ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಕೊಪ್ಪಳವಿದ್ಯಾರ್ಥಿಗಳ ಜ್ಞಾನದ ಸಮಗ್ರ ಅಭಿವೃದ್ಧಿ ಹಾಗೂ ಭಾಷೆಯ ಬೆಳವಣಿಗೆಗೆ ಪತ್ರಿಕೆಗಳು ಪೂರಕವಾಗಿ ಕೆಲಸ ಮಾಡುತ್ತಿವೆ. ವಿದ್ಯಾರ್ಥಿಗಳು ಪತ್ರಿಕೆಗಳನ್ನು ನಿರಂತರವಾಗಿ ಅಧ್ಯಯನ ಮಾಡಿ ಎಂದು ಪ್ರಾಚಾರ್ಯ ಡಾ. ಗವಿಸಿದ್ದಪ್ಪ ಮುತ್ತಾಳ ಹೇಳಿದರು.
ತಾಲೂಕಿನ ಅಳವಂಡಿ ಗ್ರಾಮದ ಶ್ರೀಶಿವಮೂರ್ತಿಸ್ವಾಮಿ ಇನಾಮದಾರ ಕಟ್ಟಿಮನಿ ಹಿರೇಮಠ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಹಾಗೂ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಜರುಗಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸಮಾಜದ ಸ್ವಾಸ್ಥ ಕಾಪಾಡುವ ನಿಟ್ಟಿನಲ್ಲಿ ಪತ್ರಿಕೆಗಳು ಕೆಲಸ ಮಾಡಬೇಕು. ಏಕಪಕ್ಷೀಯ ಸುದ್ದಿ ನೀಡದೆ ಜನಸಾಮಾನ್ಯರಿಗೆ ಬೇಕಾದ ಹಾಗೂ ಅವಶ್ಯಕತೆ ಇರುವ ಸುದ್ದಿಗೆ ಆದ್ಯತೆ ನೀಡಬೇಕು. ಜ್ಞಾನದ ಹಸಿವು ನೀಗಿಸಿಕೊಳ್ಳಲು ಪ್ರತಿದಿನವು ಪತ್ರಿಕೆಗಳ ಸಮಗ್ರ ಅಧ್ಯಯನ ಮಾಡಬೇಕು. ಪತ್ರಿಕೆಗಳಲ್ಲಿ ದೇಶ, ವಿದೇಶ, ಪ್ರಚಲಿತ ವಿದ್ಯಮಾನ ಹಾಗೂ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಅವಶ್ಯಕ ಸುದ್ದಿ ನೀಡಲಾಗುತ್ತದೆ. ಜ್ಞಾನದ ಹಸಿವು ನೀಗಿಸುವಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದು ಎಂದರು.
ಕಸಾಪ ಅಳವಂಡಿ ಹೋಬಳಿ ಘಟಕದ ಅಧ್ಯಕ್ಷ, ಪತ್ರಕರ್ತ ಸುರೇಶ ಸಂಗರಡ್ಡಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮದ ಬಹುಪಾಲು ಜಾಗವನ್ನು ಡಿಜಿಟಲ್ ಮಾಧ್ಯಮ ಆಕ್ರಮಿಸಿಕೊಂಡಿದೆ. ಆದರೂ ಕೂಡ ಪತ್ರಿಕೆ ತನ್ನತನವನ್ನು ಉಳಿಸಿಕೊಂಡು ಮುನ್ನಡೆದಿದೆ. ಬೆಳಗಿನ ಜಾವ ಪತ್ರಿಕೆ ಹಿಡಿದು ಓದುವ ಮಜಾ ಬೇರೆಲ್ಲೂ ಸಿಗಲ್ಲ, ವಿದ್ಯಾರ್ಥಿಗಳು ಪ್ರತಿನಿತ್ಯ ಸುಮಾರು ಒಂದು ತಾಸು ಸಮಯವನ್ನು ಪತ್ರಿಕೆ ಓದಿಗೆ ಮೀಸಲಿಡಬೇಕು. ಇದರಿಂದ ಉತ್ತಮ ವಾಗ್ಮಿಗಳಾಗಲು, ಜ್ಞಾನ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ. ಪತ್ರಿಕೆಗಳಲ್ಲಿ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ಬೇಕಾದ ಸಾಮಾನ್ಯ ಜ್ಞಾನ ಲಭಿಸಲಿದೆ. ಪತ್ರಿಕೆ ಓದು ದಿನವಿಡಿ ಚಟುವಟಿಕೆಯಿಂದ ಇರಲು ಸಹಕಾರಿಯಾಗುತ್ತದೆ. ಯುವಕರು ಪತ್ರಿಕೆ ಓದುವ ಜೊತೆಗೆ ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.ಕೊಪ್ಪಳ ವಿವಿ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾದ ಪ್ರಾಚಾರ್ಯ ಡಾ. ಗವಿಸಿದ್ದಪ್ಪ ಮುತ್ತಾಳ, ಪಿಎಚ್‌ಡಿ ಪದವಿ ಪಡೆದ ಉಪನ್ಯಾಸಕ ಡಾ. ನಾಗೇಂದ್ರಪ್ಪ, ಪತ್ರಕರ್ತ ಸುರೇಶ ಅವರನ್ನು ಸನ್ಮಾನಿಸಲಾಯಿತು.
ಉಪನ್ಯಾಸಕರಾದ ಡಾ. ನಾಗೇಂದ್ರಪ್ಪ, ಮಲ್ಲಿಕಾರ್ಜುನ, ಜಗದೀಶ, ವಿಜಯಕುಮಾರ, ಸಿದ್ದಪ್ಪ, ಪ್ರವೀಣ, ವೆಂಕಟೇಶ, ಅನಿಲ್, ವಿನಾಯಕ, ವೀರಯ್ಯ, ರೆಹಮಾನಸಾಬ, ರಾಘವೇಂದ್ರ, ಹನುಮೇಶ, ಕೃಷ್ಣ ಹಾಗೂ ಇತರರು ಇದ್ದರು.