ಬಬಲಾದಿ ಮಠದ ಸದಾಶಿವ ಮುತ್ಯಾ ಬಂಧನ ಸುದ್ದಿ ಸುಳ್ಳು

KannadaprabhaNewsNetwork |  
Published : Mar 27, 2025, 01:04 AM IST
ಜಮಖಂಡಿಯ ರಮಾನಿವಾಸ ನಿರೀಕ್ಷಣಾ ಮಂದಿರದಲ್ಲಿ ನೂತನ ಬಬಲಾದಿ ಮಠದ ಸದಾಶಿವ ಮುತ್ಯಾ, ಶಿವರುದ್ರಯ್ಯ ಮುತ್ಯಾ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.  | Kannada Prabha

ಸಾರಾಂಶ

ಗೋಕಾಕ ಮಹಾಲಕ್ಷ್ಮೀ ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ನ ಅವ್ಯವಹಾರ ಮೋಸದ ಪ್ರಕರಣಕ್ಕೂ ಶ್ರೀಮಠಕ್ಕೂ ಯಾವುದೇ ಸಂಬಂಧವಿಲ್ಲ

ಕನ್ನಡಪ್ರಭ ವಾರ್ತೆ ಜಮಖಂಡಿ

ನಗರದ ನೂತನ ಬಬಲಾದಿ ಮಠದ ಪೂಜ್ಯರಾದ ಸದಾಶಿವ ಮುತ್ಯಾ ಅವರ ಬಂಧನವಾಗಿದೆ ಎಂಬುದು ಸುಳ್ಳು ಸುದ್ದಿ ಎಂದು ಕಿರಿಯ ಸ್ವಾಮೀಜಿ ಶಿವರುದ್ರಯ್ಯ ಮುತ್ಯಾ ಸ್ಪಷ್ಟಪಡಿಸಿದ್ದಾರೆ.

ರಮಾನಿವಾಸ ನಿರೀಕ್ಷಣಾ ಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗೋಕಾಕ ಮಹಾಲಕ್ಷ್ಮೀ ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ನ ಅವ್ಯವಹಾರ ಮೋಸದ ಪ್ರಕರಣಕ್ಕೂ ಶ್ರೀಮಠಕ್ಕೂ ಯಾವುದೇ ಸಂಬಂಧವಿಲ್ಲ. ಪ್ರಕರಣದ ಆರೋಪಿ ಸಾಗರ ಸಬಕಾಳೆ ಎಂಬುವರ ಖಾತೆಯಿಂದ ಹಣ ವರ್ಗಾವಣೆ ಆದ ಬಗ್ಗೆ ತನಿಖೆ ನಡೆಯುತ್ತಿದ್ದು, ಶ್ರೀಗಳನ್ನು ವಿಚಾರಣೆಗೆ ಕರಿಸಿದ್ದಾರೆ. ಕಾನೂನಿನ ಪ್ರಕಾರ ತನಿಖೆಗೆ ಹಾಜರಾಗಿ ತನಿಖಾಧಿಕಾರಿಗಳಿಗೆ ವಿವರಣೆ ನೀಡಿದ್ದಾಗಿ ತಿಳಿಸಿದ ಅವರು, ಶ್ರೀಗಳ ಬಂಧನವಾಗಿದೆ ಎಂಬ ಸುಳ್ಳುಸುದ್ದಿ ಹರಿದಾಡುತ್ತಿದೆ. ಮಠದ ಭಕ್ತರು ಈ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಎಂದು ಮನವಿ ಮಾಡಿದರು.

2023ರಲ್ಲಿ ಸಬಕಾಳೆ ಎಂಬುವರು ಮಠಕ್ಕೆ ಆಗಮಿಸಿ ಮಠದ ಅಭಿವೃದ್ಧಿ ಹಾಗೂ ದಾಸೋಹಕ್ಕೆ ದೇಣಿಗೆ ನೀಡಿದ್ದು ಸತ್ಯ. ಹಂತ ಹಂತವಾಗಿ ಸುಮಾರು ₹26 ಲಕ್ಷ ಬ್ಯಾಂಕ್‌ ಮೂಲಕ ವರ್ಗಾವಣೆ ಮಾಡಿದ್ದಾರೆ. ಅದನ್ನು ತನಿಖಾಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಯಾವುದೇ ಭಕ್ತರು ಮಠಕ್ಕೆ ದೇಣಿಗೆ ನೀಡಿದಾಗ ಅದನ್ನು ಹೇಗೆ ಸಂಪಾದಿಸಿದೆ ಎಂದು ಕೇಳುವ ಪರಿಪಾಠ ಇರುವುದಿಲ್ಲ. ಆದ್ದರಿಂದ ಅನೇಕ ಭಕ್ತರು ಮಠಕ್ಕೆ ದೇಣಿಗೆ ನೀಡುತ್ತಾರೆ. ಅವರ ಬಗ್ಗೆ ವಿಚಾರಿಸುವುದು ಸಮಂಜಸ ಅಲ್ಲ ಅಲ್ಲವೇ ಎಂದು ಪ್ರಶ್ನಿಸಿದರು.

ಮಠದ ಭಕ್ತರಿಗೆ ಅನುಕೂಲ ಕಲ್ಪಿಸಿಕೊಡುವುದು, ಮಠದ ಅಭಿವೃದ್ಧಿ ಹಾಗೂ ಪ್ರತಿಸೋಮವಾರ ಹಾಗೂ ಅಮಾವಾಸ್ಯೆಯ ದಿನ ದಾಸೋಹ ನಡೆಸುತ್ತಿರುವುದಾಗಿ ತಿಳಿಸಿದರು. ಸದಾಶಿವ ಮುತ್ಯಾ, ಚಿಕ್ಕಪ್ಪ ಮುತ್ಯಾ ಹಾಗೂ ಚಂದ್ರವ್ವ ತಾಯಿಯ ಆಶೀರ್ವಾದವಿದೆ. ಯಾವುದೇ ಹುನ್ನಾರಕ್ಕೆ ಭಯ ಪಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜಮಖಂಡಿಯ ಹೊಸ ಬಬಲಾದಿ ಮಠದ ಏಳಿಗೆ ಸಹಿಸದ ಕೆಲವರು ಹುನ್ನಾರ ನಡೆಸುತ್ತಿದ್ದು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಕಳೆದ ಅನೇಕ ದಿನಗಳಿಂದ ಅವರ ಪ್ರಯತ್ನ ಸಫಲವಾಗಿಲ್ಲ ಎಂದರು.ಸದಾಶಿವ ಮುತ್ಯಾ ಮಾತನಾಡಿ, ಮಾ.21 ಹಾಗೂ 22ರಂದು ಗೋಕಾಕನ ತನಿಖಾಧಿಕಾರಿಗಳನ್ನು ಭೇಟಿಯಾಗಿ ವಿಚಾರಣೆ ಎದುರಿಸಿ ಸಮರ್ಪಕವಾಗಿ ಉತ್ತರ ನೀಡಿ ಬಂದಿದ್ದೇನೆ ಎಂದು ವಿವರಣೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಹೊಸಬಬಲಾದಿ ಮಠದ ಸದಾಶಿವ ಮುತ್ಯಾ, ಸೂರ್ಯಕಿರಣ ಹಿರೇಮಠ, ವೆಂಕಪ್ಪ ಕುಂದಗೋಳ ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...