- ಕ್ಯಾಂಪ್‌ಬೆಲ್ ವಿಟ್‌ವರ್ಥ್ ಜತೆ ಸಪ್ತಪದಿ ತುಳಿದ ನ್ಯೂಜಿಲೆಂಡ್ ಉದ್ಯೋಗಿ ಪೂಜಾ । ಪಿ.ನಾಗರಾಜ, ರಾಣಿ ದಂಪತಿ ಪುತ್ರಿ ವಧು
- ದೇಶಿ ವಧುಗೆ ವಿದೇಶಿ ತಾಳಿ ಕಟ್ಟುವ ಶುಭ ವೇಳೆಗೆ ಸಾಕ್ಷಿಯಾದ ದಾವಣಗೆರೆ ರೆಸಾರ್ಟ್ - ಉಡುಗೆಯಲ್ಲಿ ಹಿಂದೂ ಸಂಪ್ರದಾಯ ಮೆರೆದ ವರನ ಹೆತ್ತವರು, ಬಳಗ, ಕುಟುಂಬ ವರ್ಗ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ನ್ಯೂಜಿಲೆಂಡ್ ದೇಶದ ವರನೊಬ್ಬ ಕನ್ನಡದ ಯುವತಿಯ ಕೈಹಿಡಿಯುವ ಮೂಲಕ ಉಭಯ ಕುಟುಂಬದಲ್ಲಿ ಸಂತಸ ಮೂಡಿಸಿದ ಕ್ಷಣಗಳು ನಗರದಲ್ಲಿ ಬುಧವಾರ ವರದಿಯಾಗಿದೆ.ನಗರದ ಖಾಸಗಿ ರೆಸಾರ್ಟ್‌ವೊಂದರಲ್ಲಿ ನ್ಯೂಜಿಲೆಂಡ್ ವಾಸಿಯಾದ ಕ್ಯಾಂಪ್‌ಬೆಲ್ ವಿಟ್‌ವರ್ಥ್ ಹಾಗೂ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದ ಪೂಜಾ ನಾಗರಾಜ ಮದುವೆಗೆ ದಾವಣಗೆರೆಯ ಖಾಸಗಿ ರೆಸಾರ್ಟ್‌ನಲ್ಲಿದ್ದ ಉಭಯ ಕುಟುಂಬಸ್ಥರು, ಬಂಧು-ಬಳಗ, ಸ್ನೇಹಿತರು ಸಾಕ್ಷಿಯಾದರು.
ಪೂಜಾ ನಾಗರಾಜ್ ಅವರು ಚಳ್ಳಕೆರೆಯ ಪಿ.ನಾಗರಾಜ, ರಾಣಿ ನಾಗರಾಜ ದಂಪತಿ ಪುತ್ರಿಯಾಗಿದ್ದು, ನ್ಯೂಜಿಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕ್ಯಾಂಪ್‌ಬೆಲ್ ವಿಟ್‌ವರ್ಥ್ ಜತೆ ಸಪ್ತಪದಿಯನ್ನೂ ತುಳಿದಿದ್ದಾರೆ. ಹಿಂದೂ ಪದ್ಧತಿಯಂತೆ ವಧು-ವರರ ಅರಿಷಿಣ ಕಾರ್ಯ, ವಿವಾಹ ಸಂಪ್ರದಾಯಗಳ ಜೊತೆಗೆ ತಾಳಿ ಕಟ್ಟುವ ವಿಶೇಷ ಕಾರ್ಯಗಳಿಗೆ ಉಭಯ ಕುಟುಂಬದವರು ಹಾಜರಿದ್ದು, ನವಜೋಡಿಗೆ ಹರಸಿದರು.ಮಗಳ ಇಚ್ಛೆಯಂತೆ ಪೋಷಕರು ನ್ಯೂಜಿಲೆಂಡ್ ವರನಿಗೆ ಧಾರೆ ಎರೆದು, ಶುಭ ಕೋರಿ, ಆಶೀರ್ವದಿಸಿದರು. ನ್ಯೂಜಿಲೆಂಡ್ ವರನಿಗೆ ಭಾರತದ, ಅದರಲ್ಲೂ ಅಪ್ಪಟ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ತನ್ನ ಮದುವೆ ವಿಶೇಷ ರೀತಿಯಲ್ಲಿ ಆಗುತ್ತಿದೆ ಎಂಬುದು ವಿಶೇಷ ಖುಷಿಗೆ ಕಾರಣವಾಗಿತ್ತು. ವಧು ಪೂಜಾ ಅವರು ಕ್ಯಾಂಪ್‌ಬೆಲ್ ವಿತ್ ವರ್ಥ್‌ಗೆ ತಮ್ಮ ವಿವಾಹ ಆಚರಣೆ, ಪದ್ಧತಿ, ಸಂಪ್ರದಾಯಗಳ ಬಗ್ಗೆ ವಿವರಿಸುತ್ತಿದ್ದುದು ಎಲ್ಲರ ಗಮನ ಸೆಳೆಯಿತು.
ವರದ ಹೆತ್ತವರು ಸಹ ಭಾರತೀಯ ಸಾಂಪ್ರಾದಾಯಿಕ ಉಡುಪಿನಲ್ಲಿ ಗಮನ ಸೆಳೆದರು. ವರನ ತಾಯಿ ಸೇರಿದಂತೆ ಅಲ್ಲಿನ ಹೆಣ್ಣುಮಕ್ಕಳು ಸಹ ಭಾರತೀಯ ನಾರಿಯರಂತೆ ಸೀರೆಯುಟ್ಟಿದ್ದರೆ, ತಂದೆ ಸ್ಥಳೀಯ ಶೈಲಿಯಲ್ಲಿ ಶರ್ಟ್, ಪಂಚೆ, ಶಲ್ಯ ಧರಿಸಿದ್ದರು. ಒಟ್ಟಾರೆ, ಭಾರತ-ನ್ಯೂಜಿಲೆಂಡ್ ದೇಶವಾಸಿಗಳ ಮದುವೆ ಹಿನ್ನೆಲೆ ರೆಸಾರ್ಟ್‌ನಲ್ಲಿ ಸಂಭ್ರಮ ಮನೆಮಾಡಿತ್ತು.- - -
-24ಕೆಡಿವಿಜಿ1, 2, 3.ಜೆಪಿಜಿ:ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಪೂಜಾ ನಾಗರಾಜ, ನ್ಯೂಜಿಲೆಂಡ್‌ನ ಕ್ಯಾಂಪ್‌ಬೆಲ್ ವಿತ್‌ವರ್ಥ್ ವಿವಾಹ ದಾವಣಗೆರೆ ಖಾಸಗಿ ರೆಸಾರ್ಟ್‌ವೊಂದರಲ್ಲಿ ನಡೆದಿದ್ದು, ಉಭಯ ಕುಟುಂಬಸ್ಥರು, ಬಂಧು-ಬಳಗ, ಸ್ನೇಹಿತರು ವಿವಾಹ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.