ಗ್ರಾಮಾಭಿವೃದ್ಧಿಯೇ ಗ್ರಾಮ ಸ್ವರಾಜ್ಯದ ಆಶಯ: ಸಚಿವ ಸಿ.ಪುಟ್ಟರಂಗಶೆಟ್ಟಿ

KannadaprabhaNewsNetwork |  
Published : Oct 03, 2026, 01:30 AM IST
ಪುಟ್ಟರಂಗಶೆಟ್ಟಿ | Kannada Prabha

ಸಾರಾಂಶ

ಗ್ರಾಮಾಭಿವೃದ್ಧಿ ಗಾಂಧಿಜೀಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯ ಆಶಯವಾಗಿದ್ದು, ಪ್ರತಿ ಗ್ರಾಮಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ ಎಂದು ಪಶುಸಂಗೋಪನೆ, ರೇಷ್ಮೆ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಗ್ರಾಮಾಭಿವೃದ್ಧಿ ಗಾಂಧಿಜೀಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯ ಆಶಯವಾಗಿದ್ದು, ಪ್ರತಿ ಗ್ರಾಮಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ ಎಂದು ಪಶುಸಂಗೋಪನೆ, ರೇಷ್ಮೆ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಯಡಬೆಟ್ಟದ ಮೆಡಿಕಲ್ ಕಾಲೇಜು ಆಸ್ಪತ್ರೆಯ ಬಳಿ ಇರುವ ಗಾಂಧಿ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ೧೫೭ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ನೆರವೇರಿಸಿ ಬಳಿಕ ಮಾತನಾಡಿದರು.

ಭಾರತದ ರಾಷ್ಟ್ರೀಯ ಹಬ್ಬಗಳಲ್ಲಿ ಗಾಂಧಿ ಜಯಂತಿಯು ಒಂದಾಗಿದ್ದು, ವಿಶ್ವಸಂಸ್ಥೆಯು ಗಾಂಧೀಜಿ ಜನ್ಮದಿನವನ್ನು ಅಹಿಂಸಾ ದಿನವೆಂದು ಘೋಷಿಸಿದೆ. ೧೮೬೯ರಲ್ಲಿ ಗುಜರಾತ್‌ನ ಪೋರಬಂದರಿನಲ್ಲಿ ಜನಿಸಿದ ಗಾಂಧಿಜೀಯವರು ಭಾರತ ಸ್ವಾತಂತ್ರ್ಯ ಹೋರಾಟದ ನೇತೃತ್ವದಲ್ಲಿ ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಅಸಹಕಾರ ಚಳವಳಿ, ಸತ್ಯಾಗ್ರಹಗಳಲ್ಲಿ ಮುಂಚೂಣಿ ನಾಯಕತ್ವ ವಹಿಸಿದ್ದರು. ಸತ್ಯ, ಅಹಿಂಸೆ, ಸರಳತೆ, ಸೇವಾಮನೋಭಾವ, ತ್ಯಾಗದ ಮೂಲಕ ದೇಶಭಕ್ತಿಯನ್ನು ಜನರಲ್ಲಿ ಬಿತ್ತಿ ಜನಸಾಮಾನ್ಯರನ್ನು ಸ್ವಾತಂತ್ರ್ಯಕ್ಕಾಗಿ ಜಾಗೃತಗೊಳಿಸಿದರು ಎಂದರು.

ಗಾಂಧಿ ವ್ಯಕ್ತಿಯಲ್ಲ, ಅದೊಂದು ವಿಶೇಷ ಆಕರ್ಷಣೆಯ ಶಕ್ತಿ. ‘ನನ್ನ ಜೀವನವೇ ನನ್ನ ಸಂದೇಶ’ ಘೊಷಣೆಯ ಮೂಲಕ ತಮ್ಮ ಅರ್ಥಪೂರ್ಣ ಬದುಕಿನ ಮೌಲ್ಯಗಳನ್ನು ಸಾರಿದರು. ಗಾಂಧೀಜಿ ಸ್ವಚ್ಛತೆಯ ಮಹತ್ವವನ್ನು ಅಂದಿನ ದಿನಗಳಲ್ಲೇ ತಿಳಿಹೇಳಿದ್ದರು. ದೇಶದ ಅಭಿವೃದ್ಧಿಗಾಗಿ ಮೊದಲು ಗ್ರಾಮಗಳನ್ನು ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿಯಾಗಬೇಕು. ಗ್ರಾಮೀಣ ಜನರ ಅರ್ಥಿಕ ಸದೃಢತೆಯನ್ನು ಗಾಂಧಿ ಪ್ರತಿಪಾದಿಸಿದ್ದರು. ಎಲ್ಲರು ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ಈಡೇರಿಸಲು ಮುಂದಾಗಬೇಕಿದೆ ಎಂದು ಸಲಹೆ ಮಾಡಿದರು.

ನಂಜನಗೂಡಿನ ಬದನವಾಳು ಗ್ರಾಮದ ಖಾದಿ ಕೇಂದ್ರಕ್ಕೆ ಭೇಟಿ ನೀಡಿದ್ದ ಗಾಂಧಿಜೀಯವರು ಗ್ರಾಮೀಣ ಜನರನ್ನು ಗುಡಿಕೈಗಾರಿಕೆಗೆ ಪ್ರೋತ್ಸಾಹಿಸಿದ್ದರು. ಬ್ರಿಟಿಷರ ವಸ್ತುಗಳ ವ್ಯಾಪಾರ ವಿರುದ್ಧ ಸ್ವದೇಶಿ ಚಳವಳಿಗೆ ಜನರನ್ನು ಪ್ರೇರೇಪಿಸಿ ಹುರಿದುಂಬಿಸಿದರು. ಹಾಗೂ ಮದ್ಯಪಾನದ ದುಷ್ಪರಿಣಾಮಗಳ ಅರಿವು ಮೂಡಿಸಿದ್ದರು. ಭಾರತೀಯರ ಹೃದಯದಲ್ಲಿ ಚಿರಸ್ಮರಣೀಯರಾಗಿರುವ ಗಾಂಧೀಜಿ ಸರಳತೆ, ಚಿಂತನೆ, ತತ್ವಾದರ್ಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದರು.

ಇದೇ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಮುದ್ರಿಸಲಾಗಿರುವ ಜಾನಪದ, ಮಾರ್ಚ್ ಆಫ್ ಕರ್ನಾಟಕ ವಿಶೇಷ ಸಂಚಿಕೆಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಗಾಂಧಿ ವೇಷಧಾರಿ ಪುಟ್ಟ ಮಕ್ಕಳು ಚರಕ ತಿರುಗಿಸಿ ವೇದಿಕೆಯಲ್ಲಿ ಗಮನ ಸೆಳೆದರು. ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢಶಾಲಾ, ಪದವಿಪೂರ್ವ ಶಿಕ್ಷಣ ಹಾಗೂ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದಲ್ಲಿ ವಿಜೇತರಾದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಗಣ್ಯರು ಪ್ರಮಾಣಪತ್ರ ವಿತರಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಎಂ.ಎನ್. ಶಶಿಧರ್, ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಸುಬ್ರಮಣ್ಯ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕಿ ಹಾಗೂ ಡೀನ್ ದೇವಕಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಗಿರಿಧರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರಾದ ಜಯರಾಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಮೇಶ್, ವಾರ್ತಾ ಸಹಾಯಕ ಸುರೇಶ್‌ಕುಮಾರ್, ವಿಷಯ ನಿರ್ವಾಹಕರಾದ ಗಣೇಶ್, ಜನಪದ ಗಾಯಕರಾದ ಸಿ.ಎಂ. ನರಸಿಂಹಮೂರ್ತಿ, ಇತರರು ಹಾಜರಿದ್ದರು.

ವೇದಿಕೆ ಕಾರ್ಯಕ್ರಮದಲ್ಲಿ ಮಾಂಬಳ್ಳಿ ಅರುಣ್ ಕುಮಾರ್ ಮತ್ತು ತಂಡದವರು ನಡೆಸಿಕೊಟ್ಟ ಗಾಂಧೀಜಿಯವರಿಗೆ ಪ್ರಿಯವಾದ ವೈಷ್ಣವ ಜನತೋ ಭಜನಾ-ಗೀತಗಾಯನ ಎಲ್ಲರ ಗಮನ ಸೆಳೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುರಸಭೆಯಲ್ಲಿ ಎಸ್.ಶರವಣ ಸ್ವಚ್ಛತಾ ಪ್ರತಿಜ್ಞಾ ವಿಧಿ
೪೦ ದಿನದಿಂದ ರೈತರ ಧರಣಿ: ಜಿಲ್ಲಾಡಳಿತ ನಿರ್ಲಕ್ಷ್ಯ