ಸುಹಾಸ್‌ ಶೆಟ್ಟಿ ಹತ್ಯೆ ತನಿಖೆಗೆ ಎನ್‌ಐಎಗೆ: ಕುಟುಂಬಿಕರು, ಬಿಜೆಪಿ ಸ್ವಾಗತ

KannadaprabhaNewsNetwork |  
Published : Jun 10, 2025, 09:06 AM IST
2 | Kannada Prabha

ಸಾರಾಂಶ

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಕೇಂದ್ರ ಗೃಹ ಸಚಿವಾಲಯ ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಿದ್ದು, ಸುಹಾಸ್‌ ಶೆಟ್ಟಿ ಕುಟುಂಬಿಕರು ಹಾಗೂ ಕರಾವಳಿಯ ಬಿಜೆಪಿ ಪ್ರಮುಖರು ಸ್ವಾಗತಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಕೇಂದ್ರ ಗೃಹ ಸಚಿವಾಲಯ ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಿದ್ದು, ಸುಹಾಸ್‌ ಶೆಟ್ಟಿ ಕುಟುಂಬಿಕರು ಹಾಗೂ ಕರಾವಳಿಯ ಬಿಜೆಪಿ ಪ್ರಮುಖರು ಸ್ವಾಗತಿಸಿದ್ದಾರೆ.

ಪ್ರಕರಣ ತನಿಖೆಗೆ ವಹಿಸಿದ್ದು ನಮಗೆ ತುಂಬಾ ಸಮಾಧಾನ ತಂದಿದೆ. ಇದಕ್ಕಾಗಿ ಇಡೀ ಮೋದಿ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಸುಹಾಸ್ ಶೆಟ್ಟಿ‌ ತಂದೆ ಮೋಹನ್‌ ಶೆಟ್ಟಿ ಹೇಳಿದ್ದಾರೆ.

ಸುಹಾಸ್ ಶೆಟ್ಟಿ ಕೊಲೆ‌ ಪ್ರಕರಣವನ್ನು ಕೇಂದ್ರ ಸರ್ಕಾರ ಎನ್‌ಐಎ ತನಿಖೆಗೆ ವಹಿಸಿದ ಬಗ್ಗೆ ‘ಕನ್ನಡಪ್ರಭ’ದ‌ ಜೊತೆ ಮಾತನಾಡಿದ‌ ಅವರು, ಹಿಂದೂ ಸಮಾಜಕ್ಕೆ ತನ್ನ ಇಡೀ ಜೀವನ ಸವೆಸಿದ ಮಗ ಸುಹಾಸ್ ಶೆಟ್ಟಿ‌ ಸಾವಿನ ಬಗ್ಗೆ ಎನ್‌ಐಎ ತನಿಖೆಯಲ್ಲಿ ನ್ಯಾಯ ಸಿಗಲಿದೆ ಎಂದು ಎನ್‌ಐಎಗೆ ಕೊಡಲು ಹೋರಾಟ ಮಾಡಿದ್ದೆವು. ಬಿಜೆಪಿ ರಾಜ್ಯಾಧ್ಯಕ್ಷರು, ಸಂಸದರು, ಶಾಸಕರು, ಹಿಂದೂ ಸಂಘಟನೆಗಳು ಮಾತ್ರವಲ್ಲದೆ ನಮ್ಮ ಗ್ರಾಮದ ಬಿಜೆಪಿ‌ ನಾಯಕರೂ ನಮಗೆ ಸಹಕಾರ ನೀಡಿದ್ದರು. ಬೆಂಗಳೂರಿಗೆ ಹೋಗಿ ರಾಜ್ಯಪಾಲರಿಗೂ ಮನವಿ ಸಲ್ಲಿಸಿದ್ದೇವೆ. ಕೇಂದ್ರ ಸರ್ಕಾರ ನಮ್ಮ ನಿರೀಕ್ಷೆಯನ್ನು‌ ನಿಜ‌ ಮಾಡಿದೆ. ಇದಕ್ಕಾಗಿ ನಾವು ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳುವುದಾಗಿ ತಿಳಿಸಿದರು.

ಕಾಣದ ಕೈಗಳು ಪತ್ತೆ: ಪೂಂಜಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಭೀಕರ ಹತ್ಯೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದ್ದು, ದಕ್ಷಿಣ ಕನ್ನಡದ ಸಮಸ್ತ ಹಿಂದೂ ಸಮಾಜ ಇದನ್ನು ಮನಪೂರ್ವಕವಾಗಿ ಸ್ವಾಗತಿಸುತ್ತಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದ್ದಾರೆ. ಸುಹಾಸ್ ಶೆಟ್ಟಿ ಅವರ ಹತ್ಯೆಯಲ್ಲಿ ಪಾಲ್ಗೊಂಡಿದ್ದ ಪಿಎಫ್‌ಐ ಹಾಗೂ ಇನ್ನಿತರ ಜಿಹಾದಿ ಸಂಘಟನೆಗಳ ಬೇರುಗಳನ್ನು ಬುಡ ಸಮೇತ ಕಿತ್ತು ಹಾಕಲು ಮತ್ತು ಈ ಹತ್ಯೆಯ ಹಿಂದಿರುವ ಕಾಣದ ಕೈಗಳನ್ನು ಪತ್ತೆಹಚ್ಚಿ, ಈ ಸಂಚಿಗೆ ಬೇಕಾದ ಹಣಕಾಸಿನ ವ್ಯವಸ್ಥೆಯನ್ನು ಒದಗಿಸಿದ ದೇಶ ಹಾಗೂ ಪರದೇಶಗಳ ಹಣದ ಮೂಲಗಳನ್ನು ಪತ್ತೆಹಚ್ಚಲು ಎನ್‌ಐಎ ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸಲಿದೆ ಎನ್ನುವ ವಿಶ್ವಾಸ ನನಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯಶ್ಪಾಲ್ ಸುವರ್ಣ ಸ್ವಾಗತ: ತನಿಖೆಯನ್ನು ಎನ್ಐಎ ತನಿಖೆಗೆ ವರ್ಗಾಯಿಸಿದ ಕೇಂದ್ರ ಸರ್ಕಾರದ ಗೃಹ ಇಲಾಖೆಯ ನಿರ್ಧಾರವನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಸ್ವಾಗತಿಸಿದ್ದಾರೆ.ಈ ತನಿಖೆಯ ಮೂಲಕ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಪಾಲ್ಗೊಂಡ ಮತಾಂಧ ಶಕ್ತಿಗಳು, ಆರ್ಥಿಕ ಸಹಕಾರ ನೀಡಿರುವ ಕಾಣದ ಕೈಗಳು ಹಾಗೂ ಕರಾವಳಿ ಜಿಲ್ಲೆಯಲ್ಲಿ ಸಕ್ರಿಯವಾಗಿರುವ ನಿಷೇಧಿತ ಮತೀಯ ಸಂಘಟನೆಗಳ ಕೈವಾಡ ಬಯಲಾಗುವ ವಿಶ್ವಾಸವಿದೆ ಎಂದಿದ್ದಾರೆ.

ಕ್ಯಾ.ಚೌಟ ಸ್ವಾಗತ: ಹತ್ಯೆ ಪ್ರಕರಣವನ್ನು ಕೇಂದ್ರ ಗೃಹ ಸಚಿವಾಲಯ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸಿರುವುದಕ್ಕೆ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಸ್ವಾಗತಿಸಿದ್ದಾರೆ.ಪ್ರಕರಣದ ತನಿಖೆ ಎನ್‌ಐಎಗೆ ವಹಿಸಿರುವ ಕಾರಣ ದಕ್ಷಿಣ ಕನ್ನಡದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ರಾಷ್ಟ್ರ ವಿರೋಧಿ ಶಕ್ತಿಗಳು ಪಿಎಫ್‌ಐನಂಥ ನಿಷೇಧಿತ ಸಂಘಟನೆಗಳ ಜತೆ ಸ್ಲೀಪರ್‌ ಸೆಲ್‌ನಂತೆ ಹೇಗೆ ಕೆಲಸ ಮಾಡುತ್ತಿವೆ ಎನ್ನುವುದು ಬೆಳಕಿಗೆ ಬರಲಿದೆ. ಅಲ್ಲದೆ ದಕ್ಷಿಣ ಕನ್ನಡದಲ್ಲಿ ದೇಶ ವಿರೋಧಿ ಶಕ್ತಿಗಳನ್ನು ಬೇರು ಸಮೇತ ಕಿತ್ತೊಗೆಯಲು ಸಹಾಯವಾಗಲಿದೆ ಎಂದು ಕ್ಯಾ.ಚೌಟ ಹೇಳಿದ್ದಾರೆ.

ಶಾಸಕ ಸುನಿಲ್ ಸ್ವಾಗತ: ಕೇಂದ್ರ ಗೃಹ ಸಚಿವಾಲಯ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಸ್ವಾಗತಿಸಿದ್ದಾರೆ.ಶನಿವಾರ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು , ರಾಜ್ಯ ಸರ್ಕಾರದ ತನಿಖಾ ಕ್ರಮಗಳ ಮೇಲೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಆರಂಭದಿಂದಲೇ ಸರ್ಕಾರದ ತನಿಖಾ ದೃಷ್ಟಿಕೋನ ಏಕಪಕ್ಷೀಯವಾಗಿತ್ತು. ಯಾವುದೇ ಸಾಬೀತುಗಳಿಲ್ಲದೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸು, ದ್ವೇಷದ ನೆಲೆಯಲ್ಲಿ ಕ್ರಮ ಕೈಗೊಳ್ಳುವುದು ಸರ್ಕಾರದ ಅಭ್ಯಾಸವಾಗಿದೆ. ಮಂಗಳೂರಿಗೆ ಆಗಮಿಸಿದ ಕಾಂಗ್ರೆಸ್ ನಾಯಕರೂ ಹಿಂದೂ ಸಂಘಟನೆಗಳ ವಿರುದ್ಧ ಆರೋಪ ಮಾಡಿ, ಪ್ರಕರಣವನ್ನು ರಾಜಕೀಯಗೊಳಿಸಿದರು ಎಂದು ಹೇಳಿದರು.

ವಿಶ್ವ ಹಿಂದೂ ಪರಿಷತ್‌ ಸ್ವಾಗತಪ್ರಕರಣವನ್ನು ಎನ್‌ಐಎ ತನಿಖೆಗೆ ನೀಡಿರುವುದನ್ನು ವಿಶ್ವ ಹಿಂದೂ ಪರಿಷತ್‌ ಸ್ವಾಗತಿಸಿದೆ. ಈ ಹತ್ಯೆ ಹಿಂದೆ ನಿಷೇಧಿತ ಭಯೋತ್ಪಾದಕ ಸಂಘಟನೆ ಪಿಎಫ್‌ಐ ಕೈವಾಡವಿದ್ದು, ಅದಕ್ಕಾಗಿ ಎನ್‌ಐಎ ತನಿಖೆಗೆ ನೀಡಬೇಕೆಂದು ವಿಶ್ವ ಹಿಂದೂ ಪರಿಷತ್‌ ಬಲವಾಗಿ ಆಗ್ರಹಿಸಿ ಬಜ್ಪೆಯಲ್ಲಿ ಬೃಹತ್ ಜನಾಗ್ರಹ ಸಬೆ ನಡೆಸಿತ್ತು. ಇದೀಗ ಕೇಂದ್ರ ಸರ್ಕಾರದ ಗೃಹ ಇಲಾಖೆಯು ಎನ್‌ಐಎ ತನಿಖೆಗೆ ನೀಡಿರುವುದು ಸ್ವಾಗತಾರ್ಹ ಎಂದು ವಿಶ್ವ ಹಿಂದೂ ಪರಿಷತ್‌ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌