ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ನವೀಕರಣಗೊಳ್ಳದೆ ಬಾಕಿ ಉಳಿದಿದ್ದ ವಿಮಾನ ನಿಲ್ದಾಣದ ಪರವಾನಗಿ ನವೀಕರಣದ ಸಮಸ್ಯೆಯನ್ನು ಇತ್ಯರ್ಥಗೊಳಿಸಿ, ಆಡಳಿತಾತ್ಮಕ ಅಡತಡೆಗಳನ್ನು ನಿವಾರಿಸಿಕೊಳ್ಳಲಾಗಿದೆ. ಅಲ್ಲದೇ ಬಾಕಿ ಇದ್ದ 22 ಲಕ್ಷ ರು. ದಂಡ ಪಾವತಿಸಲಾಗಿದ್ದು, ಮುಂದಿನ ಮೂರು ವರ್ಷಗಳ ಅವಧಿಗೆ ಪರವಾನಗಿ ನವೀಕರಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.
ಹವಾಮಾನ ವೈಪರೀತ್ಯ ಹಾಗೂ ಮತ್ತಿತರ ಹಲವು ಕಾರಣಗಳಿಗಾಗಿ ಇಳಿಯಬೇಕಾದ ವಿಮಾನಗಳು ಇಳಿಯದೇ ಹಿಂದಿರುಗಿ ಹೋಗುವುದನ್ನು ನಿಯಂತ್ರಿಸಲು, ರಾತ್ರಿ ಸಂಚಾರಕ್ಕೆ ಮತ್ತು ಸರಕು ಸಾಗಾಣಿಕೆಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅಗತ್ಯವಾಗಿರುವ ದಿಕ್ಸೂಚಿ ಯಾಂತ್ರಿಕ ವ್ಯವಸ್ಥೆಗೆ (ಡಿಬಿಒಆರ್) ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಅಲ್ಲದೇ ವಿದ್ಯುತ್ ಸಂಪರ್ಕ ವ್ಯವಸ್ಥೆಯೂ ಪೂರ್ಣಗೊಂಡಿದೆ ಎಂದರು.ನೈಟ್‌ಲ್ಯಾಂಡಿಂಗ್ ವ್ಯವಸ್ಥೆ ಕಲ್ಪಿಸಲು ನಿಯಮಾನುಸಾರ ಸದರಿ ಪ್ರದೇಶದಲ್ಲಿನ ಮಣ್ಣಿನ ಗುಣಮಟ್ಟದ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಇನ್ನೊಂದು ವಾರದಲ್ಲಿ ವರದಿ ಬರುವ ನಿರೀಕ್ಷೆ ಹೊಂದಲಾಗಿದೆ. ಈ ಎಲ್ಲ ಕಾಮಗಾರಿಗಳ ಸಕಾಲಿಕ ಪರಿಶೀಲನೆಗಾಗಿ ತಾವು ಖುದ್ದಾಗಿ ಆಗಮಿಸಿ, ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡುವುದಾಗಿ ತಿಳಿಸಿದರು.
ಶಿವಮೊಗ್ಗದಿಂದ ಬೆಂಗಳೂರು, ಚೆನ್ನೈ, ಹೈದ್ರಾಬಾದ್, ಗೋವಾ ಸೇರಿದಂತೆ ಹಲವು ಪ್ರದೇಶಗಳಿಗೆ ನಿರಂತರವಾಗಿ ಪ್ರಯಾಣಿಸುತ್ತಿರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಕೇಂದ್ರ ಪುರಸ್ಕೃತ ಹಾಗೂ ವಿಮಾನ ಪ್ರಯಾಣಕ್ಕೆ ರಿಯಾಯಿತಿ ಒದಗಿಸುವ ‘ಉಡಾನ್’ ಯೋಜನೆಯ ಅವಧಿ ಶೀಘ್ರದಲ್ಲಿ ಮುಕ್ತಾಯಗೊಳ್ಳಲಿದೆ. ಆದ್ದರಿಂದ ಪ್ರಯಾಣಿಕರಿಗೆ ಹೆಚ್ಚಿನ ಪ್ರಯಾಣದರ ಪಾವತಿಸುವ ಹೊರೆ ಬೀಳದಂತೆ ನೋಡಿಕೊಳ್ಳಲು ಈ ಯೋಜನೆಯನ್ನು ಮುಂದುವರಿಸಲು ಕೇಂದ್ರ ವಿಮಾನಯಾನ ಸಚಿವರಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಸದರಿ ವಿಮಾನ ನಿಲ್ಧಾಣದಲ್ಲಿ ಪೈಲಟ್ ತರಬೇತಿ ಕೇಂದ್ರ ಆರಂಭಿಸಲು ಈ ಹಿಂದೆ ಖಾಸಗಿ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆದರೆ, ಯಾವುದೇ ಕಂಪನಿಗಳು ಆಸಕ್ತ ವಹಿಸಿರುವುದು ಕಂಡುಬಂದಿರುವುದಿಲ್ಲ. ಆದಾಗ್ಯೂ ಪೈಲಟ್ ತರಬೇತಿ ಕೇಂದ್ರ ಆರಂಭಿಸಲು ಇನ್ನೊಮ್ಮೆ ಆಸಕ್ತ ತರಬೇತಿ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.
ವಿಮಾನ ನಿಲ್ದಾಣದ ಮುಖ್ಯಸ್ಥ ಶಮಂತ್, ವಿದ್ಯಾಧರ್ ಸಾಲಿಮಠ್, ಜಿಲ್ಲಾ ಕಾಂಗ್ರೆಸ್ ಮುಖಂಡ ಯೋಗೀಶ್ ಮತ್ತಿತರರು ಹಾಜರಿದ್ದರು.