ಮುಂದಿನ ವರ್ಷ ೧೫ ಸಾವಿರ ಮಕ್ಕಳಿಗೆ ಪುರಸ್ಕಾರ

KannadaprabhaNewsNetwork | Published : Sep 15, 2024 2:01 AM

ಸಾರಾಂಶ

ಕಳೆದ ಐದು ವರ್ಷದಿಂದ ೧೦ ಸಾವಿರ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಮೂಲಕ ನೌಕರರ ಸಾಧಕ ಮಕ್ಕಳನ್ನು ಪುರಸ್ಕರಿಸುವುದಿಲ್ಲ ಎಂಬ ಕೊರಗನ್ನು ನೀಗಿಸಿದ್ದೇನೆ. ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಿ, ನಿಮ್ಮೆದುರಿಗಿರುವ ಎಸಿ, ಡೀಸಿಗಳೆಲ್ಲ ಮಧ್ಯಮ ವರ್ಗದಿಂದ ಬಂದವರೆ

ಕನ್ನಡಪ್ರಭ ವಾರ್ತೆ ಕೋಲಾರನೌಕರರ ಸಾಧಕ ಮಕ್ಕಳನ್ನು ಪುರಸ್ಕರಿಸುವುದು ಅದ್ಬುತ ಕಾರ್ಯಕ್ರಮವಾಗಿದ್ದು, ಮುಂದಿನ ವರ್ಷದಿಂದ ತಲಾ ೨ ಸಾವಿರ ರೂ ನಗದು ಪುರಸ್ಕಾರದೊಂದಿಗೆ ೧೫ ಸಾವಿರ ಮಕ್ಕಳನ್ನು ಪುರಸ್ಕರಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದರು.ನಗರದ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಜಿಲ್ಲಾ ನೌಕರರ ಸಂಘದಿಂದ ೨೦೨೩-೨೪ನೇ ಸಾಲಿನ ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಜಿಲ್ಲೆಯ ೨೨೦ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಅಭಿನಂದಿಸಿ ಮಾತನಾಡಿದರು.ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಿ

೧೦೫ ವರ್ಷಗಳ ಇತಿಹಾಸ ನೌಕರರ ಸಂಘಕ್ಕಿದೆ, ಸಂಘ ಹುಟ್ಟಿದಂದಿನಿಂದ ಇಂತಹ ಅದ್ಬುತ ಕಾರ್ಯಕ್ರಮ ಮಾಡುವ ಪ್ರಯತ್ನ ನಡೆದಿರಲಿಲ್ಲ, ಆದರೆ ಕಳೆದ ಐದು ವರ್ಷದಿಂದ ೧೦ ಸಾವಿರ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಮೂಲಕ ನೌಕರರ ಸಾಧಕ ಮಕ್ಕಳನ್ನು ಪುರಸ್ಕರಿಸುವುದಿಲ್ಲ ಎಂಬ ಕೊರಗನ್ನು ನೀಗಿಸಿದ್ದೇನೆ. ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಿ, ನಿಮ್ಮೆದುರಿಗೆ ಇರುವ ಡಿಸಿ, ಎಸ್ಪಿಯವರೂ ಸಹಾ ಬಡ, ಮಧ್ಯಮ ವರ್ಗದಿಂದ ಬಂದವರೇ ಅವರಂತೆ ಆಗಬೇಕು ಎಂಬ ಗುರಿ ಹೊಂದಿ ಎಂದು ಕಿವಿಮಾತು ಹೇಳಿ, ಜಿಲ್ಲೆಯ ವಿದ್ಯಾರ್ಥಿಗಳಿಗೆ ಸಭ್ಯ, ದಕ್ಷ, ಪ್ರಾಮಾಣಿಕ ರಾಜಕಾರಣಿ ಸುದರ್ಶನ್ ಮೇಲ್ಪಂಕ್ತಿಯಾಗಿದ್ದಾರೆ ಎಂದರು.

ಎರಡು ತಿಂಗಳಲ್ಲಿ ಒಪಿಎಸ್ ಜಾರಿ

ಯಥಾವತ್ ವೇತನ ವರದಿ ಜಾರಿಗೆ ಸಿಎಂ, ಡಿಸಿಎಂ ಹಾಗೂ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ ಷಡಕ್ಷರಿ, ನುಡಿದಂತೆ ನಡೆದಿದ್ದಾರೆ, ಒಪಿಎಸ್ ಜಾರಿ ಸಂಬಂಧ ಅಧಿಕಾರಿ ಅಂಜುಂ ಫರ್ವೇಜ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದಾರೆ, ಒಂದೂವರೆ ತಿಂಗಳಲ್ಲಿ ವರದಿ ಬಂದ ನಂತರ ಖಂಡಿತಾ ಒಪಿಎಸ್ ಜಾರಿ ಮಾಡುವ ಬದ್ಧತೆ ಸಿಎಂಗಿದ್ದು, ಅವರಿಗೆ ಸಂಘ ಋಣಿಯಾಗಿದೆ ಎಂದು ಧನ್ಯವಾದ ಅರ್ಪಿಸಿದರು.ಕೆಲಸವಾದ ನಂತರ ನೌಕರರು ಸಿಎಂ ಅವರನ್ನು ಮರೆತಿಲ್ಲ, ನಮ್ಮಭಿಮಾನದ ಅಭಿನಂದನೆ ಸಲ್ಲಿಸಿದ್ದೇವೆ, ತೆರಿಗೆ ವಸೂಲಿಯಲ್ಲೂ ದೇಶಕ್ಕೆ ರಾಜ್ಯ ೨ನೇ ಸ್ಥಾನದಲ್ಲಿದ್ದು, ನೌಕರರು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿ ೨೦೨೬ಕ್ಕೆ ಕೇಂದ್ರ ಮಾದರಿ ವೇತನ ಜಾರಿಗೆ ಕ್ರಮವಹಿಸುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕೋಲಾರ ಜಿಲ್ಲೆಯಲ್ಲಿ ನೌಕರರ ಸಂಘದ ಕಾರ್ಯಕ್ರಮಗಳು ವಿಭಿನ್ನವಾಗಿ, ವಿಶಿಷ್ಟರೀತಿ ನಡೆಯುತ್ತವೆ, ಯಾವುದೇ ಕಾರ್ಯಕ್ರಮ ಯಶಸ್ಸಿಗೆ ಜಿಲ್ಲಾಧ್ಯಕ್ಷ ಸುರೇಶ್‌ಬಾಬು ಪ್ರಯತ್ನ ಶ್ಲಾಘನೀಯ, ಎಲ್ಲ ಪದಾಧಿಕಾರಿಗಳನ್ನು ಒಟ್ಟಾಗಿ ಕರೆದೊಯ್ಯುವ ಮೂಲಕ ಸಂಘದ ಘನತೆ ಎತ್ತರಕ್ಕೇರಿಸಿದ್ದಾರೆ ಎಂದರು.

ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಎಂ.ವಿ.ರಾಮಕೃಷ್ಣಪ್ರಸಾದ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಜಿಲ್ಲಾಧಿಕಾರಿ ಅಕ್ರಂಪಾಷ, ಎಸ್ಪಿ ಬಿ.ನಿಖಿಲ್, ಜಿಲ್ಲಾಧ್ಯಕ್ಷ ಜಿ.ಸುರೇಶ್‌ಬಾಬು ಇದ್ದರು.

Share this article