;Resize=(412,232))
ಕಾರ್ಕಳ : ಶಿಕ್ಷಕ ವೃತ್ತಿಯ ಜತೆಗೆ ಕೃಷಿಯಲ್ಲೂ ವಿಶಿಷ್ಟ ಸಾಧನೆ ಮಾಡಿರುವ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಮುರತಂಗಡಿಯ ಅಸ್ಮಾ ಬಾನು ಅವರಿಗೆ ಮತ್ತೊಂದು ರಾಷ್ಟ್ರೀಯ ಗೌರವ ಒಲಿದು ಬಂದಿದೆ. ಅಪರೂಪದ ದೇಶಿ ಭತ್ತದ ತಳಿಗಳ ಸಂರಕ್ಷಣೆ ಮತ್ತು ಕೃಷಿ ವೈವಿಧ್ಯತೆಯ ಉಳಿವಿಗಾಗಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ, ಕೇಂದ್ರ ಸರ್ಕಾರದ ‘ಪ್ಲಾಂಟ್ ಜಿನೋಮ್ ಸೇವಿಯರ್ ಫಾರ್ಮರ್ ರೆಕಗ್ನಿಷನ್’ ರಾಷ್ಟ್ರೀಯ ಪ್ರಶಸ್ತಿಗೆ ಅವರು ಆಯ್ಕೆಯಾಗಿದ್ದಾರೆ. ನ.12ರಂದು ನವದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಅಸ್ಮಾ ಬಾನು ಕಾರ್ಕಳದ ಪೆರ್ವಾಜೆ ಸರ್ಕಾರಿ ಪ್ರಾಥಮಿಕ ಶಾಲೆಯ ಆಂಗ್ಲ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತಿ ಅಬೂಬಕ್ಕರ್ ಅವರ ಸಹಕಾರದೊಂದಿಗೆ ಅಪರೂಪದ ಭತ್ತದ ತಳಿಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕೆಲವು ತಳಿಗಳಿಂದ ಆರಂಭವಾದ ಇವರ ಕೃಷಿ ಪಯಣ ಇಂದು ಸಾವಿರಕ್ಕೂ ಅಧಿಕ ಭತ್ತದ ತಳಿಗಳ ಸಂಗ್ರಹ ಮತ್ತು ಸಂರಕ್ಷಣೆಯ ಹಂತಕ್ಕೆ ತಲುಪಿದೆ. ಸುಮಾರು 1,580ಕ್ಕೂ ಹೆಚ್ಚು ವೈವಿಧ್ಯಮಯ ಭತ್ತದ ತಳಿಗಳನ್ನು ಬೆಳೆಸಿ ಸಂರಕ್ಷಿಸುತ್ತಿರುವುದು ಇವರ ಸಾಧನೆಯ ವಿಶೇಷ. ಇದರಲ್ಲಿ 50ಕ್ಕೂ ಹೆಚ್ಚು ಕುಚಲಕ್ಕಿ ತಳಿಗಳೂ ಸೇರಿವೆ. ಕಪ್ಪು ಅಕ್ಕಿಯ ಭತ್ತ, ಸುಗಂಧ ಭತ್ತದ ಗಂಧಸಾಲೆ, ಕೆಂಪಕ್ಕಿಯ ರಕ್ತಶಾಲಿ ಸೇರಿದಂತೆ ಹಲವು ಅಪರೂಪದ ತಳಿಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಸುತ್ತಿದ್ದಾರೆ. ಪಾಳುಬಿದ್ದ ಹಾಗೂ ಗುತ್ತಿಗೆ ಪಡೆದ ಜಮೀನುಗಳನ್ನು ಕೃಷಿಗೆ ಬಳಸಿಕೊಂಡು, ರಾಸಾಯನಿಕ ಗೊಬ್ಬರಗಳಿಂದ ದೂರವಿದ್ದು ಸಾವಯವ ಕೃಷಿಗೆ ಆದ್ಯತೆ ನೀಡುತ್ತಿದ್ದಾರೆ.
ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣನ್ಯೂಸ್‌ನ ‘ರೈತ ರತ್ನ’ ಪ್ರಶಸ್ತಿ, ಕುಂದಾಪುರ ಅಪ್ಪಣ್ಣ ಹೆಗ್ಡೆ ಕೃಷಿ ಪ್ರಶಸ್ತಿ, ಜಿಲ್ಲಾ ಮಟ್ಟದ ಉತ್ತಮ ರೈತ ಪ್ರಶಸ್ತಿ, ‘ಸೂಪರ್ ಸ್ಟಾರ್ ರೈತ’ಗೌರವ, ಸೀಡ್ ಎಸ್‌ಸಿ 2025 ಪ್ರಶಸ್ತಿ ಸೇರಿ ವಿವಿಧ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.