ವಿದ್ಯಾರ್ಥಿಗಳು ಮಹನೀಯರ ಆದರ್ಶ ಅಳವಡಿಸಿ: ಸೋಮೇಶ್ವರನಾಥ ಸ್ವಾಮೀಜಿ

KannadaprabhaNewsNetwork | Published : Dec 30, 2024 1:00 AM

ಸಾರಾಂಶ

ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಒಳ್ಳೆಯ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ ಎಂದು ಸೋಮೇಶ್ವರನಾಥ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ವಿದ್ಯೆಯಿಂದ ಮಾತ್ರ ಎಲ್ಲವನ್ನೂ ಪಡೆದುಕೊಳ್ಳಲು ಸಾಧ್ಯವಿಲ್ಲ, ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಒಳ್ಳೆಯ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ ಎಂದು ಆದಿ ಚುಂಚನಗಿರಿ ಮೈಸೂರು-ಕೊಡಗು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಸಿದ್ದಾಪುರದ ಶ್ರೀ ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ಬಿಜಿಎಸ್ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಆಶೀರ್ವಚನ ನೀಡಿದ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮ ಧರ್ಮನಾಥನಂದನಾಥ ಸ್ವಾಮೀಜಿ, ವಿವೇಕಾನಂದರಂತಹ ಮಹನೀಯರ ಆದರ್ಶ ತತ್ವಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡರೆ ಮಾತ್ರ ಸಮಾಜದಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯ. ಮಕ್ಕಳು ಮಹನೀಯರ ಸಾಲಿನಲ್ಲಿ ಬೆಳೆಯಬೇಕೆಂದರೆ ಪೋಷಕರು ಹಾಗೂ ಶಿಕ್ಷಕರಿಂದ ಮಕ್ಕಳಿಗೆ ಉತ್ತಮ ವಿಷಯಗಳ ಬಗ್ಗೆ ಬೋಧನೆ ಮಾಡುವ ಕೆಲಸವಾಗಬೇಕೆಂದರು.

ಸಿದ್ದಾಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ಪ್ರೇಮ ಗೋಪಾಲ್ ಮಾತನಾಡಿ, ಮಕ್ಕಳು ವಿದ್ಯಾವಂತರಾಗಿ ಸಮಾಜದಲ್ಲಿ ಮುಂದೆ ಬಂದು ಶಿಕ್ಷಕರು ಹಾಗೂ ಶಿಕ್ಷಣ ನೀಡಿದ ಸಂಸ್ಥೆಗೆ ಕೀರ್ತಿ ತರುವಂತಾಗಬೇಕು ಎಂದು ಹೇಳಿದರು.

ಗ್ರಾ.ಪಂ. ಸದಸ್ಯ ಶೂಕುರ್ ಮಾತನಾಡಿದರು.

ಗ್ರಾ.ಪಂ. ಉಪಾಧ್ಯಕ್ಷ ಪಳನಿಸ್ವಾಮಿ, ಶ್ರೀ ಮಠದ ಭಕ್ತರಾದ ರಾಮಕೃಷ್ಣೇಗೌಡ, ಉದ್ಯಮಿ ರಾಜೇಂದ್ರ ಸಿಂಗ್ ಸೇರಿದಂತೆ ಗಣ್ಯರು ವೇದಿಕೆಯಲ್ಲಿದ್ದರು.

2023 -24ನೇ ಸಾಲಿನ ಎಸ್ಎಸ್ಎಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಜಯಶ್ರೀ ಪಿ.ಜೆ., ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಜಶೀಲಾ, ಕೀರ್ತಿ ಹಾಗೂ ಕಬಡ್ಡಿ ಪಂದ್ಯಾವಳಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಮಹಮ್ಮದ್ ಹರ್ಷದ್, ಶಾಲೆಯ ಅತ್ಯುತ್ತಮ ವಿದ್ಯಾರ್ಥಿಯಾದ ದಿನಿತ್, ಮಿಮಿಕ್ರಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ನಕುಲ್ ದೇವ್ ಮತ್ತು ಆದಿತ್ಯ ಭಟ್ ಅವರನ್ನು ಸನ್ಮಾನಿಸಿಸಲಾಯಿತು.

ಸಿದ್ದಾಪುರ ಬಿಜಿಎಸ್ ಸಂಸ್ಥೆಯ ಮೇಲ್ವಿಚಾರಕ ಮಂಜುನಾಥ್, ಆಡಳಿತಾಧಿಕಾರಿ ಸುಧಾಕರ್, ಪ್ರಾಂಶುಪಾಲ ಕಾಳೇಗೌಡ, ಮುಖ್ಯ ಶಿಕ್ಷಕಿ ಅನಿತಾ ಹಾಗೂ ಸಂಸ್ಥೆಯ ಶಿಕ್ಷಕರು ಮತ್ತು ಬೋಧಕೇತರರು ಹಾಜರಿದ್ದರು. ಕಾರ್ಯಕ್ರಮವನ್ನು ಶಿಲ್ಪಾ ರಾಜೇಶ್, ಅನಸ್ವರ ಶಿವದಾಸ್ ನಿರೂಪಿಸಿದರು. ಲಸಿಕಾ ಎ.ಕೆ. ಸ್ವಾಗತಿಸಿದರು. ಭಾರತಿ ವಂದಿಸಿದರು.

Share this article