ಪತ್ರಿಕೆಗಳು ಮಾನವ ಕಳಕಳಿಯ ಪ್ರತಿಬಿಂಬಗಳು

KannadaprabhaNewsNetwork |  
Published : Dec 25, 2025, 03:15 AM IST
 | Kannada Prabha

ಸಾರಾಂಶ

ಬಡ ವಿದ್ಯಾರ್ಥಿಗಳಿಗೆ ಉಚಿತ ಸೀಟ್‌ ಕೊಡಿಸುವ ಮೂಲಕ ವೇದಿಕೆಯಾಗುವ ಪತ್ರಿಕೆಗಳು ಮಾನವ ಕಳಕಳಿಯ ಪ್ರತಿಬಿಂಬಗಳು ಕೂಡಾ ಹೌದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬಡ ವಿದ್ಯಾರ್ಥಿಗಳಿಗೆ ಉಚಿತ ಸೀಟ್‌ ಕೊಡಿಸುವ ಮೂಲಕ ವೇದಿಕೆಯಾಗುವ ಪತ್ರಿಕೆಗಳು ಮಾನವ ಕಳಕಳಿಯ ಪ್ರತಿಬಿಂಬಗಳು ಕೂಡಾ ಹೌದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.

ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ತಾಲೂಕು ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸೀಟು ತೆಗೆದುಕೊಳ್ಳಲು ಪರದಾಡುವ ಬಡ ವಿದ್ಯಾರ್ಥಿಗಳು, ಚಿಕಿತ್ಸೆಗಾಗಿ ಹಂಬಲಿಸುವ ಬಡ ರೋಗಿಗಳು ಹೀಗೆ ಎಲ್ಲ ವಿಷಯಗಳನ್ನು ಮಾನವೀಯ ಅಂತಃಕರಣದೊಂದಿಗೆ ಆ ಸುದ್ದಿಗಳನ್ನು ಪ್ರತಿಬಿಂಬಿಸುವ ಪತ್ರಿಕೆಗಳಿಂದಾಗಿ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಸೀಟು ದೊರಕಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಕಿದೆ ಎಂದರು.

ರಾಜ್ಯಸಭೆ ಹಾಗೂ ವಿಧಾನ ಪರಿಷತ್‌ಗಳು ಅಂದಿನ ಅನುಭವ ಮಂಟಪದ ಸ್ವರೂಪಗಳು, ಚುನಾವಣೆಯಿಂದ ಆಯ್ಕೆಯಾಗಲು ಸಾಧ್ಯವಾಗದ ಸಣ್ಣ ಸಮುದಾಯಗಳಿಗೆ, ಕ್ರೀಡೆ, ಪತ್ರಿಕೋದ್ಯಮ, ಸಾಹಿತ್ಯ, ಸಂಗೀತದಲ್ಲಿ ದಿಗ್ಗಜರು ಆಡಳಿತಕ್ಕೆ ಮಾರ್ಗದರ್ಶನ ನೀಡಲು ರಾಜ್ಯಸಭೆ, ವಿಧಾನ ಪರಿಷತ್ ಅಸ್ತಿತ್ವದಲ್ಲಿವೆ. ಆದರೆ ಈಗ ಅವುಗಳು ಸಹ ರಿಯಲ್ ಎಸ್ಟೇಟ್ ಉದ್ಯಮಿದಾರರ ತಾಣವಾಗುತ್ತಿರುವುದು ನೋವಿನ ಸಂಗತಿ ಎಂದರು.

ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ, ಮೊಹರೆ ಹನುಮಂತರಾಯರಂತಹ ಅನೇಕ ಧೀಮಂತ ಪತ್ರಕರ್ತರು ಪತ್ರಿಕಾ ಕ್ಷೇತ್ರವನ್ನು ಬೆಳಗಿದ್ದಾರೆ ಎಂದರು. ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಪತ್ರಕರ್ತರ ಭವನಕ್ಕೆ ಪೂರಕ ಸೌಲಭ್ಯ ಹಾಗೂ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ₹10 ಲಕ್ಷ ಅನುದಾನ ಒದಗಿಸುವುದಾಗಿ ವಾಗ್ದಾನ ಮಾಡಿದರು.

ಕಾನಿಪ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, ನೈಜ ಪತ್ರಕರ್ತರು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ತಾವೇ ಹೋರಾಟ ಮಾಡುವ ಅವಶ್ಯಕತೆ ಇದೆ. ಇಂದಿನ ಬ್ಲಾಕ್‌ಮೇಲ್ ಮಾಡುವ ಕೆಲವು ವಿಸಿಟಿಂಗ್ ಕಾರ್ಡ್ ಪತ್ರಕರ್ತರ ಮಧ್ಯೆ ನೈಜತೆ, ನಿಖರತೆಯ ಜವಾಬ್ದಾರಿ ನಿಭಾಯಿಸುವತ್ತ ಮುನ್ನಡೆಯಬೇಕಿದೆ ಎಂದರು. ಸದುದ್ದೇಶದಿಂದ ಪತ್ರಿಕೋದ್ಯಮಕ್ಕೆ ಧುಮುಕುವ ಎಲ್ಲರಿಗೂ ಬೆನ್ನು ತಟ್ಟಿ ಪ್ರೋತ್ಸಾಹಿಸೋಣ, ಬ್ಲಾಕ್ ಮೇಲ್ ಅನುಸರಿಸಿ ಪತ್ರಿಕೋದ್ಯಮದ ಪವಿತ್ರ ವೃತ್ತಿಗೆ ಮಸಿ ಬಳಿಯುವವರ ವಿರುದ್ಧ ಧ್ವನಿ ಎತ್ತೋಣ, ಇಂದು ಕಳೆದು ಹೋಗಿರುವ ಪತ್ರಿಕೋದ್ಯಮದ ಘನತೆ ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ಕಂಕಣ ಬದ್ದರಾಗೋಣ ಎಂದರು.

ಕಾನಿಪ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಅಶೋಕ ಯಡಳ್ಳಿ ಮಾತನಾಡಿ, ಮಹತ್ವದ ಜವಾಬ್ದಾರಿಯನ್ನು ಪತ್ರಕರ್ತ ಬಾಂಧವರು ನನ್ನ ಹೆಗಲಿಗೆ ಏರಿಸಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪತ್ರಕರ್ತರ ಧ್ವನಿಯಾಗಿ ಕಾರ್ಯ ಮಾಡುವೆ, ಎಲ್ಲರ ಆಶೀರ್ವಾದವೇ ನನಗೆ ಶ್ರೀರಕ್ಷೆ ಎಂದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ, ಹಿರಿಯ ಪತ್ರಕರ್ತ ಗೋಪಾಲ ನಾಯಕ, ಕಾನಿಪ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ರಾಜ್ಯ ಕಾರ್ಯದರ್ಶಿ ಪುಂಡಲೀಕ ಬಾಳೋಜಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ, ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಪ್ರಕಾಶ ಬೆಣ್ಣೂರ, ಉಪಾಧ್ಯಕ್ಷರಾದ ಶಶಿಕಾಂತ ಮೆಂಡೆಗಾರ, ಬಸವರಾಜ ಉಳ್ಳಾಗಡ್ಡಿ, ಮೊಹ್ಮದಸಮೀರ ಇನಾಮಮದಾರ, ಕಾರ್ಯದರ್ಶಿಗಳಾದ ಅವಿನಾಶ ಬಿದರಿ, ಸದ್ದಾಂ ಹುಸೇನ ಜಮಾದಾರ, ವಿನೋದ ಸಾರವಾಡ, ಕೋಶಾಧ್ಯಕ್ಷ ರಾಹುಲ ಆಪ್ಟೆ, ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯರು, ವಿವಿಧ ಪದಾಧಿಕಾರಿಗಳು, ತಾಲೂಕು ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಎಲ್ಲ ತಾಲೂಕು ಘಟಕದ ಪದಾಧಿಕಾರಿಗಳಿಗೆ ಹೃದಯಸ್ಪರ್ಶಿಯಾಗಿ ಅಭಿನಂದಿಸಲಾಯಿತು. ಇದೇ ವೇಳೆ ಹಿರಿಯ ಪತ್ರಕರ್ತ ಗೋಪಾಲ ನಾಯಕ ರಚಿಸಿದ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳ ಸೂಕ್ತಿಗಳು ಪುಸ್ತಕ ಲೋಕಾರ್ಪಣೆಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ
ಚಳಿ ಹೆಚ್ಚಿದಂತೆ ಏರುತ್ತಿದೆ ಮೊಟ್ಟೆ ದರ