ಮೂಡಿಗೆರೆ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕಾಮಗಾರಿ ಮರಿಚಿಕೆಯಾಗಿದೆ. ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಪಟ್ಟಣದ ರಸ್ತೆ ನೋಡೋಕೆ ಆಗುತ್ತಿಲ್ಲ. ಟ್ರಾಫಿಕ್ ಸಮಸ್ಯೆ ಬಿಗಡಾಯಿಸುತ್ತಲೇ ಇದೆ. ಕಳೆದ 3 ವರ್ಷದಿಂದ 173 ಮತ್ತು 73 ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಬಗ್ಗೆ ಜನರಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ನಾವು ಕೊಡಬೇಕಾದ ಸಹಕಾರ ಎಲ್ಲವೂ ನೀಡುತ್ತಿದ್ದರೂ ರಸ್ತೆ ವಿಸ್ತರಣೆ ತಡವಾಗುತ್ತಿದೆ. ಎಲ್ಲಾ ತೊಡಕುಗಳನ್ನು ಬಗೆಹರಿಸಿ ಶೀಘ್ರದಲ್ಲೇ ರಸ್ತೆ ವಿಸ್ತರಣೆಗೆ ಕ್ರಮ ವಹಿಸಬೇಕೆಂದು ಹೆದ್ದಾರಿ ಪ್ರಾಧಿಕಾರ ಅಧಿಕಾರಿ ಚಿಂತಾಮಣಿ ಕಾಂಬ್ಳೆ ಅವರಿಗೆ ತಾಕೀತು ಮಾಡಿದರು.
ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಈ ಬಾರಿ ನೀರಿನ ಸಮಸ್ಯೆ ಯಾವ ಗ್ರಾಮದಲ್ಲೂ ಬಾರದಂತೆ ನಿಗಾ ವಹಿಸಬೇಕು. ಪಿಡಬ್ಲೂಡಿ ಇಲಾಖೆ ರಸ್ತೆಗೆ ₹30 ಕೋಟಿ ಟೆಂಡರ್ ಆಗಿರುವ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ₹19.5 ಕೋಟಿ ಬಾಕಿ ಇರುವ ಟೆಂಡರ್ ಪ್ರಕ್ರಿಯೆ ನಡೆದ ಬಳಿಕ ತ್ವರಿತವಾಗಿ ಕೆಲಸ ಪ್ರಾರಂಭಿಸಬೇಕು. ಅಲ್ಲದೇ ಎಲ್ಲಾ ಇಲಾಖೆ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಮುಂದಿನ ಕೆಡಿಪಿ ಸಭೆಯೊಳಗೆ ಮುಕ್ತಾಯಗೊಳಿಸಬೇಕು ಎಂದು ಸೂಚಿಸಿದರು.ಎನ್.ಆರ್.ಪುರದಲ್ಲಿ ಮಂಗನ ಕಾಯಿಲೆ ಕಂಡು ಬಂದಿದೆ. ಹಾಗಾಗಿ ಕ್ಷೇತ್ರದಲ್ಲಿ ಆರೋಗ್ಯ ಇಲಾಖೆ ಮುನ್ನಚ್ಚರಿಕೆ ಕ್ರಮ ವಹಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ನೀಗಿಸುವ ಬಗ್ಗೆ ಗಮನ ಹರಿಸಲಾಗುವುದು ಎಂದು ತಿಳಿಸಿದರು.