ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಎನ್‌ಐಇ ವಜ್ರ ಮಹೋತ್ಸವ ಕ್ರೀಡಾ ಸಂಕೀರ್ಣದಲ್ಲಿ ಶನಿವಾರ ನಡೆದ 16ನೇ ಪದವೀಧರರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಎಂಜಿನಿಯರಿಂಗ್ ಶಿಕ್ಷಣವು ಸಂಕೀರ್ಣ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವನ್ನು ನಮ್ಮಲ್ಲಿ ಬೆಳೆಸುತ್ತದೆ ಎಂದರು.
ಇತರೆ ಪದವೀಧರರಿಗೆ ಹೋಲಿಸಿದರೆ ಎಂಜಿನಿಯರ್ ಗಳು ವಿವಿಧ ಜ್ಞಾನವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವ ಗುಣ ಹೊಂದಿರುತ್ತಾರೆ. ವೈದ್ಯಕೀಯ ಸಂಶೋಧನೆಗಳಲ್ಲಿ ಸಾಧಿಸಿರುವ ಪ್ರಗತಿಗೆ ಎಂಜಿನಿಯರಿಂಗ್ ಕ್ಷೇತ್ರದ ಉಪಕರಣಗಳು ಮತ್ತು ತಾಂತ್ರಿಕ ಆವಿಷ್ಕಾರಗಳ ಕೊಡುಗೆ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.ಎಂಜಿನಿಯರ್ ಗಳು ಕೇವಲ ತಾಂತ್ರಿಕ ಕ್ಷೇತ್ರಕ್ಕೆ ಸೀಮಿತವಾಗದೆ, ಮೂಲ ವಿಜ್ಞಾನ, ಸಮಾಜ ವಿಜ್ಞಾನ ಸೇರಿದಂತೆ ವಿವಿಧ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಗಣಿತಜ್ಞನಂತೆ ಆಲೋಚಿಸಿ, ಭೌತವಿಜ್ಞಾನಿಯಂತೆ ತರ್ಕಿಸಿ, ಎಂಜಿನಿಯರ್ ನಂತೆ ಕಾರ್ಯರೂಪಕ್ಕೆ ತರುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಮೂಲ ವಿಜ್ಞಾನಗಳ ಅಧ್ಯಯನವನ್ನು ಎಂದಿಗೂ ನಿರ್ಲಕ್ಷಿಸಬಾರದು. ಜನಪ್ರಿಯ ಹಾಗೂ ತಾಂತ್ರಿಕ ಪುಸ್ತಕಗಳ ಜೊತೆಗೆ ವಿಜ್ಞಾನಿಗಳು, ಎಂಜಿನಿಯರ್ ಗಳು, ಉದ್ಯಮಿಗಳು, ಶಿಕ್ಷಣ ತಜ್ಞರು ಮತ್ತು ಸಾಧಕರ ಜೀವನಚರಿತ್ರೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಜೀವನದಲ್ಲಿ ವೈಯಕ್ತಿಕ ಸಾಧನೆ ಮತ್ತು ವೃತ್ತಿಪರ ಯಶಸ್ಸು ಗಳಿಸುವುದಷ್ಟೇ ಮುಖ್ಯವಲ್ಲ. ಸಮಾಜದ ಬಗ್ಗೆ ಕಾಳಜಿ, ಮಾನವೀಯತೆ ಮತ್ತು ಸೇವಾ ಮನೋಭಾವವನ್ನೂ ಬೆಳೆಸಿಕೊಳ್ಳಬೇಕು. ಅಹಂಕಾರ, ದರ್ಪ ಮತ್ತು ಒರಟುತನವನ್ನು ಬದಿಗಿಟ್ಟು ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್. ನಾಗೇಂದ್ರ ಪರಾಶಾರ್, ಉಪ ಪ್ರಾಂಶುಪಾಲ ಡಾ.ಎಂ.ವಿ. ಲಿಖಿತ್ ಕುಮಾರ್, ಡೀನ್ ಡಾ.ಎಚ್. ಪ್ರದೀಪ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಎಸ್. ಕುಳಲ್ ವೈಮೋಳಿ, ಸಂಸ್ಥೆಯ ಖಜಾಂಚಿ ಸತ್ಯಕುಮಾರ್, ಟ್ರಸ್ಟಿ ನಾಗರಾಜ್ ಮೊದಲಾದವರು ಇದ್ದರು.