ರೋಗಿಗಳಿಗೆ ನಿಮ್ಹಾನ್ಸ್‌ ಸಂಯೋಜಿತ ಚಿಕಿತ್ಸಾ ಪದ್ಧತಿಯಿಂದ ವರದಾನ

KannadaprabhaNewsNetwork |  
Published : Feb 17, 2026, 01:45 AM ISTUpdated : Feb 17, 2026, 12:22 PM IST
Nimhans

ಸಾರಾಂಶ

ಆಯುರ್ವೇದ, ಯೋಗ ಮತ್ತು ಆಧುನಿಕ ವೈದ್ಯಕೀಯ ಪದ್ಧತಿಯ ಸಮನ್ವಯದಲ್ಲಿ ನಿಮ್ಹಾನ್ಸ್‌ನ ‘ಸಂಯೋಜಿತ ಚಿಕಿತ್ಸಾ ಪದ್ಧತಿ ವಿಭಾಗ’ ಮನೋರೋಗ ಹಾಗೂ ನರರೋಗ ಪೀಡಿತರಿಗೆ ಚಿಕಿತ್ಸೆ ಒದಗಿಸುತ್ತಿರುವುದು ವರದಾನವಾಗಿದೆ.

 ಬೆಂಗಳೂರು :  ಆಯುರ್ವೇದ, ಯೋಗ ಮತ್ತು ಆಧುನಿಕ ವೈದ್ಯಕೀಯ ಪದ್ಧತಿಯ ಸಮನ್ವಯದಲ್ಲಿ ನಿಮ್ಹಾನ್ಸ್‌ನ ‘ಸಂಯೋಜಿತ ಚಿಕಿತ್ಸಾ ಪದ್ಧತಿ ವಿಭಾಗ’ ಮನೋರೋಗ ಹಾಗೂ ನರರೋಗ ಪೀಡಿತರಿಗೆ ಚಿಕಿತ್ಸೆ ಒದಗಿಸುತ್ತಿರುವುದು ವರದಾನವಾಗಿದೆ. ಹೀಗೆ ಆರೈಕೆ ಮಾಡುತ್ತಿರುವ ದೇಶದ ಮೊದಲ ಹಾಗೂ ಏಕೈಕ ವಿಭಾಗ ಎನ್ನಿಸಿಕೊಂಡಿರುವ ಇಲ್ಲಿ ಕಳೆದ ಐದು ವರ್ಷದಲ್ಲಿ 10 ಸಾವಿರಕ್ಕೂ ಅಧಿಕ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ.

ದೇಶದಲ್ಲೇ ಮೊದಲ ಸಂಯೋಜಿತ ಸಮಗ್ರ ವೈದ್ಯಕೀಯ ವಿಭಾಗ

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ಈ ವಿಭಾಗವು ನರರೊಗ ಮತ್ತು ಮನಸಿಕ ಆರೋಗ್ಯ ಕ್ಷೇತ್ರದಲ್ಲಿ ದೇಶದಲ್ಲೇ ಮೊದಲ ಸಂಯೋಜಿತ ಸಮಗ್ರ ವೈದ್ಯಕೀಯ ವಿಭಾಗ ಎನ್ನಿಸಿಕೊಂಡಿದೆ. ಹೀಗಾಗಿ ಕರ್ನಾಟಕ ಮಾತ್ರವಲ್ಲದೆ, ರಾಜ್ಯಗಳಿಂದಲೂ ರೋಗಿಗಳು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇತರೆಡೆಯ ಸಂಸ್ಥೆಗಳಲ್ಲಿ ಅಲೋಪತಿ ಮತ್ತು ಆಯುಷ್ ಸೇವೆ ಇದ್ದರೂ ಅವು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿವೆ. ರೋಗಿಗಳು ಆಯಾ ತಜ್ಞರನ್ನು ಪ್ರತ್ಯೇಕವಾಗಿ ಸಂಪರ್ಕಿಸಬೇಕಾಗುತ್ತದೆ. ಇದರಿಂದ ರೋಗಿಯ ಸ್ಥಿತಿ ಬಗ್ಗೆ ತಜ್ಞರಲ್ಲಿ ಸಮಗ್ರ ತಿಳಿವಳಿಕೆ, ಒಮ್ಮತದ ನಿರ್ಧಾರ ಅಸಾಧ್ಯ, ಇದರಿಂದ ಸಮಗ್ರ ಆರೈಕೆಗೆ ಅಡ್ಡಿಯಾಗುತ್ತಿದೆ.

ಆದರೆ, ನಿಮ್ಹಾನ್ಸ್‌ನಲ್ಲಿ ಆಧುನಿಕ ವೈದ್ಯಕೀಯ ಪದ್ಧತಿ, ಆಯುರ್ವೇದ ಮತ್ತು ಯೋಗ ತಜ್ಞರು ಜಂಟಿಯಾಗಿ ರೋಗಿಯನ್ನು ಪರೀಕ್ಷಿಸುತ್ತಾರೆ. ಹೀಗೆ ಮೂರೂ ಪದ್ಧತಿಯ ದೃಷ್ಟಿಕೋನ ಒಳಗೊಂಡು ರಚನಾತ್ಮಕ ಸಮಗ್ರ ಮೌಲ್ಯಮಾಪನ ಸಾಧ್ಯವಾಗುತ್ತಿದೆ. ಈ ಸಮನ್ವಯದ ಮೂಲಕ ರೋಗಿಯ ಅಗತ್ಯ ಮನಗಂಡು ಚಿಕಿತ್ಸಾ ಯೋಜನೆ ರೂಪಿಸಿ ಆರೈಕೆ ಮಾಡುತ್ತಿರುವುದು ಮಹತ್ವ ಪಡೆದಿದೆ ಎಂದು ನಿಮ್ಹಾನ್ಸ್‌ ತಿಳಿಸಿದೆ.

ಮಾನಸಿಕ/ನರರೋಗ ಆರೈಕೆ:

ಮಾನಸಿಕ ಮತ್ತು ನರರೋಗ ಎರಡಕ್ಕೂ ಆರೈಕೆ ಒದಗಿಸಲಾಗುತ್ತಿದೆ. ಮಾನಸಿಕ ರೋಗಗಳಾದ ಖಿನ್ನತೆ, ಆತಂಕ, ಸ್ಕಿಜೋಫ್ರೇನಿಯಾ, ಬೈಪೋಲಾರ್ ಅಫೆಕ್ಟಿವ್ ಡಿಸಾರ್ಡರ್ (ಖಿನ್ನತೆ ಮತ್ತು ಅತ್ಯುತ್ಸಾಹ ಏರಿಳಿತ), ಅಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ (ಅನಿಯಂತ್ರಿತ ಯೋಚನೆ ಮತ್ತು ವರ್ತನೆ), ಮಾದಕ ದ್ರವ್ಯ ಬಳಕೆ ಅಸ್ವಸ್ಥತೆ, ಮಕ್ಕಳಲ್ಲಿನ ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್, ಅಟೆನ್ಷನ್ ಡೆಫಿಸಿಟ್ ಹೈಪರ್‌ ಆ್ಯಕ್ಟಿವಿಟಿ ಡಿಸಾರ್ಡರ್‌ಗಳಿಗೆ ಇಲ್ಲಿ ಚಿಕಿತ್ಸೆ ಲಭ್ಯವಾಗುತ್ತಿದೆ.

ನರರೋಗದ ಪೈಕಿ ಪಾರ್ಶ್ವವಾಯು, ಪಾರ್ಕಿನ್ಸನ್ ಕಾಯಿಲೆ, ಮೆದುಳು ಮತ್ತು ಬೆನ್ನುಹುರಿಯ ನರಕೋಶಗಳ ಮೇಲೆ ಪರಿಣಾಮ ಬೀರುವ ಮೋಟಾರ್ ನ್ಯೂರಾನ್ ಕಾಯಿಲೆ, ದಿಮೆಂಶಿಯಾ (ಅರಳು ಮರುಳು), ಮಕ್ಕಳಲ್ಲಿನ ನರ ಬೆಳವಣಿಗೆಯ ಅಸ್ವಸ್ಥತೆ, ಮಲ್ಟಿಪಲ್ ಸ್ಕ್ಲೆರೋಸಿಸ್, ಗಿಲ್ಲೆನ್ ಬ್ಯಾರೆ ಸಿಂಡ್ರೋಮ್, ಸೊಂಟ ಮತ್ತು ಕುತ್ತಿಗೆಯ ಡಿಸ್ಕ್ ಕಾಯಿಲೆ ಸೇರಿ ಇತರೆ ನರರೋಗಗಳನ್ನು ಗುಣಪಡಿಸುವ ಆರೈಕೆ ಲಭ್ಯವಿದೆ.

ಒಳ/ಹೊರರೋಗಿ ವಿಭಾಗ:

ವಿಭಾಗದಲ್ಲಿನ ಹೊರರೋಗಿ ವಿಭಾಗವು ವಾರದಲ್ಲಿ ಮೂರು ದಿನ (ಸೋಮವಾರ, ಗುರುವಾರ ಮತ್ತು ಶುಕ್ರವಾರ) ನಿಮ್ಹಾನ್ಸ್‌ ಹೊರ ರೋಗಿ ವಿಭಾಗದ ಜಿ-13 ಕೊಠಡಿಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಈ ದಿನಗಳಲ್ಲಿ ಸರಾಸರಿ 20-25 ರೋಗಿಗಳು ಹೊರರೋಗಿ ವಿಭಾಗಕ್ಕೆ ಭೇಟಿ ನೀಡುತ್ತಿದ್ದಾರೆ. ಸದ್ಯ ವಿಭಾಗವು ಒಟ್ಟು 30 ಹಾಸಿಗೆ ಒಳರೋಗಿ ಸಾಮರ್ಥ್ಯ ಹೊಂದಿದೆ. ಪುರುಷರಿಗೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪ್ರತ್ಯೇಕ ಸಾಮಾನ್ಯ ಕೊಠಡಿ, ಡಿಲಕ್ಸ್ ಕೊಠಡಿ ವಿಶೇಷ ಕೊಠಡಿ ವ್ಯವಸ್ಥೆ ಕಲ್ಪಿಸಲಾಗಿದೆ.

2019ರಲ್ಲಿ ಪ್ರಾರಂಭ

ನಿಮ್ಹಾನ್ಸ್‌ನಲ್ಲಿ ಆಯುರ್ವೇದ ಸೇವೆ 1959 ರಿಂದಲೇ ಇದೆ. ಆದರೆ, ಆಯುರ್ವೇದ ಮತ್ತು ಯೋಗವನ್ನು ಆಧುನಿಕ ವೈದ್ಯಕೀಯ ವಿಜ್ಞಾನದೊಂದಿಗೆ ಸಂಯೋಜಿಸಿದ್ದು 2019ರ ಅಕ್ಟೋಬರ್‌ನಲ್ಲಿ. 2019ರಲ್ಲಿ ಸಂಯೋಜಿತ ಚಿಕಿತ್ಸಾ ಕೇಂದ್ರ ಆರಂಭವಾಗಿ ಬಳಿಕ ನಿಮ್ಹಾನ್ಸ್‌ ಸಂಸ್ಥೆಯ ಪ್ರತ್ಯೇಕ ವಿಭಾಗವಾಗಿ ಕಾರ್ಯ ನಿರ್ವಹಿಸುತ್ತಿದೆ.

ಸಂಶೋಧನೆ:

ಆಯುಷ್‌ ಸಂಶೋಧನೆ ಕುರಿತ ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಭಾರತ ಸರ್ಕಾರದ ಆಯುಷ್‌ ಸಚಿವಾಲಯದಿಂದ ಆಯುಷ್‌ ಸಂಶೋಧನೆ ಕುರಿತ ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಗ್ರ್ಯಾಂಟ್‌ ಅನುದಾನ ಕೂಡ ಈ ವಿಭಾಗಕ್ಕೆ ಲಭ್ಯವಾಗಿದೆ. ಇದರ ಮೂಲಕ ಅಲ್‌ಝೈಮರ್‌ ಡಿಮೆಂಶಿಯಾ (ಅರಳು ಮರುಳು), ಮಲ್ಟಿಪಲ್‌ ಸ್ಕ್ಲಿರೊಸಿಸ್‌ ನರರೋಗಗಳಲ್ಲಿ ಮತ್ತು ಸ್ಕಿಝೋಫ್ರೆನಿಯಾ, ಖಿನ್ನತೆ ಮನೋರೋಗಗಳಲ್ಲಿ, ಆಯುರ್ವೇದ ಮತ್ತು ಯೋಗ ಸಂಯೋಜಿತ ಚಿಕಿತ್ಸೆಯ ಮೌಲ್ಯಮಾಪನ ಸಂಶೋಧನೆ ನಡೆದಿದೆ.

ಜತೆಗೆ ಆಯುರ್ವೇದ ಅಧಾರಿತ ಪ್ರಕೃತಿ ತತ್ವದ ಮತ್ತು ಗಟ್ ಮೈಕ್ರೊಬಯೋಮ್ (ಕರುಳಿನಲ್ಲಿ ವಾಸಿಸುವ ಉತ್ತಮ ಸೂಕ್ಷ್ಮಜೀವಿಗಳು), ಜೀನೊಮ್ (ಆನುವಂಶಿಕ ಮಾಹಿತಿ), ನ್ಯೂರೋಇಮೇಜಿಂಗ್ (ಮೆದುಳಿನ ಎಮ್‌ಆರ್‌ಐ ಆಧಾರಿತ ವಿಶೇಷ ಅಧ್ಯಯನ), ಹೃದಯ ಬಡಿತ ಏರಿಳಿತ (ಎಚ್‌ಆರ್‌ವಿ) ಮತ್ತಿತರ ಆಧುನಿಕ ವಿಜ್ಞಾನ ಅಧಾರಿತ ನಿಯತಾಂಕಗಳ ಸಮನ್ವಯದ ಅಧ್ಯಯನ ನಡೆಯಲಿದೆ. ಈ ಸಂಶೋಧನೆಗಳ ಮೂಲಕ ಆಯುರ್ವೇದ ಮತ್ತು ಯೋಗ ಚಿಕಿತ್ಸೆಯ ಪ್ರಭಾವದ ಪುರಾವೆ ಧೃಡ ಪಡಿಸುವುದು, ಆಧುನಿಕ ಚಿಕಿತ್ಸೆಯೊಡನೆ ವೈಜ್ಞಾನಿಕವಾಗಿ ಸಂಯೋಜನೆಯಿಂದ ದೊರಕುವ ಪ್ರಯೋಜನವನ್ನು ಜಗತ್ತಿಗೆ ತಿಳಿಸಿದಂತಾಗಲಿದೆ.

ಕ್ಲಿನಿಕಲ್ ಪ್ರ್ಯಾಕ್ಟೀಸ್‌ ಯಶಸ್ಸು

ಸಂಯೋಜಿತ ಚಿಕಿತ್ಸಾ ಪದ್ಧತಿಯ ಕ್ಲಿನಿಕಲ್ ಪ್ರ್ಯಾಕ್ಟೀಸ್‌ನಲ್ಲಿ ಸಾಕಷ್ಟು ಯಶಸ್ಸು ಕಂಡುಬಂದಿದೆ. ಅವನ್ನು ವೈಜ್ಞಾನಿಕವಾಗಿ ಸಾಬೀತುಪಡಿಸುವುದು ಕೂಡ ವಿಭಾಗದ ಉದ್ದೇಶ. ಖಿನ್ನತೆ, ಆತಂಕ, ಸ್ಕಿಜೋಫ್ರೇನಿಯಾ ವಿಶೇಷವಾಗಿ, ಮಾದಕ ದ್ರವ್ಯ ಬಳಕೆಯ ಅಸ್ವಸ್ಥತೆ, ಮೈಗ್ರೇನ್ ಕಾಯಿಲೆ, ಪಾರ್ಕಿನ್ಸನ್ ಕಾಯಿಲೆ, ಮಕ್ಕಳಲ್ಲಿ ಅಟೆನ್ಷನ್ ಡೆಫಿಸಿಟ್ ಹೈಪರ್‌ ಆ್ಯಕ್ಟಿವಿಟಿ ಡಿಸಾರ್ಡರ್‌ಗೆ ಮನೋವಿಕೃತ ನಿರೋಧಕ ಔಷಧಗಳಿಂದ ಉಂಟಾಗುವ ಅಡ್ಡ ಪರಿಣಾಮದಲ್ಲಿ ಒಂದಾದ ಮೆಟಾಬಾಲಿಕ್ ಸಿಂಡ್ರೋಮ್ (ಬೊಜ್ಜು, ಅಧಿಕ ರಕ್ತದೊತ್ತಡ, ಹೆಚ್ಚಿನ ರಕ್ತದ ಸಕ್ಕರೆ ಮತ್ತು ಅಸಹಜ ಕೊಲೆಸ್ಟ್ರಾಲ್‌ ಮಟ್ಟದಂತಹ ಅಪಾಯಕಾರಿ ಅಂಶಗಳ ಗುಂಪು) ತಡೆಗಟ್ಟುವಲ್ಲಿ ಕೂಡ ಅತ್ಯಂತ ಆಶಾದಾಯಕ ಫಲಿತಾಂಶ ನೀಡಿದೆ ಎಂದು ಡಾ। ಕಿಶೋರ್‌ ಕುಮಾರ್‌ ತಿಳಿಸಿದರು.

ಅಂಕಿ ಅಂಶ

ಸಂಯೋಜಿತ ಚಿಕಿತ್ಸಾ ಪದ್ಧತಿ ವಿಭಾಗ

ಚಿಕಿತ್ಸೆ ಪಡೆದವರು 10,013

ಒಪಿಡಿ 8,754 (ಡಿಸೆಂಬರ್-2025)

ಪ್ರತಿದಿನ 20-25 (ಸರಾಸರಿ)

ಭವಿಷ್ಯದಲ್ಲಿ ಮಾನಸಿಕ, ನರರೋಗಗಳಲ್ಲಿ ಸಂಯೋಜಿತ ವೈದ್ಯಕೀಯ ಪದ್ಧತಿ ಸಮಗ್ರ ಉತ್ತರವಾಗಲಿದೆ. ಕಾಯಿಲೆ ಗುಣಮುಖವಾಗುವಲ್ಲಿ ಸಂಯೋಜಿತ ಚಿಕಿತ್ಸೆಯು ಹೆಚ್ಚು ಪರಿಣಾಮ ಬೀರುತ್ತಿದೆ. ಜತೆಗೆ ಅಡ್ಡ ಪರಿಣಾಮ ನಗಣ್ಯ ಎಂಬುದಕ್ಕೆ ಪುರಾವೆ ದೊರಕಿವೆ.

-ಡಾ। ಕಿಶೋರ್ ಕುಮಾರ್‌ ರಾಮಕೃಷ್ಣ, ಮುಖ್ಯಸ್ಥರು, ಸಂಯೋಜಿತ ಚಿಕಿತ್ಸಾ ವಿಭಾಗ. ನಿಮ್ಹಾನ್ಸ್‌

ಸಂಪರ್ಕ - 080 26995730, 26972084

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಇಂದು ಮಧ್ಯಾಹ್ನ 3ಕ್ಕೆ ಪಿಯುಸಿ ಫಲಿತಾಂಶ
ಕಾಡುಪ್ರಾಣಿಗಳ ಸಂತಾನಶಕ್ತಿ ಹರಣಕ್ಕೆ ರಾಜ್ಯ ಸರ್ಕಾರದಿಂದ ಚಿಂತನೆ: ಖಂಡ್ರೆ