ಕನ್ನಡ ಸಾಹಿತ್ಯಕ್ಕೆ ನಿಜಗುಣರ ಕೊಡುಗೆ ಅಪಾರ

KannadaprabhaNewsNetwork |  
Published : Jun 03, 2025, 12:25 AM IST
50 | Kannada Prabha

ಸಾರಾಂಶ

ಸುತ್ತೂರು: ಕನ್ನಡ ಸಾಹಿತ್ಯ ಲೋಕಕ್ಕೆ ಶ್ರೀ ನಿಜಗುಣ ಶಿವಯೋಗಿಗಳವರ ಕೊಡುಗೆ ಅನನ್ಯ ಮತ್ತು ಅಪಾರ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ. ಅನಂತರಾಮು ಹೇಳಿದರು.

ಸುತ್ತೂರು: ಕನ್ನಡ ಸಾಹಿತ್ಯ ಲೋಕಕ್ಕೆ ಶ್ರೀ ನಿಜಗುಣ ಶಿವಯೋಗಿಗಳವರ ಕೊಡುಗೆ ಅನನ್ಯ ಮತ್ತು ಅಪಾರ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ. ಅನಂತರಾಮು ಹೇಳಿದರು.ಸುತ್ತೂರು ಶ್ರೀಕ್ಷೇತ್ರದಲ್ಲಿ ಶ್ರೀ ವೀರಸಿಂಹಾಸನ ಮಹಾ ಸಂಸ್ಥಾನ ಮಠ, ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್‌ಎಸ್ ಮಹಾವಿದ್ಯಾಪೀಠದ ಸಂಯುಕ್ತಾಶ್ರಯದಲ್ಲಿ ಮಠಾಧಿಪತಿಗಳು, ಮಾತಾಜಿಗಳು, ಆಧ್ಯಾತ್ಮಿಕ ಜಿಜ್ಞಾಸುಗಳು ಹಾಗೂ ಸಾಧಕರುಗಳಿಗೆ ಏರ್ಪಡಿಸಿರುವ ಶ್ರೀ ನಿಜಗುಣ ಶಿವಯೋಗಿಗಳವರ ಅನುಭವಸಾರ ಕೃತಿಯ ಅಧ್ಯಯನ ಶಿಬಿರದಲ್ಲಿ ಅವರು ಮಾತನಾಡಿದರು.ಶ್ರೀ ನಿಜಗುಣ ಶಿವಯೋಗಿಗಳು ಸಂಸ್ಕೃತ ಹಾಗೂ ಕನ್ನಡ ಭಾಷೆಗಳೆರಡರಲ್ಲೂ ಪ್ರಭುತ್ವ ಸಾಧಿಸಿದ್ದರು. ಅವರ ಅನುಭವಸಾರ ಕೃತಿ ಅತ್ಯಂತ ಶ್ರೇಷ್ಠ ಗ್ರಂಥವಾಗಿದ್ದು, ನಡುಗನ್ನಡದ ರಚನೆಯಾಗಿದೆ. ಆರೂಢ ಭಕ್ತಿಪಂಥದವರು ಸದಾಕಾಲ ನಿಜಗುಣರ ಗ್ರಂಥಗಳ ಅಧ್ಯಯನ ಮತ್ತು ಚಿಂತನೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಜೀವ ಜಗತ್ತನ್ನು ಸೃಷ್ಠಿಸಿದ ಪರಮಾತ್ಮ ಸಕಲ ಜೀವಿಗಳಲ್ಲೂ ತಾನೇ ಸೇರಿಕೊಂಡಿದ್ದಾನೆ. ದೇಹ ಬಂಧನಕ್ಕೆ ಸಿಲುಕಿ ಜೀವಾತ್ಮನಾಗಿದ್ದಾನೆ. ಆತ್ಮ ಮತ್ತು ಅನಾತ್ಮಗಳ ಜ್ಞಾನವನ್ನು ತಿಳಿಯಬೇಕು. ಈ ಜಗತ್ತು ಪರಬ್ರಹ್ಮನ ಸೃಷ್ಠಿ, ಪಂಚಭೂತಗಳಿಂದ ಜಗತ್ತು ಉತ್ಪತ್ತಿಯಾಗಿದೆ. ಜೀವಾತ್ಮ ಮತ್ತು ಪರಮಾತ್ಮನಿಗೆ ಇರುವ ಸಂಬಂಧವೇನು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ(ನಾನು) ಇವು ಮನಸ್ಸಿನ ವಿವಿಧ ಹಂತಗಳು. ಆತ್ಮವು ಪರಮಚೈತನ್ಯರೂಪವಾದುದು. ಆ ಪರಮ ಆತ್ಮನನ್ನು ತಿಳಿದುಕೊಂಡರೆ ಇನ್ನೇನನ್ನೂ ತಿಳಿದುಕೊಳ್ಳುವ ಅವಶ್ಯಕವಿರುವುದಿಲ್ಲ. ಆತ್ಮವು ಏಕಮೇವಾದ್ವಿತೀಯವಾದುದು, ನಾನು ಎಂಬ ಅಹಂಕಾರ ಹೋದಾಗ ಮೋಕ್ಷ ಪ್ರಾಪ್ತವಾಗುತ್ತದೆ. ಸದ್ಗುರುವಿನ ಸಹಾಯದಿಂದ ಸಂಸಾರವೆಂಬ ಭವಸಾಗರವನ್ನು ದಾಟಬಹುದು ಎಂದು ನಾಲ್ಕು, ಐದು ಹಾಗೂ ಆರನೇ ಸಂಧಿಗಳ ಕುರಿತು ವಿಷಯ ಮಂಡಿಸುತ್ತಾ ಅವರು ತಿಳಿಸಿದರು. ಶಿಬಿರದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ಮಹಾರಾಷ್ಟ್ರದ ಸೊಲ್ಲಾಪುರ, ತೆಲಂಗಾಣದ ಹೈದರಾಬಾದ್‌ನಿಂದ ಮಠಾಧಿಪತಿಗಳು, ಮಾತಾಜಿಗಳು, ಆಧ್ಯಾತ್ಮಿಕ ಜಿಜ್ಞಾಸುಗಳು ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಸಾಧಕರು ಪಾಲ್ಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ಪುರುಲಿಯಾ ಪಂಚಕೋಲ್ ಸಂಸ್ಥಾನದ ಮಹಾರಾಜರಾದ ಶ್ರೀ ಅನ್ಷುಲ್ ರಾಜವತ್‌ ಅವರು ಹಾಗೂ ಬೆಂಗಳೂರಿನ ಶ್ರೀ ರಾಮಚಂದ್ರ ಇದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್