ಚಿತ್ರಕೂಟ ಆಯುರ್ವೇದ ಹಬ್ಬಕ್ಕೆ ವೈಭವದ ಚಾಲನೆ

KannadaprabhaNewsNetwork |  
Published : Oct 06, 2026, 02:30 AM IST
ಚಿತ್ರಕೂಟ1 | Kannada Prabha

ಸಾರಾಂಶ

ಕುಂದಾಪುರ ತಾಲೂಕಿನ ಆಲೂರಿನ ಚಿತ್ರಕೂಟ ಆಯುರ್ವೇದ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾದ ಚಿತ್ರಕೂಟ ಆಯುರ್ವೇದ ಹಬ್ಬದ ಉದ್ಘಾಟನಾ ಸಮಾರಂಭವು ಗಣ್ಯರ ಉಪಸ್ಥಿತಿಯಲ್ಲಿ ಅತ್ಯಂತ ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ನೆರವೇರಿತು. ಗ್ರಾಮೀಣ ಭಾಗದಲ್ಲಿ ಪ್ರಾಚೀನ ಆಯುರ್ವೇದ ಪರಂಪರೆಯನ್ನು ಜನಸ್ನೇಹಿಯಾಗಿ ಉಳಿಸಿ ಬೆಳೆಸುತ್ತಿರುವ ಸಂಸ್ಥಾಪಕ ಡಾ. ರಾಜೇಶ್ ಬಾಯರಿ ಮತ್ತು ವೈದ್ಯರ ತಂಡದ ಕಾರ್ಯವೈಖರಿಯನ್ನು ಸಮಾರಂಭದಲ್ಲಿ ಭಾಗವಹಿಸಿದ ಗಣ್ಯರು ಮುಕ್ತಕಂಠದಿಂದ ಶ್ಲಾಘಿಸಿದರು.

ಕುಂದಾಪುರ; ಕುಂದಾಪುರ ತಾಲೂಕಿನ ಆಲೂರಿನ ಚಿತ್ರಕೂಟ ಆಯುರ್ವೇದ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾದ ಚಿತ್ರಕೂಟ ಆಯುರ್ವೇದ ಹಬ್ಬದ ಉದ್ಘಾಟನಾ ಸಮಾರಂಭವು ಗಣ್ಯರ ಉಪಸ್ಥಿತಿಯಲ್ಲಿ ಅತ್ಯಂತ ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ನೆರವೇರಿತು. ಗ್ರಾಮೀಣ ಭಾಗದಲ್ಲಿ ಪ್ರಾಚೀನ ಆಯುರ್ವೇದ ಪರಂಪರೆಯನ್ನು ಜನಸ್ನೇಹಿಯಾಗಿ ಉಳಿಸಿ ಬೆಳೆಸುತ್ತಿರುವ ಸಂಸ್ಥಾಪಕ ಡಾ. ರಾಜೇಶ್ ಬಾಯರಿ ಮತ್ತು ವೈದ್ಯರ ತಂಡದ ಕಾರ್ಯವೈಖರಿಯನ್ನು ಸಮಾರಂಭದಲ್ಲಿ ಭಾಗವಹಿಸಿದ ಗಣ್ಯರು ಮುಕ್ತಕಂಠದಿಂದ ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪ್ರಾಧ್ಯಾಪಕ ಡಾ. ಪ್ರದೀಪ್ ಕೆಂಚನೂರು, ಚಿತ್ರಕೂಟದಲ್ಲಿ ರೋಗಿಗಳನ್ನು ಗ್ರಾಹಕರಂತಾಗಲಿ, ರೋಗಿಗಳಂತಾಗಲಿ ಕಾಣದೆ ಮನೆಯ ಸದಸ್ಯರಂತೆ ಅಕ್ಕರೆಯಿಂದ ಉಪಚರಿಸುವ ಅಪರೂಪದ ವಾತಾವರಣವಿದೆ. ಹತ್ತು ಸಮಸ್ತರು ಎಂಬಂತೆ ಸಮಾಜದ ಎಲ್ಲ ವರ್ಗ, ಜಾತಿ-ಧರ್ಮದ ಜನರನ್ನು ಪ್ರೀತಿಯಿಂದ ಒಳಗೊಂಡು ಮುನ್ನಡೆಯುತ್ತಿರುವುದು ಇಲ್ಲಿನ ವೈಶಿಷ್ಟ್ಯ. ದೇಶ-ವಿದೇಶಗಳ (ಸುಮಾರು ೪೦-೫೦ ರಾಷ್ಟ್ರಗಳ) ಅತಿಥಿಗಳು ಇಲ್ಲಿಗೆ ಬಂದು ಸ್ವಾಸ್ಥ್ಯ ಕಂಡುಕೊಳ್ಳುತ್ತಿರುವುದು ಸಂಸ್ಥೆಯ ಪ್ರಾಮಾಣಿಕ ಸೇವೆಗೆ ಸಾಕ್ಷಿ ಎಂದರು. ​ಜನರ ಒಡನಾಟದಿಂದ ಸಂಸ್ಥೆಗಳ ಬೆಳವಣಿಗೆ: ಕುಂದಾಪುರ ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಹಾಗೂ ಖ್ಯಾತ ಚರ್ಮರೋಗ ತಜ್ಞ ಡಾ. ಉಮೇಶ್ ಪುತ್ತೂರನ್ ಮಾತನಾಡಿ, ವೈದ್ಯರು ಜನರಿಂದ ದೂರ ಉಳಿಯದೆ ಅವರೊಂದಿಗೆ ಬೆರೆತಾಗ ಮಾತ್ರ ಉತ್ತಮ ಸೇವೆ ಸಾಧ್ಯ. ಹೆದ್ದಾರಿಯಿಂದ ಹಿಡಿದು ಸಂಸ್ಥೆಯವರೆಗೂ ನಿರ್ಮಾಣವಾಗಿರುವ ಹಬ್ಬದ ವಾತಾವರಣವು ಜನರ ಪ್ರೀತಿ-ವಿಶ್ವಾಸಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಭಾರತೀಯ ಪರಂಪರೆಯ ಪ್ರಾಚೀನ ಆಯುರ್ವೇದ ಜ್ಞಾನವನ್ನು ಗ್ರಾಮೀಣ ಪ್ರದೇಶದಲ್ಲಿ ಅತ್ಯಂತ ಬದ್ಧತೆಯಿಂದ ಜನರಿಗೆ ತಲುಪಿಸುತ್ತಿರುವ ಡಾ. ಬಾಯರಿ ಅವರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ​ಮೂಲ ಆಹಾರ ಪದ್ಧತಿಗೆ ಮರಳುವ ಅಗತ್ಯತೆ: ಬಾಂಡ್ಯ ಎಜುಕೇಷನ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಅನುಪಮಾ ಮಾತನಾಡಿ, ಇಂದಿನ ಜೀವನಶೈಲಿ ಹಾಗೂ ಆಹಾರ ಪದ್ಧತಿಯ ಬದಲಾವಣೆಗಳಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ಉಲ್ಬಣಿಸುತ್ತಿವೆ. ಇದಕ್ಕೆ ನೈಸರ್ಗಿಕ ಜೀವನಕ್ರಮ ಮತ್ತು ಪ್ರಾಚೀನ ಆಯುರ್ವೇದವೇ ಪರಿಹಾರ. ಮಕ್ಕಳಲ್ಲಿ ಮತ್ತು ಸಮುದಾಯದಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಇಂತಹ ಆಯುರ್ವೇದ ಹಬ್ಬಗಳು ಸತತವಾಗಿ ನಡೆಯಬೇಕು ಎಂದು ಆಶಿಸಿದರು.

​ಹುಟ್ಟೂರಿನ ಋಣ ತೀರಿಸುತ್ತಿರುವ ವೈದ್ಯ ದಂಪತಿ: ಕಣಾಟಕ ಬ್ಯಾಂಕ್‌ನ ಸಹಾಯಕ ಜನರಲ್ ಮ್ಯಾನೇಜರ್ ರಮೇಶ್ ವೈದ್ಯ ಮಾತನಾಡಿ, ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ ಎಂಬ ಮಾತಿನಂತೆ, ಶಿಕ್ಷಣ ಮುಗಿದ ಮೇಲೆ ನಗರಗಳಿಗೆ ತೆರಳದೆ, ತಾವು ಹುಟ್ಟಿದ ಊರಿನಲ್ಲೇ ಸಂಸ್ಥೆ ಸ್ಥಾಪಿಸಿ ಸುಮಾರು ೬೦ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ. ಔಷಧೀಯ ಸಸ್ಯಗಳ ವನವನ್ನು ಒಳಗೊಂಡ ಈ ಸಂಯೋಜಿತ ಘಟಕವು ರೋಗ ಬರುವ ಮುನ್ನವೇ ತಡೆಯುವ ಆಯುರ್ವೇದ ತತ್ವಕ್ಕೆ ಪೂರಕವಾಗಿದೆ ಎಂದರು.

ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷ ಕೃಷ್ಣಾನಂದ ಚಾತ್ರ ಮಾತನಾಡಿ, ಹೆಚ್ಚಿನ ವೈದ್ಯರು ವಿದೇಶ ಅಥವಾ ಮಹಾನಗರಗಳತ್ತ ಮುಖ ಮಾಡುವ ಈ ಕಾಲದಲ್ಲಿ, ಹಳ್ಳಿಯಲ್ಲೇ ಉಳಿದು ಇಡೀ ಸಮುದಾಯವನ್ನು ಒಗ್ಗೂಡಿಸಿಕೊಂಡು ಸಾಗುತ್ತಿರುವ ಡಾ. ರಾಜೇಶ್ ಬಾಯರಿ ಅವರ ಊರಿನ ಮೇಲಿನ ಪ್ರೀತಿ ಹಾಗೂ ಸಮಾಜಮುಖಿ ಕಳಕಳಿ ಅನುಕರಣೀಯ ಎಂದು ಅಭಿನಂದಿಸಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಮುಖ್ಯಸ್ಥ ಡಾ. ರಾಜೇಶ್ ಬಾಯರಿ ಅವರು, ಮುಂದಿನ ಪರಂಪರೆಗೆ ಆಯುರ್ವೇದ ದಾಟಿಸುವುದು ಬಹಳ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಇಂಥದ್ದೊಂದು ಆಲೋಚನೆ ಮಾಡಿದ್ದೇವೆ. ಜನರಿಂದ ಅಭೂತಪೂರ್ವ ಬೆಂಬಲ ಸಿಕ್ಕಿದೆ ಎಂದರು.

ಮಹಾಬಲ ಬಾಯರಿ, ಕಲಾವತಿ ಬಾಯರಿ, ಡಾ. ಅನುಲೇಖಾ ಬಾಯರಿ ಇದ್ದರು.ಆಯುರ್ವೇದ ಅಭಿಮಾನಿಗಳು, ಸ್ಥಳೀಯ ನಾಗರಿಕರು ಹಾಗೂ ಸಂಸ್ಥೆಯ ವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು. ಪ್ರಾಚೀನ ಚಿಕಿತ್ಸಾ ಪದ್ಧತಿ, ಗಿಡಮೂಲಿಕೆಗಳ ಮಹತ್ವ ಹಾಗೂ ಸ್ವಾಸ್ಥ್ಯ ಜೀವನದ ಅರಿವು ಮೂಡಿಸುವ ಮೂಲಕ ಚಿತ್ರಕೂಟ ಆಯುರ್ವೇದ ಹಬ್ಬವು ಯಶಸ್ವಿಯಾಗಿ ಮುನ್ನಡೆದಿದೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಭಾಗಕ್ಕೆ ಸಿಂಗಲ್ ಪ್ಲಾಟ್ ಅನುಮೋದನೆ ಸುಲಭ
ಕಾಪು ತಾಲೂಕು ಸಾಹಿತ್ಯ ಸಮ್ಮೇಳನ ಸಮಾರೋಪ