ಪಟ್ಟಣದ ಬಹುತೇಕ ಎಲ್ಲ ಕಡೆ ಹೊಂಡಗುಂಡಿಗಳನ್ನು ತಿಂಗಳ ಹಿಂದಷ್ಟೇ ಕಾಂಕ್ರೀಟ್ನಿಂದ ಮುಚ್ಚಲಾಗಿತ್ತು. ಕಾಟಾಚಾರಕ್ಕೆಂಬಂತೆ ಮಾಡಲಾಗಿದ್ದ ಈ ಕಾಮಗಾರಿಯ ಬಣ್ಣ ಬಯಲಾಗಿದ್ದು, ಎಲ್ಲೆಡೆ ಪುನಃ ರಸ್ತೆ ತೇಪೆ ಕಿತ್ತು ಹೋಗಿ ಹೊಂಡಗಳ ದರ್ಶನವಾಗುತ್ತಿದೆ.
ಕುಮಟಾ: ಪಟ್ಟಣದ ಹಲವೆಡೆ ರಸ್ತೆಗಳಿಗೆ ತಿಂಗಳ ಹಿಂದೆ ಹಾಕಿದ್ದ ತೇಪೆ ಕಿತ್ತು ಹೋಗಿದ್ದು, ರಸ್ತೆಯ ಇಕ್ಕೆಲಗಳ ಗಿಡಗಂಟಿ, ಪೊದೆಗಳು ಕೂಡಾ ಬೆಳೆದು ಸಾರ್ವಜನಿಕರು ಪ್ರತಿನಿತ್ಯ ಸಮಸ್ಯೆ ಎದುರಿಸುವಂತಾಗಿದೆ.
ಎಲ್ಲೆಡೆ ಮಳೆಗಾಲದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಗಿಡಗಂಟಿಗಳು ಯಥೇಚ್ಛ ಬೆಳೆದಿವೆ. ಪಟ್ಟಣದ ಹಲವಾರು ವಾರ್ಡುಗಳಲ್ಲಿ ಹಾಗೂ ಪ್ರಮುಖ ರಾ. ಹೆದ್ದಾರಿಗಳಲ್ಲೂ ರಸ್ತೆಯ ಅಂಚುಗಳಲ್ಲಿ ಕೂಡಾ ಸಿಕ್ಕಾಪಟ್ಟೆ ಪೊದೆಗಳು ಬೆಳೆದು ಡಾಂಬರು ರಸ್ತೆಗೆ ವ್ಯಾಪಿಸಿದೆ. ಉದಾಹರಣೆಗೆ ಬಗ್ಗೋಣ ರಸ್ತೆಯ ನಾಮಧಾರಿ ಸಭಾಭವನದಿಂದ ಮುಂದಕ್ಕೆ ಸಾಗಿದಂತೆ ರಸ್ತೆಯ ಎರಡೂ ಬದಿಗೆ ದಟ್ಟ ಪೊದೆಗಳ ಬೆಳೆದಿವೆ.ಪೊದೆಗಳ ಒಳಗಿನಿಂದ ವಿಷಜಂತುಗಳು ಮಾತ್ರವಲ್ಲದೇ ಹಂದಿಯಂತಹ ಕಾಡುಪ್ರಾಣಿಗಳಿಗೂ ತೆರೆಯ ಮರೆಯಲ್ಲಿ ಓಡಾಡಲು ಅನುಕೂಲವಾಗಿದೆ. ಗುಡ್ಡದಿಂದ ಇಳಿದು ಜನವಸತಿ ಪ್ರದೇಶಕ್ಕೆ ಓಡಾಡಲು ಇಂಥ ಪೊದೆಗಳು ಸಹಾಯಕವಾಗಿದೆ. ಹೀಗೆ ಪಟ್ಟಣದ ಹಲವಾರು ಕಡೆ ರಸ್ತೆಯ ಇಕ್ಕೆಲಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಸದೇ ಇರುವುದರಿಂದ ಪಾದಚಾರಿಗಳು ಕೂಡಾ ಭಯದಿಂದ ನಡೆದುಕೊಂಡು ಹೋಗಬೇಕಾಗಿದೆ.
ಇನ್ನೊಂದೆಡೆ ಪಟ್ಟಣದ ಬಹುತೇಕ ಎಲ್ಲ ಕಡೆ ಹೊಂಡಗುಂಡಿಗಳನ್ನು ತಿಂಗಳ ಹಿಂದಷ್ಟೇ ಕಾಂಕ್ರೀಟ್ನಿಂದ ಮುಚ್ಚಲಾಗಿತ್ತು. ಕಾಟಾಚಾರಕ್ಕೆಂಬಂತೆ ಮಾಡಲಾಗಿದ್ದ ಈ ಕಾಮಗಾರಿಯ ಬಣ್ಣ ಬಯಲಾಗಿದ್ದು, ಎಲ್ಲೆಡೆ ಪುನಃ ರಸ್ತೆ ತೇಪೆ ಕಿತ್ತು ಹೋಗಿ ಹೊಂಡಗಳ ದರ್ಶನವಾಗುತ್ತಿದೆ.ಪೇಟೆಯೊಳಗೂ ಹೊಂಡಗಳು ಹೆಚ್ಚಾಗಿ ದ್ವಿಚಕ್ರ ವಾಹನಗಳು ನರ್ತಿಸುತ್ತಾ ಸಾಗುವ ಪರಿಗೆ ಅಪಘಾತದ ಅಪಾಯ ಹೆಚ್ಚಾಗಿದೆ. ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಂಡು ರಸ್ತೆಯ ಇಕ್ಕೆಲಗಳನ್ನು ಸ್ವಚ್ಛಗೊಳಿಸುವ ಕಾರ್ಯ ಹಾಗೂ ಹೊಂಡ ಮುಚ್ಚುವ ಕಾಮಗಾರಿಗಳನ್ನು ಆರಂಭಿಸಬೇಕು ಎಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.