ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಹೊಸ ವರ್ಷದ ಹಿನ್ನೆಲೆಯಲ್ಲಿ ಪಟ್ಟಣದ ಶ್ರೀರಂಗನಾಥ ಹಾಗೂ ಗಂಜಾಂನ ಶ್ರೀನಿಮಿಷಾಂಬ ದೇವಾಲಯಗಳಿಗೆ ಸಹಸ್ರಾರು ಭಕ್ತರು ಹಾಗೂ ಪ್ರವಾಸಿಗರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.ತಾಲೂಕಿನ ಬಲಮುರಿ, ಎರಡಮುರಿ, ಕರಿಘಟ್ಟ, ಸಂಗಮ, ಗೋಸಾಯಿಘಾಟ್, ಬೋರೆ ದೇವರ ದೇವಸ್ಥಾನ ಬಳಿಯ ಕಾವೇರಿ ನದಿ ತೀರದ ಪ್ರದೇಶಗಳು ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ನಿಷೇಧಾಜ್ಞೆ ಜಾರಿ ಮಾಡಿ ತಾಲೂಕು ಆಡಳಿತ ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ಪ್ರವಾಸಿಗರು ಹಾಗೂ ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿರುವುದು ಕಂಡು ಬಂತು.
ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ:ಹೊಸ ವರ್ಷ ಹಿನ್ನೆಲೆಯಲ್ಲಿ ಭಕ್ತರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳಿಗೆ ಭೇಟಿ ನೀಡಿದ್ದರಿಂದ ಬೆಂಗಳೂರು- ಮೈಸೂರು ಹೆದ್ದಾರಿ ಹಾಗೂ ಪಟ್ಟಣದ ಮುಖ್ಯ ಬೀದಿಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿತ್ತು.
ಇದರಿಂದ ರಸ್ತೆ ದಾಟಲು ಪಾದಚಾರಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ವಾಹನ ದಟ್ಟಣೆಗಳನ್ನು ನಿಯಂತ್ರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಮುತ್ತತ್ತಿಯಲ್ಲಿ ಭಕ್ತರಿಲ್ಲದೇ ದೇವಾಲಯ, ಪ್ರವಾಸಿತಾಣ ಖಾಲಿ
ಹಲಗೂರು: ಪ್ರವಾಸಿಗರ ಪ್ರೇಕ್ಷಣೀಯ ಸ್ಥಳ ಮುತ್ತತ್ತಿಯಲ್ಲಿ ಭಕ್ತರು ಹಾಗೂ ಪ್ರವಾಸಿಗರಿಲ್ಲದೆ ಎಲ್ಲೆಡೆ ಬೀಕೋ ಎನ್ನುವ ವಾತಾವರಣ ನಿರ್ಮಾಣವಾಗಿತ್ತು.ಪ್ರತಿ ಹೊಸ ವರ್ಷ ಹಾಗೂ ವರ್ಷದ ಕೊನೆ ದಿನ ಹೆಚ್ಚು ಪ್ರವಾಸಿಗರು ಮುತ್ತತ್ತಿಯಲ್ಲಿ ಬಂದು ಸಂಭ್ರಮಿಸುತ್ತಿದ್ದರು. ರಾಜ್ಯದೆಲ್ಲಡೆ ಸಾವಿರಾರು ಭಕ್ತರನ್ನು ಒಳಗೊಂಡಿರುವ ಮುತ್ತತ್ತಿ ಆಂಜನೇಯಸ್ವಾಮಿ ದೇಗುಲಕ್ಕೆ ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥವನ್ನು ನೆರವೇರಿಸಿ ಹೊಸ ವರ್ಷದಲ್ಲಿ ಸುಖ ಜೀವನ ನಡೆಸಲು ಆಶೀರ್ವದಿಸು ಎಂಬ ಬೇಡಿಕೆ ಸಲ್ಲಿಸಿ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದರು.
ಆದರೆ, ಜಿಲ್ಲಾಡಳಿತ ಸಾರ್ವಜನಿಕರ ಹಿತ ದೃಷ್ಟಿಯಿಂದ ಮುತ್ತತ್ತಿ ಪ್ರವೇಶ ನಿಷೇಧ ಮಾಡಿದ್ದರಿಂದ ಸ್ವಗ್ರಾಮದವರನ್ನು ಹೊರತು ಪಡಿಸಿ ಹೊರ ಜಿಲ್ಲೆ ಹಾಗೂ ಪ್ರದೇಶದ ಭಕ್ತರು ಹಾಗೂ ಪ್ರವಾಸಿಗರ ಪ್ರವೇಶಕ್ಕೆ ನಿಷೇಧಿಸಿದ್ದರಿಂದ ಎಲ್ಲವೂ ಖಾಲಿ ಖಾಲಿ ಆಗಿತ್ತು.ಹೊಸ ವರ್ಷಕ್ಕೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಅರ್ಚಕರು ಪ್ರಸಾದ ನೈವೇಧ್ಯ ಮಾಡಿ ಪ್ರಸಾದ ನೀಡಲು ಸಹ ಯಾರು ಇಲ್ಲದ ಕಾರಣ ಬೆರಳೆಣಿಕೆಯಷ್ಟು ಗ್ರಾಮಸ್ಥರೇ ಬಂದು ಪ್ರಸಾದ ಸ್ವೀಕರಿಸಿದರು.
ಸೋಮವಾರ ಹೊಸ ವರ್ಷ ಪ್ರಾರಂಭದ ದಿನ ಹಲಗೂರು ವಿದ್ಯಾಗಣಪತಿ ವೀರಭದ್ರೇಶ್ವರ ಸೋಮೇಶ್ವರ, ಕಾಳಿಕಾಂಬ ದೇವಸ್ಥಾನ, ರಾಮ ಮಂದಿರ, ಕೋನ್ನಾಪುರ ಶಂಭುಲಿಂಗೇಶ್ವರ, ಮತ್ತು ಪುರದೊಡ್ಡಿ ಶನೇಶ್ವರ ಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಪುನಸ್ಕಾರ ನಡೆಸಿ ಬಂದ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಗಿತ್ತು. ಬಸವನ ಬೆಟ್ಟ, ಅಂತರವಳ್ಳಿ ಬೆಟ್ಟ, ಸಾಯಿಬಾಬಾ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಅಧಿಕವಾಗಿತ್ತು.