ಬೆಂಗಳೂರು : ಹೊರ ವಲಯಕ್ಕೆ ಹೊಸ ವರ್ಷದ ಪಾರ್ಟಿಗಳು ಶಿಫ್ಟ್

KannadaprabhaNewsNetwork |  
Published : Dec 30, 2025, 02:15 AM ISTUpdated : Dec 30, 2025, 06:45 AM IST
New Year Party

ಸಾರಾಂಶ

ಹೊಸ ವರ್ಷ 2026 ಅನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಿಲಿಕಾನ್ ಸಿಟಿ ಬೆಂಗಳೂರಿನ ಜನತೆ ಸರ್ವ ಸನ್ನದ್ಧರಾಗಿದ್ದಾರೆ. ಹೊಸ ವರ್ಷದ ರಾತ್ರಿಯನ್ನು ಸಂಗೀತ, ನೃತ್ಯದೊಂದಿಗೆ ಧೂಳೆಬ್ಬಿಸಲು ಅನೇಕ ಪಾರ್ಟಿಗಳು ನಗರ ಹೊರ ವಲಯಕ್ಕೆ ಶಿಫ್ಟ್ ಆಗಿವೆ.

ಮಂಜುನಾಥ ನಾಗಲೀಕರ್

 ಬೆಂಗಳೂರು : ಹೊಸ ವರ್ಷ 2026 ಅನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಿಲಿಕಾನ್ ಸಿಟಿ ಬೆಂಗಳೂರಿನ ಜನತೆ ಸರ್ವ ಸನ್ನದ್ಧರಾಗಿದ್ದಾರೆ. ಹೊಸ ವರ್ಷದ ರಾತ್ರಿಯನ್ನು ಸಂಗೀತ, ನೃತ್ಯದೊಂದಿಗೆ ಧೂಳೆಬ್ಬಿಸಲು ಅನೇಕ ಪಾರ್ಟಿಗಳು ನಗರ ಹೊರ ವಲಯಕ್ಕೆ ಶಿಫ್ಟ್ ಆಗಿವೆ.

ಸ್ಟಾರ್ ಹೊಟೇಲ್‌ಗಳು, ರೆಸಾರ್ಟ್, ಕ್ಲಬ್, ಕನ್ವೆಷನ್ ಹಾಲ್, ಪಾರ್ಟಿ ಹಾಲ್‌, ಖಾಸಗಿ ತೋಟಗಳಲ್ಲಿ ಹೊಸ ವರ್ಷದ ರಾತ್ರಿಯನ್ನು ಭರ್ಜರಿಯಾಗಿ ಕಳೆಯಲು ಸಿದ್ಧತೆಗಳು ನಡೆದಿವೆ. ಪಾರ್ಟಿ ವೇಳೆ ಓಪನ್ ಏರ್ ಕನ್ಸರ್ಟ್, ಸೆಲೆಬ್ರಿಟಿ ಡಿ.ಜೆ ಸಂಗೀತ, ಫ್ಯಾಷನ್ ಶೋ, ಬೆಲ್ಲಿ ಡ್ಯಾನ್ಸರ್ಸ್, ಸೆಲೆಬ್ರಿಟಿ ಮೀಟ್ ಅಪ್, ಆಡಿಯೋ ವಿಷ್ಯುವಲ್ ಶೋ, ಮಿಡ್‌ನೈಟ್ ಫೈರ್ ಶೋ, ಲೈವ್ ಫುಡ್ ಆ್ಯಂಡ್ ಬಾರ್ ಸ್ಟಾಲ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಪಾರ್ಟಿಗಳ ಪ್ರವೇಶ ಶುಲ್ಕ 500 ರು.ಯಿಂದ 10 ಸಾವಿರ ರು.ವರೆಗೂ ನಿಗದಿಪಡಿಸಲಾಗಿದೆ.

ನಗರದ ಜಂಜಾಟದಿಂದ ತಪ್ಪಿಸಿಕೊಳ್ಳಲು, ಯಾವುದೇ ಅಡ್ಡಿ ಆತಂಕವಿಲ್ಲದೇ ಮೋಜು, ಮಸ್ತಿ ಮಾಡಲು ಪಾರ್ಟಿಗಳು ನಗರದಿಂದ ಸುಮಾರು 50-60 ಕಿ. ಮೀ ದೂರದ ಬಿಡದಿ, ಆನೇಕಲ್, ದೇವನಹಳ್ಳಿ, ಕನಕಪುರ ಸುತ್ತಲಿನ ಸ್ಥಳಗಳಿಗೆ ಶಿಫ್ಟ್ ಆಗಿವೆ. ವೇಗವಾಗಿ ಪಾರ್ಟಿ ಬುಕ್ಕಿಂಗ್ ಆಗುತ್ತಿವೆ. ಹೊರ ವಲಯಗಳಲ್ಲಿ ಪಾರ್ಟಿ ಮಾಡಲು ಯುವ ಸಮುದಾಯ ಹೆಚ್ಚು ಆಸಕ್ತರಾಗಿದ್ದಾರೆ.

ಮುಕ್ತ ಪಾರ್ಟಿಗೆ ಅವಕಾಶ:  

ನಗರದಲ್ಲಾದರೆ ಪೊಲೀಸ್, ನೆರೆ ಹೊರೆಯವರು ಸೇರಿದಂತೆ ಏನಾದರೂ ಒಂದು ಕಿರಿಕಿರಿ ಇದ್ದೇ ಇರುತ್ತದೆ. ಹೀಗಾಗಿ, ಹೊರ ವಲಯದಲ್ಲಿನ ರೆಸಾರ್ಟ್‌ನಲ್ಲಿ ಕಂಪನಿಯ ಸಹೋದ್ಯೋಗಿಗಳು ಸೇರಿ ಹೊಸ ವರ್ಷದ ಪಾರ್ಟಿ ಬುಕ್ಕಿಂಗ್ ಮಾಡಿದ್ದೇವೆ. 31ರ ಸಂಜೆಯೇ ಪಾರ್ಟಿ ಆರಂಭವಾಗುತ್ತದೆ. ಕೇಕ್, ಮದ್ಯ, ಪಟಾಕಿ, ನೃತ್ಯ, ಡಿ.ಜೆ ಸಂಗೀತ, ತರೆಹೇವಾರಿ ಭಕ್ಷ್ಯಗಳು, ವಿವಿಧ ಮನೋರಂಜನಾ ಚಟುವಟಿಕೆಗಳು ಹೊಸ ವರ್ಷದ ಪಾರ್ಟಿಯಲ್ಲಿವೆ ಎಂದು ಟೊಯೋಟಾ ಕಂಪನಿಯ ಉದ್ಯೋಗಿಯೊಬ್ಬರು ತಿಳಿಸಿದರು.

250 ಕೋಟಿ ಅಬಕಾರಿ ಆದಾಯ ನಿರೀಕ್ಷೆ

ಬೆಂಗಳೂರು ನಗರ ಮತ್ತು ಹೊರ ವಲಯದ ಸ್ಟಾರ್ ಹೊಟೇಲ್‌ಗಳು, ರೆಸಾರ್ಟ್, ಪಬ್, ರೆಸ್ಟೋರೆಂಟ್, ಪಾರ್ಟಿ ಹಾಲ್‌ಗಳು ನಾಲ್ಕೈದು ದಿನಗಳು ಮೊದಲೇ ಬಹುತೇಕ ಬುಕ್ಕಿಂಗ್ ಆಗಿವೆ. ಹೊಸ ವರ್ಷದ ಉತ್ಸಾಹ ಈ ವರ್ಷ ಜೋರಾಗಿದೆ. ಹೊಸ ವರ್ಷದ ಆಚರಣೆಯ ಒಂದೇ ದಿನ ಅಬಕಾರಿ ಇಲಾಖೆಗೆ 250 ಕೋಟಿ ರು.ಗೂ ಮೀರಿ ಆದಾಯದ ನಿರೀಕ್ಷೆ ಇದೆ. ನಾವು ರಾತ್ರಿ 2 ಗಂಟೆವರೆಗೂ ಬಿಸಿನೆಸ್ ತೆರೆದಿಡಲು ಅವಕಾಶ ಕೇಳಿದ್ದವು. ಇಲಾಖೆಯಿಂದ 1ರವರೆಗೆ ಅನುಮತಿ ನೀಡಲಾಗಿದೆ. ನಿಯಮಗಳ ಅನುಸಾರ ಪಾರ್ಟಿಗೆ ಅವಕಾಶ ನೀಡಲಾಗುತ್ತದೆ ಎಂದು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಹೇಳಿದರು.

ಹೊಸ ವರ್ಷದ ಪಾರ್ಟಿಗಳಿಗೆ ಜನರ ಸ್ಪಂದನೆ ಉತ್ತಮವಾಗಿದೆ. ವರ್ಷಕೊಮ್ಮೆ ಪಬ್ ಮತ್ತು ಬಾರ್‌ಗಳಲ್ಲಿ ಹೆಚ್ಚು ವ್ಯಾಪಾರ ಇರುತ್ತದೆ. ಆದರೆ, ಪೊಲೀಸ್ ಇಲಾಖೆಯಿಂದ ಅನೇಕ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಹೀಗಾಗಿ, ತಮ್ಮ ಬಿಸಿನೆಸ್ ಸ್ಥಳಗಳಲ್ಲಿ ಲೋಪಗಳು ಇರುವವರು ಉತ್ತಮ ಬಿಸಿನೆಸ್ ಮಾಡುವುದು ಕಷ್ಟವಾಗುತ್ತದೆ ಎಂದು ಬೆಂಗಳೂರು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಗೋಪಾಲ್ ಶೆಟ್ಟಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸರ್ಕಾರಿ ಭೂಮಿ ಒತ್ತುವರಿಗೆ ಅವಕಾಶ ನೀಡಲ್ಲ: ಡಿಸಿಎಂ
ಏಕಾದಶಿ ಪ್ರಯುಕ್ತ ಶರವಣ ಟ್ರಸ್ಟ್‌ನಿಂದ ಲಕ್ಷ ಲಡ್ಡು ಹಂಚಿಕೆ