿಗಳಾಗಲಿ ಪ್ರಾರಂಭವಾಗಿಲ್ಲ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂಗಳು ಎಲ್ಲಿಯೂ ಯಾರ ಮೇಲೆ ದಾಳಿ ಮಾಡಿಲ್ಲ: ಸುಧೀರ ಸಿಂಹ ಘೋರ್ಪಡೆ
ಮಾನವ ಧರ್ಮದ ಉನ್ನತಿಗೆ ಶ್ರಮಿಸಿದ ರೇಣುಕಾಚಾರ್ಯರು