ಹೊಸ ವರ್ಷಾಚರಣೆ ಪ್ರವಾಸಿಗರು ಮುತ್ತತ್ತಿ ಪ್ರವೇಶಕ್ಕೆ ಬ್ರೇಕ್

KannadaprabhaNewsNetwork | Published : Dec 30, 2024 1:00 AM

ಸಾರಾಂಶ

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಮುತ್ತತ್ತಿಗೆ ಬರುವ ಪ್ರವಾಸಿಗರ ಪ್ರವೇಶಕ್ಕೆ ತಡೆ ನೀಡಿರುವ ತಾಲೂಕು ಆಡಳಿತ ಡಿಸೆಂಬರ್ 31 ಬೆಳಗ್ಗೆ 6 ರಿಂದ ಜ.2ರ ಬೆಳಗ್ಗೆ 6ರ ವರೆಗೆ ಎರಡು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಮುತ್ತತ್ತಿಗೆ ಬರುವ ಪ್ರವಾಸಿಗರ ಪ್ರವೇಶಕ್ಕೆ ತಡೆ ನೀಡಿರುವ ತಾಲೂಕು ಆಡಳಿತ ಡಿಸೆಂಬರ್ 31 ಬೆಳಗ್ಗೆ 6 ರಿಂದ ಜ.2ರ ಬೆಳಗ್ಗೆ 6ರ ವರೆಗೆ ಎರಡು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದೆ.

ಹಲಗೂರು ಆರಕ್ಷಕ ಉಪ ನಿರೀಕ್ಷಕರು ಮತ್ತು ವಲಯ ಅರಣ್ಯಧಿಕಾರಿ ವನ್ಯಜೀವಿ ವಲಯ ಮುತ್ತತ್ತಿ ಹಾಗೂ ಭೀಮೇಶ್ವರ ವ್ಯಾಪ್ತಿಯಲ್ಲಿ ಹೊಸ ವರ್ಷಾಚರಣೆಗೆ ಬಂದು ಮೋಜುಮಸ್ತಿ ಮಾಡಿ ಅಪಾಯವಾಗುವ ಸಾಧ್ಯತೆ ಇರುವುದರಿಂದ ಮುಂಜಾಗ್ರತೆ ಕ್ರಮವಾಗಿ ಪ್ರವಾಸಿಗರಿಗೆ ಪ್ರವೇಶಕ್ಕೆ ಅವಕಾಶ ನೀಡದಂತೆ ನಿಷೇಧಾಜ್ಞೆ ಮಾಡುವಂತೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ತಾಲೂಕು ದಂಡಾಧಿಕಾರಿ ಡಾ.ಲೋಕೇಶ್ ಆದೇಶ ಹೊರಡಿಸಿದ್ದಾರೆ.

ಹಲಗೂರು ಹೋಬಳಿಯ ಮುತ್ತತ್ತಿ ಗ್ರಾಮವು ಪ್ರಸಿದ್ಧ ಯಾತ್ರಾ ಹಾಗೂ ಪ್ರೇಕ್ಷಣೀಯ ಸ್ಥಳ. ಮುತ್ತತ್ತಿ ಗ್ರಾಮದ ಆಸು-ಪಾಸು ಮತ್ತು ನದಿ ಅಂಚಿನಲ್ಲಿ ಹೊಸ ವರ್ಷಾಚರಣೆಗಾಗಿ ಬೆಂಗಳೂರು, ಕನಕಪುರ, ಮಳವಳ್ಳಿ ಹಾಗೂ ಇತರ ಜಿಲ್ಲೆ/ತಾಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ.

ಹೊಸ ವರ್ಷಾಚರಣೆಗಾಗಿ ಮದ್ಯಪಾನ ಸೇವನೆ ಮತ್ತು ಇತರೆ ಮೋಜು ಮಸ್ತಿ ಮಾಡುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಹಾಗೂ ಇಂತಹ ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ಮುತ್ತತ್ತಿ ಪ್ರವಾಸಿ ತಾಣ, ಭೀಮೇಶ್ವರಿ ಹಾಗೂ ಸುತ್ತ-ಮುತ್ತಲಿನ ಅರಣ್ಯ ಪ್ರದೇಶ ವ್ಯಾಪ್ತಿ ಡಿ.31ರ ಬೆಳಗ್ಗೆ 6 ಗಂಟೆಯಿಂದ ಜನವರಿ 2 ಬೆಳಗ್ಗೆ 6 ಗಂಟೆರವೆಗೆ 2 ದಿನಗಳ ಕಾಲ ಯಾರು ಪ್ರವೇಶ ಮಾಡದಂತೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಮುತ್ತತಿಗೆ ಹೋಗುವ ಮಾರ್ಗ ಮಧ್ಯದಲ್ಲೇ ಸಿಗುವ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಬಾಗಿಲನ್ನು ಮುಚ್ಚಿ ಮುತ್ತತ್ತಿ ಗ್ರಾಮದವರನ್ನು ಹೊರತುಪಡಿಸಿ ಬೇರೆ ಯಾರನ್ನು ಒಳಗೆ ಬಿಡುವುದಿಲ್ಲ. ಪೊಲೀಸ್ ಸಿಬ್ಬಂದಿ ಹಾಗೂ ಅರಣ್ಯ ಸಿಬ್ಬಂದಿ ಕರ್ತವ್ಯ ನಿರ್ವಹಿಸಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ.

ಕನಕಪುರ ಮತ್ತು ಸಾತನೂರು ಕಡೆಯಿಂದ ಬರುವ ಪ್ರವಾಸಿಗರಿಗೆ ಹಾಗೂ ಹಲಗೂರಿನಿಂದ ಹೋಗುವ ಪ್ರವಾಸಿಗರಿಗೆ ಪ್ರವೇಶ ಇರುವುದಿಲ್ಲ. ಮುತ್ತತ್ತಿಗೆ ಮುಂಚಿತವಾಗಿ ಹೋಗಿರುವ ಪ್ರವಾಸಿಗರನ್ನು ಹೊರಗೆ ಕಳಿಸಲಾಗುವುದು. ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಹಲಗೂರು ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಬಿ.ಮಹೇಂದ್ರ ತಿಳಿಸಿದ್ದಾರೆ.

ಬಲಮುರಿ, ಎಡಮುರಿ, ಕೆಆರ್ ಎಸ್ ಹಿನ್ನೀರಿನ ಪ್ರದೇಶಗಳಿಗೆ ನಿಷೇಧ

ಶ್ರೀರಂಗಪಟ್ಟಣ:

ಹೊಸ ವರ್ಷಾಚರಣಿ ಹಿನ್ನೆಲೆ ತಾಲೂಕಿನ ಬೆಳಗೊಳ ಗ್ರಾಮದ ಬಳಿಯ ಕಾವೇರಿ ನದಿ ತೀರದ ಬಲಮುರಿ ಹಾಗೂ ಎಡಮುರಿ ಪ್ರವಾಸಿ ತಾಣಗಳಿಗೆ ಮತ್ತು ಕೆ.ಆ‌ರ್.ಸಾಗರ ಅಣೆಕಟ್ಟೆ ಹಿನ್ನೀರಿನ ಪ್ರದೇಶಗಳಲ್ಲಿ ಎರಡು ದಿನ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಆದೇಶಿಸಿದ್ದಾರೆ.

ಶಾಂತಿ ಸುವ್ಯವಸ್ಥೆ, ಕಾನೂನು ಪಾಲನೆ ಹಾಗೂ ವರ್ಷಾಚರಣೆ ಹಿನ್ನೆಲೆ ಮೋಜು ಮಸ್ತಿ ಮಾಡಿ ಕಾವೇರಿ ನದಿಯಲ್ಲಿ ನಡೆಯಬಹುದಾದ ಸಾವು, ನೋವುಗಳನ್ನು ತಡೆಯುವ ದೃಷ್ಟಿಯಿಂದ ಡಿ.31ರ ಬೆಳಗ್ಗೆ 6ರಿಂದ ಜ.1ರ ರಾತ್ರಿ 8 ಗಂಟೆವರೆಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿ ಈ ಆದೇಶ ಹೊರಡಿಸಿದ್ದಾರೆ.

ಆದೇಶ ಉಲ್ಲಂಘನೆ ಮಾಡಿ ನದಿ ತೀರದಲ್ಲಿ ಮೋಜು-ಮಸ್ತಿ ಮಾಡುವುದು ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ಕೆಆರ್ ಎಸ್ ಪೊಲೀಸರು ಎಚ್ಚರಿಸಿದ್ದಾರೆ.

Share this article