ಕಾರ್ಕಳ: ಜಪಾನ್‌ನ ತಂತ್ರಜ್ಞಾನ ಹಾಗೂ ಕೈಗಾರಿಕಾ ಅನುಭವಕ್ಕೆ ಭಾರತದ ಯುವಶಕ್ತಿ ಮತ್ತು ಡಿಜಿಟಲ್ ಸಾಮರ್ಥ್ಯವನ್ನು ಜೋಡಿಸುವ ಮೂಲಕ ಹೊಸ ತಂತ್ರಜ್ಞಾನ ಹಾಗೂ ಉದ್ಯಮ ಅವಕಾಶಗಳನ್ನು ಸೃಷ್ಟಿಸಬಹುದು ಎಂದು ಬೆಂಗಳೂರಿನ ಜಪಾನ್ ಕಾನ್ಸುಲ್ ಜನರಲ್ ನವತಾ ಹಿರೋಷಿ ಹೇಳಿದರು.ನಿಟ್ಟೆ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ನಿಟ್ಟೆ ಫ್ಯೂಚರ್ ಸ್ಪೇಸ್‌ನಲ್ಲಿ ಗುರುವಾರ ನಡೆದ ಸೆಂಟರ್ಸ್ ಆಫ್ ಎಕ್ಸಲೆನ್ಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ತಕಾವೊ ಕೊಗ್ಯೊ ಕಂಪನಿ ಲಿಮಿಟೆಡ್‌ನ ಅಧ್ಯಕ್ಷ ಹಾಗೂ ಸಿಇಒ ಯುತಾಕಾ ಶಿಮೊಮುರಾ ಮಾತನಾಡಿ, ಕಳೆದ ವರ್ಷ 115 ನಿಟ್ಟೆ ವಿದ್ಯಾರ್ಥಿಗಳು ಜಪಾನ್‌ಗೆ ತೆರಳಿದ್ದು, 2027ರಲ್ಲಿ ಇನ್ನಷ್ಟು ವಿದ್ಯಾರ್ಥಿಗಳನ್ನು ಆಹ್ವಾನಿಸುವ ಗುರಿಯಿದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷ, ನಿಟ್ಟೆ ಡೀಮ್ಡ್ ಟು ಬಿ ಯೂನಿವರ್ಸಿಟಿಯ ಕುಲಾಧಿಪತಿ ವಿಶಾಲ್ ಹೆಗ್ಡೆ ಮಾತನಾಡಿ, ಶಿಕ್ಷಣದ ಜತೆಗೆ ಕೈಗಾರಿಕಾ ಹಾಗೂ ಅಂತಾರಾಷ್ಟ್ರೀಯ ಸಹಭಾಗಿತ್ವಕ್ಕೆ ಸಂಸ್ಥೆ ಆದ್ಯತೆ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಜಾಗತಿಕ ತಂತ್ರಜ್ಞಾನ ಮತ್ತು ಕೈಗಾರಿಕಾ ಅನುಭವ ದೊರೆಯುವಂತೆ ಹೊಸ ಅವಕಾಶಗಳನ್ನು ರೂಪಿಸಲಾಗುತ್ತಿದೆ ಎಂದರು.
ಆಟೋಲಿವ್ ಇಂಡಿಯಾದ ಮಲ್ಲಿಕಾರ್ಜುನ ಬಿ., ಕೊಬಯಶಿ ಕ್ರಿಯೇಟ್ ಇಂಡಿಯಾದ ಕೋಕಿ ಕಾಟೊ, ಜಪಾನ್ ಉಪ ಕಾನ್ಸುಲ್ ಜುನ್ ಹೊಮ್ಮ, ಟಿಕೆಇಯ ಜೂನಿಚಿ ಗೋಯಾ, ವಿಪ್ರೊ 3ಡಿಯ ಯತಿರಾಜ್ ಕಸಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳುಣ್ಕರ್ ಸ್ವಾಗತಿಸಿದರು. ಪ್ರೊ. ಹರಿಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಭರತ್ ಜಿ. ಕುಮಾರ್ ವಂದಿಸಿದರು. ವಿದ್ಯಾರ್ಥಿನಿಯರಾದ ಗ್ಲ್ಯಾಡಿಯಾ ಹಾಗೂ ನಿಲಿಮಾ ಭಕ್ತಾ ನಿರೂಪಿಸಿದರು.