ದೇವೇಗೌಡರು ಸಿಎಂ ಆಗಿದ್ದಾಗಲೇ ನೈಸ್‌ ಸಮಸ್ಯೆ ಬಗೆಹರಿಸಬಹುದಿತ್ತಲ್ಲ

KannadaprabhaNewsNetwork |  
Published : Oct 03, 2026, 01:45 AM IST
2ಎಚ್ಎಸ್ಎನ್10 :  | Kannada Prabha

ಸಾರಾಂಶ

ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ದಾಖಲೆಗಳಿದ್ದರೆ ಸಂಬಂಧಪಟ್ಟ ತನಿಖಾ ಸಂಸ್ಥೆಗಳಿಗೆ ನೀಡಿ ತನಿಖೆ ನಡೆಸಲಿ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದು, ಎಚ್.ಡಿ. ಕುಮಾರಸ್ವಾಮಿ ಅವರೇ ಕೇಂದ್ರ ಸಚಿವರಾಗಿದ್ದಾರೆ. ಹೀಗಿರುವಾಗ ಕೇಂದ್ರದ ಮೂಲಕ ತನಿಖೆ ನಡೆಸಿಸಲು ಅವಕಾಶವಿದೆ ಎಂದರು. ಕೇವಲ ಆರೋಪ ಮಾಡಿ ರಾಜಕೀಯವಾಗಿ ವಿಚಾರವನ್ನು ಬಳಸಿಕೊಳ್ಳುವುದು ಸರಿಯಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಪ್ರಭಾವಿ ನಾಯಕರಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಅವರ ಮೇಲೆ ಗೂಬೆ ಕೂರಿಸಿ ರಾಜಕೀಯವಾಗಿ ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಚಿವರು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನೈಸ್‌ ರಸ್ತೆ ಯೋಜನೆಯಲ್ಲಿ ಹಗರಣ ಆಗಿದೆ ಎಂದು ಈಗ ಹೇಳುವ ಜೆಡಿಎಸ್‌ ವರಿಷ್ಠರು ಅವರೇ ಸಿಎಂ ಆಗಿದ್ದಾಗಲೇ ಈ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬಹುದಿತ್ತಲ್ಲಾ. ಈಗ ಅದೇ ವಿಚಾರವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದು ಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೈಸ್ ರಸ್ತೆ ನಿರ್ಮಾಣದಿಂದ ಬೆಂಗಳೂರಿನ ಬೆಳವಣಿಗೆಗೆ ಅನುಕೂಲವಾಗಿದೆ. ಯೋಜನೆಯಲ್ಲಿ ತಪ್ಪು, ಅವ್ಯವಹಾರ ಅಥವಾ ಕಾನೂನು ಉಲ್ಲಂಘನೆ ನಡೆದಿದ್ದರೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಯಾರ ವಿರೋಧವೂ ಇಲ್ಲ ಎಂದರು. ನೈಸ್ ರಸ್ತೆ ಯೋಜನೆ ಜಾರಿಯಾದ ನಂತರ ಎಚ್. ಡಿ. ಕುಮಾರಸ್ವಾಮಿ ಅವರು ೨೦೦೬ ಹಾಗೂ ೨೦೧೮ರಲ್ಲಿ ಮುಖ್ಯಮಂತ್ರಿಯಾಗಿದ್ದರು. ಆಗಲೇ ಯೋಜನೆಯಲ್ಲಿ ಅಕ್ರಮ ಕಂಡುಬಂದಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬಹುದಿತ್ತು. ಆಗ ಸುಮ್ಮನಿದ್ದು ಈಗ ಮತ್ತೆ ಅದೇ ವಿಚಾರವನ್ನು ರಾಜಕೀಯವಾಗಿ ಪ್ರಸ್ತಾಪಿಸುವುದೇಕೆ ಎಂದು ಪ್ರಶ್ನಿಸಿದರು. ನೈಸ್ ಯೋಜನೆಗೆ ಸಂಬಂಧಿಸಿದ ದಾಖಲೆಗಳು ಈಗಷ್ಟೇ ಸೃಷ್ಟಿಯಾಗಿರುವುದಲ್ಲ. ಅಂದೂ ದಾಖಲೆಗಳು ಇದ್ದವು, ಈಗಲೂ ಇವೆ. ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ದಾಖಲೆಗಳಿದ್ದರೆ ಸಂಬಂಧಪಟ್ಟ ತನಿಖಾ ಸಂಸ್ಥೆಗಳಿಗೆ ನೀಡಿ ತನಿಖೆ ನಡೆಸಲಿ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದು, ಎಚ್.ಡಿ. ಕುಮಾರಸ್ವಾಮಿ ಅವರೇ ಕೇಂದ್ರ ಸಚಿವರಾಗಿದ್ದಾರೆ. ಹೀಗಿರುವಾಗ ಕೇಂದ್ರದ ಮೂಲಕ ತನಿಖೆ ನಡೆಸಿಸಲು ಅವಕಾಶವಿದೆ ಎಂದರು. ಕೇವಲ ಆರೋಪ ಮಾಡಿ ರಾಜಕೀಯವಾಗಿ ವಿಚಾರವನ್ನು ಬಳಸಿಕೊಳ್ಳುವುದು ಸರಿಯಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಪ್ರಭಾವಿ ನಾಯಕರಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಅವರ ಮೇಲೆ ಗೂಬೆ ಕೂರಿಸಿ ರಾಜಕೀಯವಾಗಿ ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಚಿವರು ಆರೋಪಿಸಿದರು.

ಎಸ್‌ಐಆರ್‌ನಲ್ಲಿ ಫಾರಂ-೭ ದುರ್ಬಳಕೆ ಆರೋಪ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲೂ ಅಕ್ರಮ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ ಎಂದು ಶಿವಲಿಂಗೇಗೌಡ ಹೇಳಿದರು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಫಾರಂ-೬ ಹಾಗೂ ಮತದಾರರ ಹೆಸರು ಅಳಿಸುವಿಕೆ ಅಥವಾ ಆಕ್ಷೇಪಕ್ಕೆ ಫಾರಂ-೭ ಬಳಸಲಾಗುತ್ತದೆ. ಆದರೆ, ಕೆಲವು ಕಡೆಗಳಲ್ಲಿ ಸಾವಿರಾರು ಫಾರಂ-೭ ಅರ್ಜಿಗಳನ್ನು ಪೂರ್ವಭರ್ತಿ ಮಾಡಿ, ಮತದಾರರ ಹೆಸರುಗಳನ್ನು ಮುದ್ರಿಸಿ ಸಂಬಂಧಪಟ್ಟ ಕಚೇರಿಗಳಿಗೆ ಸಲ್ಲಿಸಲಾಗುತ್ತಿದೆ. ಬಳಿಕ ಅವುಗಳನ್ನು ಬೂತ್ ಮಟ್ಟದ ಅಧಿಕಾರಿಗಳಿಗೆ ನೀಡಲಾಗುತ್ತಿದೆ ಎಂಬ ಆರೋಪವನ್ನು ಅವರು ಮಾಡಿದರು. ಒಂದು ಕ್ಷೇತ್ರದಲ್ಲಿ ೨ ಸಾವಿರ, ೩ ಸಾವಿರ, ೫ ಸಾವಿರ ಅಥವಾ ೧೦ ಸಾವಿರ ಮತಗಳನ್ನು ಈ ರೀತಿಯಲ್ಲಿ ಅಳಿಸಿದರೆ ಚುನಾವಣೆ ಹೇಗೆ ನಡೆಸಲು ಸಾಧ್ಯ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಕ್ರಮಕ್ಕೆ ಅವಕಾಶವಿದೆಯೇ ಎಂದು ಪ್ರಶ್ನಿಸಿದರು. ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುವ ನಿರ್ದಿಷ್ಟ ಸಮುದಾಯಗಳ ಮತದಾರರ ಹೆಸರುಗಳನ್ನು ಗುರಿಯಾಗಿಸಿಕೊಂಡು ಅಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಬೆಂಗಳೂರು, ದೆಹಲಿ ಸೇರಿದಂತೆ ಹೊರಗಡೆ ವಾಸಿಸುತ್ತಿರುವ ಮತದಾರರ ಹೆಸರನ್ನು ಅವರೇ ಹಾಜರಾಗದೆ, ಬೇರೆಯವರು ಸಹಿ ಮಾಡಿ ಮತಪಟ್ಟಿಯಿಂದ ಹೆಸರು ತೆಗೆದುಹಾಕುವಂತೆ ಅರ್ಜಿ ಸಲ್ಲಿಸುತ್ತಿದ್ದಾರೆ. ಕೆಲ ಬೂತ್‌ಗಳಲ್ಲಿ ೫೦, ೧೦೦, ೨೦೦ ಮತಗಳವರೆಗೆ ಅಳಿಸಲು ಅರ್ಜಿಗಳು ಸಲ್ಲಿಕೆಯಾಗುತ್ತಿವೆ ಎಂದು ದೂರಿದರು. ಅರ್ಹ ಮತದಾರರ ಹೆಸರು ಯಾವುದೇ ಕಾರಣಕ್ಕೂ ಅನ್ಯಾಯವಾಗಿ ಮತಪಟ್ಟಿಯಿಂದ ಹೊರಗುಳಿಯದಂತೆ ಚುನಾವಣಾ ಅಧಿಕಾರಿಗಳು ಪ್ರತಿಯೊಂದು ಅರ್ಜಿಯನ್ನೂ ಸಮಗ್ರವಾಗಿ ಪರಿಶೀಲಿಸಬೇಕು. ಮತದಾರರ ಪಟ್ಟಿಯ ಪರಿಷ್ಕರಣೆ ಪಾರದರ್ಶಕವಾಗಿ ನಡೆಯಬೇಕು ಎಂದು ಒತ್ತಾಯಿಸಿದರು.

ಎಸ್‌ಐಆರ್ ಕುರಿತು ಮಾತನಾಡಿದ ಅವರು, ಹೊರದೇಶದವರನ್ನು ಮತದಾರರ ಪಟ್ಟಿಗೆ ಸೇರಿಸಬೇಕು ಎಂದು ನಾವು ಹೇಳುತ್ತಿಲ್ಲ. ಈ ದೇಶದ ಅರ್ಹ ಪ್ರಜೆ ಯಾರಿದ್ದಾನೋ ಅವರ ಹೆಸರು ಮತಪಟ್ಟಿಯಲ್ಲಿ ಇರಬೇಕು. ಪ್ರಾಮಾಣಿಕವಾಗಿ ಎಸ್‌ಐಆರ್ ನಡೆಸಬೇಕು. ಅರ್ಹ ಮತದಾರರ ಹೆಸರುಗಳನ್ನು ರಾಜಕೀಯ ಕಾರಣಕ್ಕೆ ಅಳಿಸುವಂತಾಗಬಾರದು ಎಂದರು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ಆಚರಣೆ ಕುರಿತು ಸಚಿವ ಯು.ಟಿ. ಖಾದರ್ ಅವರು ಯಾವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಅದನ್ನು ಅನಗತ್ಯವಾಗಿ ದೊಡ್ಡದು ಮಾಡುವ ಅಗತ್ಯವಿಲ್ಲ. ಅದನ್ನು ಓಲೈಕೆ ರಾಜಕಾರಣ ಎಂದು ಬಿಂಬಿಸುವುದು ಸರಿಯಲ್ಲ ಎಂದು ಶಿವಲಿಂಗೇಗೌಡ ಸ್ಪಷ್ಟಪಡಿಸಿದರು.

ಮಹಾತ್ಮ ಗಾಂಧೀಜಿ ಜಯಂತಿಯ ದಿನವೇ ಮತದಾರರ ಹಕ್ಕಿನ ವಿಚಾರ ಚರ್ಚೆಯಾಗುತ್ತಿದೆ. ದೇಶದ ಎಲ್ಲ ಸಮುದಾಯದ ಜನರೂ ಒಗ್ಗಟ್ಟಿನಿಂದ ಬದುಕಬೇಕು ಎಂಬುದು ಗಾಂಧೀಜಿಯವರ ಆಶಯವಾಗಿತ್ತು. ಡಾ. ಬಿ. ಆರ್‌. ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನ ಎಲ್ಲ ನಾಗರಿಕರಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಅರ್ಹ ಮತದಾರರ ಮತದಾನದ ಹಕ್ಕನ್ನು ಯಾವುದೇ ಕಾರಣಕ್ಕೂ ಕಸಿದುಕೊಳ್ಳಬಾರದು. ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ಅರ್ಹರ ಹೆಸರುಗಳು ಅಳಿಸದಂತೆ ಎಚ್ಚರ ವಹಿಸಬೇಕು. ಮತದಾನದ ಹಕ್ಕನ್ನು ರಕ್ಷಿಸುವುದು ಎಲ್ಲರ ಜವಾಬ್ದಾರಿ ಎಂದು ಶಿವಲಿಂಗೇಗೌಡ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷ ಶಶಿಧರ್‌, ನಿಕಟಪೂರ್ವ ಅಧ್ಯಕ್ಷ ಲಕ್ಷ್ಮಣ್, ಮುಖಂಡರಾದ ಬನವಾಸೆ ರಂಗಸ್ವಾಮಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳಗಾವೀಲಿ 100 ಕೋಟಿ ವೆಚ್ಚದಲ್ಲಿ ಗಾಂಧಿ ಸ್ಮಾರಕ: ಡಿಕೆ
ಇಂದು ಶೋಭಾಯಾತ್ರೆ: ಗಣಪತಿ ವಿಸರ್ಜನೆಗೆ ಲಕ್ಷಾಂತರ ಜನರ ನಿರೀಕ್ಷೆ