ಬೆಂಗಳೂರು : ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಮತದಾನದ ದಿನವಾದ ಶುಕ್ರವಾರ ಶುಭಮಹೂರ್ತ ಇದ್ದ ಕಾರಣ ಅನೇಕ ಕಡೆ ಮದುವೆ ಸೇರಿ ಹಲವು ಶುಭ ಕಾರ್ಯಗಳೂ ಹೆಚ್ಚಿನ ಸಂಖ್ಯೆಯಲ್ಲಿ ನಡೆದಿದ್ದು, ಈ ವೇಳೆ ಅನೇಕ ಕಡೆ ವಧು-ವರರು ವಿವಾಹದ ಸಂಭ್ರಮ, ಗದ್ದಲದ ನಡುವೆಯೂ ತಮ್ಮ ಹಕ್ಕು ಚಲಾಯಿಸಿ ಇತರರಿಗೆ ಸ್ಫೂರ್ತಿಯಾದರು. ರಾಜ್ಯದಲ್ಲಿ 10ಕ್ಕೂ ಹೆಚ್ಚು ವಧು-ವರರು ಮದುವೆ ದಿರಿಸಿನಲ್ಲೇ ಮತಕೇಂದ್ರಕ್ಕೆ ತೆರಳಿ ಮತ ಚಲಾಯಿಸಿದ್ದು ಎಲ್ಲರ ಗಮನ ಸೆಳೆಯಿತು.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಖಾಂಡ್ಯ ಹೋಬಳಿಯ ಶಿರಗೋಳದ ಯುವಕ ನಿತೀಶ್, ನರಸಿಂಹರಾಜಪುರ ತಾಲೂಕಿನ ಹಂತುವಾನಿ ಸಮೀಪದ ನಾಗರ ಬನ ಹಡ್ಲುವಿನ ಶಿವಕುಮಾರ್, ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮದಲ್ಲಿ ತೀರ್ಥೇಶ್, ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿ ಚೇತನ್, ಉಡುಪಿಯ ಕುಂದಾಪುರ ಪುರಸಭೆ ವ್ಯಾಪ್ತಿಯ ಹೊಂಚಾರು ಬೆಟ್ಟು ಮತಗಟ್ಟೆಯಲ್ಲಿ ಮಧುಮಗಳು ಹೃತಿಕಾ, ಯಡಬೆಟ್ಟು ಗ್ರಾಮದಲ್ಲಿ ಸ್ಫೂರ್ತಿ ಆಚಾರ್ಯ, ವಡೇರಹೋಬಳಿಯ ಅಶ್ವಿನಿ ಮದುವೆ ದಿರಿಸಿನಲ್ಲೇ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಮಂಜುನಾಥ್.ಕೆ. ಮತ್ತು ಸ್ಮಿತಾ, ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿ ಮಾಧುರಿ ಮತ್ತು ನಾಗರಾಜ್, ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಗಣೇಶ್ ಮತ್ತು ಕಾವ್ಯ ಜೋಡಿ ಮದುವೆ ಬೆನ್ನಲ್ಲೇ ತಮ್ಮ ಮತದಾನದ ಹಕ್ಕು ಚಲಾಯಿಸಿದರು.
ಮಗನ ಮದುವೆ ಮುಗಿಸಿ ಬಂದು
ಮತ ಹಾಕಿದ ಶಾಸಕ ಗೋಪಾಲಯ್ಯ
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಬಿಜೆಪಿ ಶಾಸಕ ಕೆ.ಗೋಪಾಲಯ್ಯ ತಮ್ಮ ಮಗನ ಮದುವೆ ಮುಗಿಸಿ ಕುಟುಂಬ ಸಮೇತರಾಗಿ ಆಗಮಿಸಿ ಮತ ಹಾಕಿದರು.