ಉಡುಪಿ ; ಇಲ್ಲಿನ ಇಂದ್ರಾಳಿ ರೈಲು ನಿಲ್ದಾಣದಲ್ಲಿ ರೈಲುಗಳಿಗೆ ನೀರು ತುಂಬಿಸುವ ಸೌಲಭ್ಯತೆಗೆ ತಮ್ಮ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರವು 2 ಕೋಟಿ ರು. ಬಿಡುಗಡೆ ಮಾಡಿದೆ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಉಡುಪಿಯು ಕರಾವಳಿಯ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ನಗರವಾಗಿದ್ದು ದೇಶದ ಹಲವಾರು ಭಾಗಗಳಿಗೆ ರೈಲುಗಳನ್ನು ಉಡುಪಿಯನ್ನು ಕೇಂದ್ರವಾಗಿರಿಸಿ ಓಡಿಸಲು ಈ ವ್ಯವಸ್ಥೆಯು ಅಳವಡಿಕೆ ಪ್ರಮುಖವಾಗಿ ನಾಂದಿ ಹಾಡಲಿದೆ ಎಂದು ಅವರು ಹೇಳಿದರು. ಈ ಸಂದರ್ಭ ರೈಲ್ವೆ ಯಾತ್ರಿ ಸಂಘವು ನಂದಿಕೂರು-ಮೂಡಿಗೆರೆ ಮಾರ್ಗವಾಗಿ ಬೆಂಗಳೂರಿಗೆ ನೂತನ ರೈಲ್ವೆ ಲೈನು, ಉಡುಪಿಯ ಜಾರ್ಜ್ ಫರ್ನಾಂಡಿಸ್ ರೈಲ್ವೆ ನಿಲ್ದಾಣ ರಸ್ತೆಯನ್ನು ಉಡುಪಿಯ ಕುಕ್ಕಿಕಟ್ಟೆಯವರೆಗೆ ವಿಸ್ತರಣೆ, ಉಡುಪಿ ರೈಲ್ವೆ ನಿಲ್ದಾಣದಿಂದ ಬೀಡಿನಗುಡ್ಡೆಗೆ ನೇರ ರಸ್ತೆ ಸಂಪರ್ಕ, ದಾದರ್ - ವಸಾಯಿ ಮೂಲಕ ಮಂಗಳೂರಿಗೆ ಹೊಸ ರೈಲು, ಮಂಗಳೂರು - ಮಡಗಾವ್ ಉಡುಪಿಯ ಮೂಲಕ ಸಾಗುವ ಬಿಜಾಪುರ ರೈಲನ್ನು ಗುಲ್ಬರ್ಗಕ್ಕೆ ವಿಸ್ತರಣೆ, ಕೊಯಮತ್ತೂರು - ಮಂಗಳೂರು ಇಂಟರ್ ಸಿಟಿ ರೈಲನ್ನು ಕಾರವಾರಕ್ಕೆ ವಿಸ್ತರಣೆ, ಮಂಗಳೂರು - ಸಿಎಸ್‌ಟಿ ನಡುವೆ ಸಂಚರಿಸುವ ಮಂಗಳೂರು ಎಕ್ಸ್ ಪ್ರೆಸ್ ರೈಲುಗಳ ಭೋಗಿಗಳ ಸಂಖ್ಯೆಯನ್ನು 16 ರಿಂದ 22ಕ್ಕೆ ಏರಿಕೆ, ಉಡುಪಿಯ ಮೂಲಕ ಸಂಚರಿಸುವ ಅಂತರಾಜ್ಯ ರೈಲುಗಳಾದ ತುರಂತೋ ಮತ್ತು ಹಮ್‌ಸಪರ್ ಎಕ್ಸ್‌ಪ್ರೆಸ್ ರೈಲುಗಳ ಉಡುಪಿಯಲ್ಲಿ ನಿಲುಗಡೆ, ಉಡುಪಿ ರೈಲ್ವೆ ನಿಲ್ದಾಣದಲ್ಲಿ ಪಶ್ಚಿಮದಿಂದ ಪೂರ್ವ ದಿಕ್ಕಿಗೆ ಅಂಡರ್‌ಪಾಸ್ ರಚನೆ, ಮಂಗಳೂರು-ಉಡುಪಿ-ಕುಂದಾಪುರ-ಬೈಂದೂರು ನಡುವೆ ಪ್ಯಾಸೆಂಜರ್ ರೈಲುಗಳ ಓಡಾಟ ಮುಂತಾದ ಪ್ರಮುಖ ಮನವಿಗಳನ್ನು ಸಲ್ಲಿಸಲಾಯಿತು.ಸಂಘದ ಅಧ್ಯಕ್ಷ ಧೀರಜ್ ಎನ್. ಶಾಂತಿ, ಕಾರ್ಯದರ್ಶಿ ಮಂಜುನಾಥ್ ಮಣಿಪಾಲ, ನಿರ್ದೇಶಕರಾದ ತೊನ್ಸೆ ಶ್ರೀನಿವಾಸ ಶೆಟ್ಟಿ, ನಾರಾಯಣ್ ಕಾಂಚನ್ ಕೊಡವೂರು ಹಾಜರಿದ್ದರು.