ರಾ.ಹೆ.75 ಚತುಷ್ಪಥ: ಬಜತ್ತೂರಿನಲ್ಲಿ ಟೋಲ್ ಪ್ಲಾಝಾ

KannadaprabhaNewsNetwork |  
Published : Oct 27, 2025, 12:30 AM IST
ಬಜತ್ತೂರು ಗ್ರಾಮದ ವಳಾಲು ಸಮೀಪ ಟೋಲ್ ಪ್ಲಾಝಾ ನಿರ್ಮಾಣ ಆಗುತ್ತಿದೆ | Kannada Prabha

ಸಾರಾಂಶ

ಬಿ.ಸಿ.ರೋಡ್-ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಂಕ್ರಿಟ್ ಹೆದ್ದಾರಿ ಅಭಿವೃದ್ಧಿ ಭಾಗವಾಗಿ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲು ಸಮೀಪ ಟೋಲ್ ಪ್ಲಾಝಾ ನಿರ್ಮಾಣ ಆಗುತ್ತಿದೆ. ಈ ಕಾಮಗಾರಿ ಭರದಿಂದ ಸಾಗುತ್ತಿದ್ದು ಹೆದ್ದಾರಿ ಕಾಮಗಾರಿ ಮುಗಿಯುತ್ತಿದ್ದಂತೆ ಟೋಲ್‌ಗೇಟ್ ಕಾರ್ಯಾರಂಭಗೊಳ್ಳಲಿದೆ.

ನಿರ್ಮಾಣ ಕಾಮಗಾರಿ ಪ್ರಗತಿ । ಶೆಲ್ಟರ್‌, ಹೆದ್ದಾರಿ ಪಕ್ಕ ಕಾಂಪ್ಲೆಕ್ಸ್‌ ಕಾಮಗಾರಿ

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಬಿ.ಸಿ.ರೋಡ್-ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಂಕ್ರಿಟ್ ಹೆದ್ದಾರಿ ಅಭಿವೃದ್ಧಿ ಭಾಗವಾಗಿ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲು ಸಮೀಪ ಟೋಲ್ ಪ್ಲಾಝಾ ನಿರ್ಮಾಣ ಆಗುತ್ತಿದೆ. ಈ ಕಾಮಗಾರಿ ಭರದಿಂದ ಸಾಗುತ್ತಿದ್ದು ಹೆದ್ದಾರಿ ಕಾಮಗಾರಿ ಮುಗಿಯುತ್ತಿದ್ದಂತೆ ಟೋಲ್‌ಗೇಟ್ ಕಾರ್ಯಾರಂಭಗೊಳ್ಳಲಿದೆ. ಬಿ.ಸಿ.ರೋಡ್‌ನಿಂದ ಅಡ್ಡಹೊಳೆ ತನಕ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಶೇ.೭೫ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಹೆದ್ದಾರಿ ಅಭಿವೃದ್ಧಿಯ ಭಾಗವಾಗಿ ಉಪ್ಪಿನಂಗಡಿಯಿಂದ ಸುಮಾರು ೮ ಕಿ.ಮೀ.ದೂರದ ಬಜತ್ತೂರು ಗ್ರಾಮದ ವಳಾಲು-ನೀರಕಟ್ಟೆ ಮಧ್ಯೆ ಟೋಲ್‌ಗೇಟ್ ನಿರ್ಮಾಣಗೊಳ್ಳುತ್ತಿದೆ. ಇಲ್ಲಿ ವಿಶಾಲ ಜಾಗ ಇರುವುದು ಟೋಲ್ ಪ್ಲಾಝಾ ನಿರ್ಮಾಣಕ್ಕೆ ಪೂರಕವಾಗಿದೆ.

ಇಲ್ಲಿ ಹೆದ್ದಾರಿಯ ಕಾಂಕ್ರಿಟ್ ಕಾಮಗಾರಿ ಪೂರ್ಣಗೊಂಡಿದ್ದು ಟೋಲ್ ಪ್ಲಾಝಾ ಅನುಷ್ಠಾನದ ಕಾರ್ಯ ನಡೆಯುತ್ತಿದೆ. ಶೆಲ್ಟರ್ ಹಾಗೂ ಹೆದ್ದಾರಿಯ ಪಕ್ಕದಲ್ಲೇ ಕಾಂಪ್ಲೆಕ್ಸ್ ಕೂಡ ನಿರ್ಮಾಣಗೊಂಡಿದೆ. ಟೋಲ್‌ಗೇಟ್ ಕಾಮಗಾರಿ ಭರದಿಂದ ನಡೆಯುತ್ತಿದ್ದು ಇನ್ನು ಒಂದೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ತಲಾ ೪ ಲೇನ್:ಬಿ.ಸಿ.ರೋಡು-ಪೆರಿಯಶಾಂತಿ ಮಧ್ಯೆ ೪೬ ಕಿ.ಮೀ. ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆ ಸಂಸ್ಥೆ ಕೆಎನ್‌ಆರ್ ಕನ್‌ಸ್ಟ್ರಕ್ಷನ್ ಕಂಪನಿಯೇ ಟೋಲ್ ಪ್ಲಾಝಾ ನಿರ್ಮಾಣದ ಕಾರ್ಯ ನಿರ್ವಹಿಸುತ್ತಿದೆ. ಚತುಷ್ಪಥ ಹೆದ್ದಾರಿಯಲ್ಲಿ ಎರಡೂ ಕಡೆ ತಲಾ ನಾಲ್ಕು ಲೇನ್‌ಗಳು ಇರಲಿವೆ. ಒಂದೇ ಸಮಯಕ್ಕೆ ಎರಡು ಬದಿ ಒಟ್ಟು ೮ ಲೇನ್‌ಗಳಲ್ಲಿ ವಾಹನ ಸಾಗಲು ಅವಕಾಶ ಸಿಗಲಿದೆ. ದ್ವಿಚಕ್ರ ಹಾಗೂ ರಿಕ್ಷಾಗಳ ಸಂಚಾರಕ್ಕೆ ಎರಡೂ ಬದಿ ಪ್ರತ್ಯೇಕ ಲೇನ್‌ಗಳಿರಲಿದೆ. ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಟೋಲ್ ಸಂಗ್ರಹವೂ ಆರಂಭಗೊಳ್ಳಲಿದ್ದು ವಾಹನ ಸವಾರರು ಟೋಲ್ ಪಾವತಿಗೆ ಸಿದ್ಧವಾಗಬೇಕಿದೆ. -------ಏಪ್ರಿಲ್‌ನಿಂದ ಟೋಲ್ ಸಂಗ್ರಹ ಸಾಧ್ಯತೆ

ಹೆದ್ದಾರಿ ಚತುಷ್ಪಥ ನಿರ್ಮಾಣ ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿದ್ದು ಮಾರ್ಚ್, ಏಪ್ರಿಲ್ ವೇಳೆಗೆ ಬಜತ್ತೂರು ಟೋಲ್‌ಗೇಟ್ ಓಪನ್ ಆಗಿ ಟೋಲ್ ಸಂಗ್ರಹವೂ ಆರಂಭವಾಗುವ ಸಾಧ್ಯತೆ ಇದೆ. ಟೋಲ್ ಸಂಗ್ರಹ ಆರಂಭಗೊಳ್ಳಬೇಕಾದರೆ ಹೆದ್ದಾರಿ ಇಲಾಖೆಯಿಂದ ಪ್ರತ್ಯೇಕ ನೋಟಿಫಿಕೇಶನ್ ಆಗಬೇಕಿದೆ. ಆ ಬಳಿಕವೇ ಟೋಲ್ ಸಂಗ್ರಹದ ಕಾರ್ಯವನ್ನು ಯಾರು ನಿರ್ವಹಿಸುತ್ತಾರೆ. ಸ್ಥಳೀಯರಿಗೆ ಯಾವ ರೀತಿಯ ಶುಲ್ಕ, ವಿನಾಯಿತಿ ಹೇಗೆ, ಉಳಿದ ವಾಹನಗಳಿಗೆ ಹೇಗೆ ಶುಲ್ಕ ಇರುತ್ತದೆ ಎಂಬುದು ನೋಟಿಫಿಕೇಶನ್ ಪ್ರಕ್ರಿಯೆಯಲ್ಲಿ ನಡೆಯಲಿದೆ. ಆದಾಗ್ಯೂ ಪರಿಸರದ ಮಂದಿಗೆ ಹೊರೆಯಾಗಂತೆ ವಿನಾಯಿತಿ ನೀತಿ ಲಭಿಸಲಿ ಎಂದು ಸಾಮಾಜಿಕ ಚಿಂತಕ ಕೈಲಾರ್ ರಾಜಗೋಪಾಲ ಭಟ್ ಅಭಿಪ್ರಾಯಪಟ್ಟಿದ್ದಾರೆ.-----------ಒಂದೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಟೋಲ್ ಫ್ಲಾಝಾ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ. ಬಹುತೇಕ ಕಾಮಗಾರಿಗಳು ಮುಗಿದಿವೆ. ಇನ್ನು ಒಂದೆರಡು ತಿಂಗಳಲ್ಲಿ ಉಳಿದ ಕಾಮಗಾರಿಗಳು ಪೂರ್ಣಗೊಳ್ಳಲಿದೆ. ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಕೆಎನ್‌ಆರ್ ಕನ್‌ಸ್ಟ್ರಕ್ಷನ್ ಕಂಪನಿಯೇ ಟೋಲ್ ಪ್ಲಾಝಾ ನಿರ್ಮಾಣದ ಕಾಮಗಾರಿ ಮಾಡುತ್ತಿದೆ. ಕಾಮಗಾರಿ ಪೂರ್ಣಗೊಳಿಸಿ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಹಸ್ತಾಂತರ ಆಗಲಿದೆ. ಆ ಬಳಿಕವೇ ಟೋಲ್ ಸಂಗ್ರಹದ ಬಗ್ಗೆ ಇಲಾಖೆ ನಿರ್ಧರಿಸಲಿದೆ.-ಅನಿಲ್‌ಕುಮಾರ್ ಸಿಂಗ್, ಮೇಲ್ವಿಚಾರಕರು ಕೆಎನ್‌ಆರ್ ಸಂಸ್ಥೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದ್ದಲದ ನಡುವೆ, ಚರ್ಚೆಯೇ ಇಲ್ಲದೆ ದ್ವೇಷ ಭಾಷಣ ತಡೆ ಮಸೂದೆ ಪಾಸ್‌
ನಗರದ 75 ಜಂಕ್ಷನ್‌ ಅಭಿವೃದ್ಧಿಗೆ ಗ್ರಹಣ!