ಇಂದು ಶೋಭಾಯಾತ್ರೆ: ಗಣಪತಿ ವಿಸರ್ಜನೆಗೆ ಲಕ್ಷಾಂತರ ಜನರ ನಿರೀಕ್ಷೆ

KannadaprabhaNewsNetwork |  
Published : Oct 03, 2026, 01:45 AM IST
ಬಾಟಂ | Kannada Prabha

ಸಾರಾಂಶ

ಚಿತ್ರದುರ್ಗ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತಕ್ಕೆ ಶೋಭಾಯಾತ್ರೆ ಅಂಗವಾಗಿ ಅಲಂಕಾರ ಮಾಡಿರುವುದು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗದ ಸುಪ್ರಸಿದ್ಧ ಹಿಂದೂ ಮಹಾಗಣಪತಿ ಉತ್ಸವದ ಅಂಗವಾಗಿ ಅಕ್ಟೋಬರ್ 3ರಂದು ಕೋಟೆ ನಗರಿಯಲ್ಲಿ ಬೃಹತ್ ಶೋಭಾಯಾತ್ರೆ ಮತ್ತು ವಿಸರ್ಜನಾ ಮೆರವಣಿಗೆ ಜರುಗಲಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಅತ್ಯಂತ ಸಡಗರ-ಸಂಭ್ರಮದಿಂದ ಈ ಧಾರ್ಮಿಕ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಕೋಟಿ ನಗರಿಯಲ್ಲಿ ನಡೆಯುವ ಈ ಮೆರವಣಿಗೆಯು ಇಡೀ ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿದೆ. ಈ ಬಾರಿ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧ ಜಿಲ್ಲೆಗಳಿಂದ 3 ಲಕ್ಷಕ್ಕೂ ಹೆಚ್ಚು ಭಕ್ತರು ಮತ್ತು ಸಾರ್ವಜನಿಕರು ಚಿತ್ರದುರ್ಗಕ್ಕೆ ಆಗಮಿಸುವ ನಿರೀಕ್ಷೆ ಇದೆ. ಇಡೀ ನಗರ ಈಗಾಗಲೇ ಕೇಸರಿ ಮಯವಾಗಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಈ ಬಾರಿಯ ಬೃಹತ್ ಶೋಭಾಯಾತ್ರೆಯನ್ನು ಪ್ರಮುಖ ಹಿರಿಯ ವಕೀಲರಾದ ಅರುಣ್ ಶ್ಯಾಮ್ ಅವರು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಮುಖ ಹಿಂದೂ ಮುಖಂಡರಾದ ಗೋಪಾಲ್ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಇದರೊಂದಿಗೆ ವಿವಿಧ ಪ್ರಮುಖ ಮಠಾಧೀಶರು, ಧಾರ್ಮಿಕ ಮುಖಂಡರು ಹಾಗೂ ಗಣ್ಯರು ಮೆರವಣಿಗೆಗೆ ಸಾಕ್ಷಿಯಾಗಲಿದ್ದಾರೆ.

ಮೆರವಣಿಗೆಯಲ್ಲಿ ಸಾಂಸ್ಕೃತಿಕ ಮೆರುಗು ನೀಡಲು ರಾಜ್ಯ ಹಾಗೂ ಹೊರರಾಜ್ಯಗಳ ವೈವಿಧ್ಯಮಯ ಕಲಾತಂಡಗಳನ್ನು ಆಹ್ವಾನಿಸಲಾಗಿದೆ. ಪ್ರಮುಖವಾಗಿ ಮಂಗಳೂರಿನ ಪ್ರಸಿದ್ಧ ಚಂಡೆ ವಾದ್ಯ ತಂಡಗಳು, ಭಜನಾ ಮಂಡಳಿಗಳು, ವೀರಗಾಸೆ, ಡೊಳ್ಳು ಕುಣಿತ ಸೇರಿದಂತೆ ಹತ್ತಾರು ಜಾನಪದ ಕಲಾತಂಡಗಳು ಶೋಭಾಯಾತ್ರೆಯ ಮುಂಚೂಣಿಯಲ್ಲಿ ಸಾಗಲಿವೆ. ಯುವಜನತೆ ಕೇಸರಿ ಶಾಲು ಧರಿಸಿ ಭಕ್ತಿ ಮತ್ತು ಉತ್ಸಾಹದಿಂದ ಹೆಜ್ಜೆ ಹಾಕಲಿದ್ದಾರೆ.

ಶೋಭಾಯಾತ್ರೆಗೆ ಯಾವುದೇ ರೀತಿಯ ಲೋಪದೋಷಗಳು ಬಾರದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ಚಿತ್ರದುರ್ಗ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ಸಜ್ಜಾಗಿದೆ.

ಜಿಲ್ಲಾಧಿಕಾರಿ ರಮ್ಯ. ಎಸ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಸೇರಿದಂತೆ ಈಗಾಗಲೇ ಅಧಿಕಾರಿಗಳು ಮತ್ತು ಹಿಂದೂ ಮಹಾಗಣಪತಿ ಪ್ರತಿಷ್ಠಾಪನಾ ಸಮಿತಿ ಸದಸ್ಯರ ಮಹತ್ವದ ಪೂರ್ವಭಾವಿ ಸಭೆ ನಡೆದಿದೆ. ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಹಾಗೂ ಡ್ರೋನ್ ಕ್ಯಾಮೆರಾಗಳ ಮೂಲಕ ಹದ್ದಿನ ಕಣ್ಣು ಇಡಲಾಗಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ನಗರದ ಪ್ರಮುಖ ರಸ್ತೆಗಳಲ್ಲಿ ಪರ್ಯಾಯ ಮಾರ್ಗಗಳ ವ್ಯವಸ್ಥೆ ಮಾಡಲಾಗಿದೆ.ಚಿತ್ರದುರ್ಗದ ಇತಿಹಾಸದಲ್ಲೇ ಮತ್ತೊಂದು ಮೈಲಿಗಲ್ಲಾಗಲಿರುವ ಈ ಹಿಂದೂ ಮಹಾಗಣಪತಿಯ ವಿಸರ್ಜನಾ ಮಹೋತ್ಸವಕ್ಕೆ ಸಕಲ ಧಾರ್ಮಿಕ ಮತ್ತು ಆಡಳಿತಾತ್ಮಕ ಸಿದ್ಧತೆಗಳು ಪೂರ್ಣಗೊಂಡಿವೆ.

ಪ್ರಮುಖ ವೃತ್ತಗಳಿಗೆ ಅಲಂಕಾರ:

ಚಳ್ಳಕೆರೆ ಗೇಟ್ ಹತ್ತಿರ ಇರುವ ಹಿಂದೂ ಮಹಾಗಣಪತಿಯ ಪ್ರತಿಷ್ಠಾಪನಾ ಸ್ಥಳದಿಂದ ಶನಿವಾರ ಬೆಳಗ್ಗೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ಮುಗಿದ ನಂತರ ಶೋಭಾಯಾತ್ರೆಯ ಮೆರವಣಿಗೆ ಸಾಗುತ್ತದೆ. ಮೆರವಣಿಗೆ ಸಾಗುವ ಹಾದಿಯಲ್ಲಿ ವಿದ್ಯುತ್ ದೀಪಾಲಂಕಾರ ಸೇರಿದಂತೆ ರಸ್ತೆಯ ಎರಡೂ ಇಕ್ಕೆಲಗಳಲ್ಲೂ ಕೇಸರಿ ಬಾವುಟಗಳು ಹಾರಾಡುತ್ತಿವೆ. ಇದಲ್ಲದೇ ಮದಕರಿ, ಅಂಬೇಡ್ಕರ್, ಗಾಂಧೀಜಿ, ಕನಕ ವೃತ್ತಗಳೂ ಸೇರಿದಂತೆ ಮಹಾತ್ಮರ ವೃತ್ತಾಲಂಕಾರಗಳು ಮೆರವಣಿಗೆಯ ಪ್ರಾಮುಖ್ಯತೆ ಸಾರಿವೆ.

ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೖಗೊಂಡಿದೆ. ಸಾರ್ವಜನಿಕರಿಗೆ ಅರಿವು ಮೂಡಿಸಲು ಪೋಲೀಸ್ ಪಥಸಂಚಲನವನ್ನು ಶುಕ್ರವಾರ ಸಂಜೆ ನಡೆಸಲಾಯಿತು. ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು.

ಮೆರವಣಿಗೆ ಸಾಗುವ ದಾರ ಮಧ್ಯೆ ಅಲ್ಲಲ್ಲಿ ಸಂಘ-ಸಂಸ್ಥೆಗಳು ಉಪಹಾರ, ನೀರು, ಮಜ್ಜಿಗೆ ಮುಂತಾದ ಸೇವಾ ಕಾರ್ಯಗಳನ್ನು ಮಾಡಲು ಆಗಲೇ ತಯಾರಿ ನಡೆಸಿ ಸಣ್ಣ ಸಣ್ಣ ಟೆಂಟ್ ಗಳನ್ನೂ ಹಾಕಿಕೊಂಡಿದ್ದಾರೆ. ಒಟ್ಟಾರೆ, ಇಂದು ನಡೆಯುವ ಹಿಂದೂ ಮಹಾಗಣಪತಿಯ ಶೋಭಾಯಾತ್ರೆಗೆ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳಗಾವೀಲಿ 100 ಕೋಟಿ ವೆಚ್ಚದಲ್ಲಿ ಗಾಂಧಿ ಸ್ಮಾರಕ: ಡಿಕೆ
ಗಾಂಧಿ ಸರಳ ತತ್ವಗಳ ಅಳವಡಿಕೆ ಎಲ್ಲರ ಕರ್ತವ್ಯ