ನವ ವಧು-ವರರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲಿ: ಸಂಸದ ತುಕಾರಾಂ

KannadaprabhaNewsNetwork | Published : Sep 10, 2024 1:32 AM

ಸಾರಾಂಶ

ನಾನು ಕೇವಲ ಸಂಸದನಾಗಿ ಅಲ್ಲ, ಸಹೋದರನಾಗಿ ಕ್ಷೇತ್ರದಲ್ಲಿ ಸೇವೆ ಮಾಡುವೆ. ಹೊಸಪೇಟೆ ನಗರದಲ್ಲೂ ಶೀಘ್ರವಾಗಿ ಜನ ಸಂಪರ್ಕ ಕಚೇರಿ ತೆರೆಯುವೆ.

ಹೊಸಪೇಟೆ: ನವ ವಧು-ವರರು ಪ್ರೀತಿ, ವಿಶ್ವಾಸ, ಸೌಹಾರ್ದದಿಂದ ಬಾಳಬೇಕು. ತಂದೆ, ತಾಯಿಗಳಿಗೆ, ಗುರು ಹಿರಿಯರಿಗೆ ಗೌರವ ತರಬೇಕು. ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು ಎಂದು ಸಂಸದ ಈ. ತುಕಾರಾಂ ಹೇಳಿದರು.

ನಗರದ ಅಂಜುಮನ್ ಶಾದಿ ಮಹಲ್‌ ಆವರಣದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಅಂಜುಮನ್ ಕಿದ್ಮತೆ ಇಸ್ಲಾಂ ಕಮಿಟಿ ವತಿಯಿಂದ ಭಾನುವಾರ ನಡೆದ ನಾಲ್ಕನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿಯ ಮೂರು ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆರತಿಗೊಬ್ಬಳು ಮಗಳು, ಕೀರ್ತಿಗೊಬ್ಬ ಮಗ ಎಂಬ ನಾಣ್ಣುಡಿಯಂತೆ ಮಕ್ಕಳನ್ನು ಹೊಂದಬೇಕು ಎಂದರು.ನಾನು ಕೇವಲ ಸಂಸದನಾಗಿ ಅಲ್ಲ, ಸಹೋದರನಾಗಿ ಕ್ಷೇತ್ರದಲ್ಲಿ ಸೇವೆ ಮಾಡುವೆ. ಹೊಸಪೇಟೆ ನಗರದಲ್ಲೂ ಶೀಘ್ರವಾಗಿ ಜನ ಸಂಪರ್ಕ ಕಚೇರಿ ತೆರೆಯುವೆ. ಶಿಕ್ಷಣ, ಆರೋಗ್ಯ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ಜೊತೆಗಿರುವೆ ಎಂದರು.

ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಜ.ಶ್ರೀಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳ ಮೂಲಕ ಮಾನವ ಸಂಪನ್ಮೂಲವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಇತ್ತೀಚಿನ ಯುವಜನತೆ ದುಶ್ಚಟಗಳಿಗೆ ಬಲಿಯಾಗದೆ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯದ ಮಹತ್ವವನ್ನು ತಿಳಿದುಕೊಂಡು ಬಾಳಬೇಕು ಎಂದು ಆಶೀರ್ವಚನ ನೀಡಿದರು.ಹುಡಾ ಮತ್ತು ಅಂಜುಮನ್ ಕಮಿಟಿ ಅಧ್ಯಕ್ಷ ಮಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಅಂಜುಮನ್ ಸಂಸ್ಥೆ ಉಚಿತ ಟೈಲರಿಂಗ್ ತರಬೇತಿ, ಕಂಪ್ಯೂಟರ್ ತರಬೇತಿ ಹಾಗೂ ಆಸ್ಪತ್ರೆ ಉಚಿತ ತಪಾಸಣೆ ರೀತಿಯ ಹಲವಾರು ಸೇವಾ ಕಾರ್ಯಕ್ರಮ ನೀಡಿದೆ. ಆಸ್ಪತ್ರೆ ನಡೆಸಲು ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ನಡೆಸಲು ಕಟ್ಟಡದ ಅವಶ್ಯಕತೆ ಇದ್ದು, ಅದಕ್ಕೆ ಸುಮಾರು ಎರಡೂವರೆ ಕೋಟಿ ರು. ಅವಶ್ಯಕತೆ ಇದೆ. ಕೇಂದ್ರ ಸರ್ಕಾರದ ಅನುದಾನ ಅಥವಾ ರಾಜ್ಯ ಸರ್ಕಾರದ ಅನುದಾನದಲ್ಲಿ ಸಹಾಯ ಮಾಡಬೇಕು ಎಂದು ಸಂಸದ ತುಕಾರಂ ಅವರ ಬಳಿ ಮನವಿ ಮಾಡಿದರು.

ಮುಸ್ಲಿಂ ಧರ್ಮಗುರುಗಳಾದ ಮೆಹಬೂಬ್ ಪೀರ್ ಸಾಬ್, ಎಸ್ಪಿ ಶ್ರೀಹರಿಬಾಬು, ಮುಖಂಡರಾದ ಬಿ.ಎಸ್. ಶ್ಯಾಮ್ ಸಿಂಗ್, ಸಂತೋಷ್, ಸಾಲಿ ಸಿದ್ದಯ್ಯ, ನಗರಸಭಾ ಸದಸ್ಯರಾದ ಗೌಸ್, ಅಬ್ದುಲ್ ಖದೀರ್‌, ಮುಖಂಡರಾದ ಫಯಾಜ್, ನಾಸಿರ್, ಖುರೇಶ್ ಅಮ್ಜದ್, ಅಬ್ದುಲ್ ರವುಫ್, ಅಬ್ದುಲ್ ಕಯುಮ್, ಎಂ.ಎಂ. ಅಹಮದ್ ಖಾನ್, ಜಹಾಂಗೀರಸಾಬ್, ನಾಜಿಮಸಾಬ್, ಫಜಲ್ ಉಲ್ಲಾಸಾಬ, ಅಬೂಬಕ್ಕರ್ ಅಶ್ರಫ್, ಅನ್ಸರ್ ಬಾಷಾ, ಫೈರೋಜ್, ದರ್ವೇಶ್ ಮೈನುದ್ದೀನ್, ಗುಲಾಮ್ ರಸೂಲ್, ಮೊಹಮ್ಮದ್ ಮೋಹ್ನಿನ್‌, ಮನ್ಸೂರ್, ಖದೀರ್ ಮತ್ತಿತರರಿದ್ದರು.

Share this article