ರಾಮನಗರ: ತಾಲೂಕಿನ ಸುಗ್ಗನಹಳ್ಳಿ ಮತ್ತು ಮಾಯಗಾನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 35 ಕೋಟಿ ರುಪಾಯಿ ವೆಚ್ಚದಲ್ಲಿ ಮೌಲಸೌಕಾರ್ಯ ಕಲ್ಪಿಸುವ ಕಾರ್ಯ ನಡೆಯುತ್ತಿದ್ದು, ಉಳಿದ ಅಭಿವೃದ್ಧಿ ಕಾರ್ಯಗಳಿಗಾಗಿ ಶೀಘ್ರದಲ್ಲಿಯೇ 50 ಕೋಟಿ ರುಪಾಯಿ ಬಿಡುಗಡೆ ಆಗಲಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ಸುಗ್ಗನಹಳ್ಳಿಯಲ್ಲಿ ರೇಷ್ಮೆ ಇಲಾಖೆ ಜಾಗವನ್ನು ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿ ಸುಮಾರು 15 ಕೋಟಿ ರುಪಾಯಿ ವೆಚ್ಚದಲ್ಲಿ ಕೆಪಿಎಸ್ ಶಾಲೆ ನಿರ್ಮಿಸಲಾಗುವುದು. ಈ ಭಾಗದಲ್ಲಿ 120 ಎಕರೆ ಸರ್ಕಾರಿ ಜಾಗ ಗುರುತಿಸಿ ಬಡವರಿಗೆ ನಿವೇಶನ ವಿತರಿಸಲು ಕ್ರಮ ವಹಿಸಲಾಗಿದೆ. ನಿವೇಶನಗಳ ಅಭಿವೃದ್ಧಿಗಾಗಿ ಸರ್ಕಾರಕ್ಕೆ 27 ಕೋಟಿ ರು.ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಹೇಳಿದರು.
ಅರ್ಕಾವತಿ ನದಿಗೆ ಅಡ್ಡಲಾಗಿ ಸುಗ್ಗನಹಳ್ಳಿ ಮತ್ತು ಗದಗಯ್ಯನದೊಡ್ಡಿ ಬಳಿ ಸೇತುವೆ ನಿರ್ಮಾಣ ಮಾಡುತ್ತಿದ್ದೇವೆ. ಕುಂಬಾರದೊಡ್ಡಿ ಬಳಿ ವಸತಿ ನಿಲಯ ನಿರ್ಮಾಣ , ರಾಂಪುರ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ರಾಂಪುರ, ಸುಗ್ಗನಹಳ್ಳಿ, ಹಾಗಲಹಳ್ಳಿಯಲ್ಲಿ ಹೈ ಮಾಸ್ ದೀಪ ಅಳವಡಿಕೆ, ಗ್ರಾಮಗಳ ಸೌಂದರೀಕರಣ ವೃದ್ಧಿಗೆ ಒತ್ತು ನೀಡಿದ್ದೇವೆ ಎಂದು ತಿಳಿಸಿದರು.ಮಂಚನಬೆಲೆ ಎಡ ಮತ್ತು ಬಲದಂಡೆ ನಾಲೆಗಳನ್ನು ಸ್ವಚ್ಛ ಮಾಡಿ ನೀರು ಹರಿಸಿ ರೈತರ ಕನಸು ನನಸು ಮಾಡುತ್ತಿದ್ದೇವೆ. ಮಂಚನಬೆಲೆ ಬಹು ಉದ್ದೇಶಿತ ಕುಡಿಯುವ ನೀರಿನ ಯೋಜನೆ ಮೂಲಕ ಕಸಬಾ ಹೋಬಳಿಯ ಗ್ರಾಮಗಳಿಗೆ ನೀರು ಪೂರೈಸುವ ಕೆಲಸ ಪ್ರಗತಿಯಲ್ಲಿದೆ. ಬಗರ್ ಹುಕ್ಕುಂ ಸಾಗುವಳಿ ಸ್ಥಳ ಪರಿಶೀಲನೆ ಜೊತೆಗೆ ರಸ್ತೆ, ಚರಂಡಿ, ಅಂಗನವಾಡಿ, ಶಾಲಾ ಕಟ್ಟಡಗಳ ನಿರ್ಮಾಣ ಸೇರಿದಂತೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಎಲ್ಲ ಗ್ರಾಮಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿರುವ ತೃಪ್ತಿ ನನಗಿದೆ ಎಂದು ಹೇಳಿದರು.
ಸ್ಥಳದಲ್ಲೇ ಪರಿಹಾರ ಸಿಗಬಹುದಾದ ಕೆಲಸಗಳನ್ನು ಸ್ಥಳದಲ್ಲಿಯೇ ಬಗೆಹರಿಸಿ. ಕಾನೂನು ಮತ್ತು ನಿಯಮಾವಳಿಗಳ ಚೌಕಟ್ಟಿನಲ್ಲಿ ಸಮಯ ಬೇಕಾಗುವ ವಿಚಾರಗಳಿದ್ದರೆ, "ಇಂತಿಷ್ಟೇ ದಿನಗಳಲ್ಲಿ ಕೆಲಸ ಮುಗಿಸುತ್ತೇವೆ " ಎಂಬ ಖಚಿತವಾದ ಕಾಲಮಿತಿಯನ್ನು ಲಿಖಿತವಾಗಿ ಜನರಿಗೆ ನೀಡಿ. ಯಾವುದೇ ಕಾರಣಕ್ಕೂ ಜನರನ್ನು ಕಚೇರಿಗಳಿಗೆ ಅಲೆದಾಡಿಸುವ ಕೆಲಸ ಆಗಬಾರದು ಎಂದು ಇಕ್ಬಾಲ್ ಹುಸೇನ್ ಹೇಳಿದರು.
ಸಭೆಯಲ್ಲಿ ತಹಸೀಲ್ದಾರ್ ತೇಜಸ್ವಿನಿ, ತಾಲೂಕು ವೈದ್ಯಾಧಿಕಾರಿ ಡಾ.ಉಮಾ, ಪಿಆರ್ ಇಡಿ ಎಇಇ ಲಾವಣ್ಯ, ಎಂಜಿನಿಯರ್ ಗಳಾದ ಸತ್ಯಪ್ರಕಾಶ್, ನೂತನ್, ಪಶು ವೈದ್ಯಾಧಿಕಾರಿ ಡಾ.ಕೃಷ್ಣಮೂರ್ತಿ, ಮುಖಂಡರಾದ ಆರ್.ದೊಡ್ಡವೀರಯ್ಯ, ಆಂಜನಪ್ಪ, ವಾಸು, ರಾಮಯ್ಯ, ಉಮಾಶಂಕರ್, ರಂಜಿತ್, ಬೈರೇಗೌಡ, ಗುರುಪ್ರಸಾದ್, ಮುಕುಂದ, ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.
ಕಳೆದ ತಿಂಗಳು ಕೈಲಂಚಾದಲ್ಲಿ ನಡೆದ ಪ್ರಜಾಸೇವಾ ಆಂದೋಲನದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 217 ಅರ್ಜಿಗಳು ಬಂದಿದ್ದವು. ಅದರಲ್ಲಿ 189 ಅರ್ಜಿಗಳನ್ನು ಅಧಿಕಾರಿಗಳು ಇತ್ಯರ್ಥ ಮಾಡಿದ್ದು, 28 ಅರ್ಜಿಗಳು ಅಧಿಕಾರಿಗಳ ಹಂತದಲ್ಲಿ ಇತ್ಯರ್ಥವಾಗಿವೆ. ಇಂತಹ ಕೆಲಸ ಅಧಿಕಾರಿಗಳು ಬಗೆಹರಿಸುವ ಪ್ರಮಾಣಿಕ ಪ್ರಯತ್ನ ಮಾಡಿದರೆ ಪ್ರಜಾ ಆಂದೋಲನ ಸಭೆಗಳಿಗೆ ಹೆಚ್ಚು ಮಹತ್ವ ಬರುತ್ತದೆ.
31ಕೆಆರ್ ಎಂಎನ್ 3.ಜೆಪಿಜಿ