‘ನೈಸ್‌’ ವ್ಯಾಪ್ತೀಲಿ 1 ಎಕ್ರೆಯನ್ನೂ ಖರೀದಿಸಿಲ್ಲ: ಎಚ್ಡಿಕೆ

KannadaprabhaNewsNetwork |  
Published : Oct 03, 2026, 02:00 AM IST
ಎಚ್ಡಿಕೆ | Kannada Prabha

ಸಾರಾಂಶ

ನೈಸ್‌ ಯೋಜನೆ ವ್ಯಾಪ್ತಿಯಲ್ಲಿ ನನ್ನ ಅಥವಾ ನನ್ನ ಕುಟುಂಬ ಅಕ್ರಮವಾಗಿ ಒಂದು ಎಕರೆ ಜಮೀನು ಖರೀದಿಸಿರುವುದನ್ನು ಸಾಬೀತು ಮಾಡಿದರೆ ನಾನೇ ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಸವಾಲು ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

ನೈಸ್‌ ಯೋಜನೆ ವ್ಯಾಪ್ತಿಯಲ್ಲಿ ನನ್ನ ಅಥವಾ ನನ್ನ ಕುಟುಂಬ ಅಕ್ರಮವಾಗಿ ಒಂದು ಎಕರೆ ಜಮೀನು ಖರೀದಿಸಿರುವುದನ್ನು ಸಾಬೀತು ಮಾಡಿದರೆ ನಾನೇ ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಸವಾಲು ಹಾಕಿದ್ದಾರೆ.

ಶುಕ್ರವಾರ ಮಾದಾವರದ ನೈಸ್ ಟೋಲ್‌ ಪ್ಲಾಜಾ ಬಳಿ ನೈಸ್‌ ಯೋಜನೆಗೆ ಭೂಮಿ ಕಳೆದುಕೊಂಡ ಸಂತ್ರಸ್ತರ ಅಹವಾಲು ಆಲಿಸಿ ಮಾತನಾಡಿದ ಅವರು, ನೈಸ್ ಯೋಜನೆ ವ್ಯಾಪ್ತಿಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಜಮೀನು ಹೊಂದಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದಾರೆ. ಅದನ್ನು ಅವರು ಸಾಬೀತು ಮಾಡಿದರೆ, ರಾಜಕೀಯ ನಿವೃತ್ತಿ ಪಡೆದು ನೇಣು ಹಾಕಿಕೊಳ್ಳುವೆ ಎಂದರು.ಬಿಡುಗಡೆಗೆ ಹಲವು ಕಂತುಗಳ ದಾಖಲೆ ಬಾಕಿ:

ಸುಳ್ಳು ಯಾರ ಮನೆ ದೇವರು ಎಂಬುದು ಅರ್ಥವಾಗುತ್ತಿದೆ. ನೈಸ್‌ ಯೋಜನೆ ಅಕ್ರಮಗಳ ಕುರಿತು ಡಿ.ಕೆ.ಶಿವಕುಮಾರ್‌ ಬಗ್ಗೆ ಮೊದಲ ಕಂತಿನ ದಾಖಲೆ ಬಿಡುಗಡೆ ಮಾಡಿದ್ದೇನೆ. ಇನ್ನೂ ಹಲವು ಕಂತುಗಳ ದಾಖಲೆ ಬಿಡುಗಡೆ ಬಾಕಿ ಇದೆ ಎಂದರು.

ರಾಜಕೀಯಕ್ಕೆ ಬರುವ ಮುನ್ನವೇ 44 ಎಕರೆ ಖರೀದಿ:

ಎಚ್‌.ಡಿ.ಕುಮಾರಸ್ವಾಮಿ ನೈಸ್‌ ಯೋಜನೆ ವ್ಯಾಪ್ತಿಯಲ್ಲಿ ಜಮೀನು ಖರೀದಿ ಮಾಡಿದ್ದೇನೆ ಎಂದು ಆರೋಪಿಸುತ್ತಿದ್ದಾರೆ. ಆದರೆ. ರಾಜಕೀಯಕ್ಕೆ ಬರುವ ಮೊದಲೇ ಬಿಡದಿಯಲ್ಲಿ 44 ಎಕರೆ ಜಮೀನು ಖರೀದಿಸಿದ್ದೇನೆ. ನಾನು ರಿಯಲ್ ಎಸ್ಟೇಟ್ ಮಾಡುತ್ತಿಲ್ಲ. ಬದಲಿಗೆ ಕೃಷಿ, ಪಶುಸಂಗೋಪನೆ ಮಾಡುತ್ತಿದ್ದೇನೆ. ಇವರ ಹಾಗೆ ಮುಗ್ಧರನ್ನು ಹೆದರಿಸಿ ಬೆದರಿಸುವ ಮೂಲಕ ಭೂಮಿ ಕಿತ್ತುಕೊಳ್ಳುವ ಜಾಯಮಾನ ನನ್ನದಲ್ಲ ಎಂದು ಎಚ್‌.ಡಿ.ಕುಮಾರಸ್ವಾಮಿ ಡಿ.ಕೆ.ಶಿವಕುಮಾರ್‌ ವಿರುದ್ಧ ಗುಡುಗಿದರು.ಇಡೀ ದಿನ ನೈಸ್‌ ಸಂತ್ರಸ್ತರ ಭೇಟಿ-ಅಹವಾಲು ಸ್ವೀಕಾರ:

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಬೆಳಗ್ಗೆ ಮಾದಾವರದ ನೈಸ್ ಟೋಲ್‌ ಪ್ಲಾಜಾದಿಂದ ಎಲೆಕ್ಟ್ರಾನಿಕ್‌ ಸಿಟಿ ವರೆಗೆ ಪ್ರವಾಸ ಮಾಡಿ ನೈಸ್‌ ಯೋಜನೆಗೆ ಭೂಮಿ ಕಳೆದುಕೊಂಡ ಸುಮಾರು 52 ಹಳ್ಳಿಗಳ ರೈತರ ಅಹವಾಲು ಆಲಿಸಿದರು. ಬೆಳಗ್ಗೆ ನೈಸ್ ಟೋಲ್ ಪ್ಲಾಜಾ ಸಮೀಪ ರೈತರು ಕಳೆದುಕೊಂಡ ಜಾಗವನ್ನು ಪರಿಶೀಲಿಸಿದರು. ಬಳಿಕ ಕೆಂಗೇರಿ ಸ್ಯಾಟಲೈಟ್‌ ಕ್ಲಬ್‌ ಹಿಂಭಾಗದ ನೈಸ್‌ ಹೆಚ್ಚುವರಿ ಜಮೀನು ವೀಕ್ಷಿಸಿದರು. ನಂತರ ಎಲೆಕ್ಟ್ರಾನಿಕ್‌ ಸಿಟಿಯ ಚಿಕ್ಕತೋಗೂರು ನೈಸ್‌ ಟೋಲ್‌ ಪ್ಲಾಜಾಗೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು. ಇದಾದ ಬಳಿಕ ಸೋಂಪುರ ವೃತ್ತದಲ್ಲಿ ನೈಸ್‌ ಸಂತ್ರಸ್ತರ ಅಹವಾಲು ಆಲಿಸಿ ಭಾಷಣ ಮಾಡಿದರು.ಲಂಚ ಪಡೆದು ಸಚಿವರಿಂದ ನೇಮಕ ಶೀಘ್ರ ದಾಖಲೆ ಬಿಡುಗಡೆ:

ರಾಜ್ಯ ಸರ್ಕಾರದ ಸಚಿವರೊಬ್ಬರು ದೊಡ್ಡ ಮೊತ್ತದ ಲಂಚ ಪಡೆದು ಇಲಾಖೆಯೊಂದರಲ್ಲಿ ನೇಮಕಾತಿ ನಡೆಸುತ್ತಿದ್ದು, ಈ ಸಂಬಂಧ ಬಲವಾದ ದಾಖಲೆಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಎಚ್‌.ಡಿ. ಕುಮಾರಸ್ವಾಮಿ ಹೊಸ ಬಾಂಬ್‌ ಹಾಕಿದ್ದಾರೆ. ನಾನು ಗಾಳಿಯಲ್ಲಿ ಗುಂಡು ಹೊಡೆಯುವವನಲ್ಲ. ಹಿಟ್ ಆ್ಯಂಡ್‌ ರನ್ ರಾಜಕಾರಣ ಮಾಡುವುದಿಲ್ಲ. ನನ್ನ ಬಳಿ ಇರುವ ದಾಖಲೆಗಳನ್ನು ಶೀಘ್ರದಲ್ಲೇ ಮಾಧ್ಯಮಗಳ ಎದುರು ಬಹಿರಂಗಪಡಿಸುವುದಾಗಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಪ್ಪಳ ಜಿಲ್ಲೆಯ 11 ಗ್ರಾಮಗಳಿಗೆ ಗಾಂಧಿ ಪುರಸ್ಕಾರ
ಜೀವನ ಚೈತನ್ಯಕ್ಕೆ ಗಾಂಧೀಜಿ ಆದರ್ಶ ಬೇಕು