ನಿಜಲಿಂಗಪ್ಪರ ಶ್ವೇತ ಭವನ ಕಾಂಗ್ರೆಸ್ ಖರೀದಿ?

KannadaprabhaNewsNetwork |  
Published : Sep 04, 2024, 01:53 AM IST
ನಿಜಲಿಂಗಪ್ಪ ಅವರ ಶ್ವೇತ ಭವನವ ಕಾಂಗ್ರೆಸ್  ಖರೀದಿ? | Kannada Prabha

ಸಾರಾಂಶ

ಚಿತ್ರದುರ್ಗದಲ್ಲಿ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪನವರು ವಾಸವಾಗಿದ್ದ ಶುಭ್ರ ಶ್ವೇತಭವನ

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಚಿತ್ರದುರ್ಗ ನಿವಾಸ ಶ್ವೇತಭವನವನ್ನು ಕಾಂಗ್ರೆಸ್ ಖರೀದಿ ಮಾಡಲು ಮುಂದಾಗಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೋಮವಾರ ನಿಜಲಿಂಗಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ ತರುವಾಯ ಇಂತಹದ್ದೊಂದು ಸುದ್ದಿಗೆ ಮಹತ್ವ ಬಂದಿದ್ದೆ. ನಿಜಲಿಂಗಪ್ಪ ಅವರು ಹಿಂದೊಮ್ಮೆ ಎಐಸಿಸಿ ಅಧ್ಯಕ್ಷರಾಗಿದ್ದು ಅವರ ನಿವಾಸವನ್ನು ಕೆಪಿಸಿಸಿ ಖರೀದಿಸುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಫೀರ್ ಪತ್ರ ಬರೆದ ಹಿನ್ನಲೆ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ನೀಡಿದ್ದರು ಎನ್ನಲಾಗಿದೆ.

ನಿಜಲಿಂಗಪ್ಪ ಅವರು ಚಿತ್ರದುರ್ಗದಲ್ಲಿ ವಕೀಲಿಗಾರಿಕೆ ಮಾಡುತ್ತಿದ್ದಾಗ (1939) ರಲ್ಲಿ ಕಟ್ಟಿಸಿಕೊಂಡ ನಿವಾಸವಿದು. ಈ ನಿವಾಸ ಜಿಲ್ಲಾಧಿಕಾರಿ ಬಂಗಲೆ ಪಕ್ಕದಲ್ಲಿಯೇ ಇದ್ದು, 110x115 ಅಡಿ ವಿಸ್ತೀರ್ಣದ ನಿವೇಶನದಲ್ಲಿ ಮನೆ ನಿರ್ಮಿಸಲಾಗಿದ್ದು ಪೂರ್ಣ ಪ್ರಮಾಣದ ಶ್ವೇತಭವನ (ಬಾಗಿಲು ಸೇರಿದಂತೆ ಗೋಡೆ ಬಿಳಿ ಬಣ್ಣ) ಅದಾಗಿತ್ತು. ಪರಿಶುದ್ಧತೆ ಸಂಕೇತವಾಗಿ ನಿಜಲಿಂಗಪ್ಪನವರು ಅವರು ತಮ್ಮ ನಿವಾಸಕ್ಕೆ ಶ್ವೇತಭವನದ ಸ್ಪರ್ಶ ನೀಡಿದ್ದರು.

ನಿಜಲಿಂಗಪ್ಪನವರ ನಿಧನ ನಂತರ ಮನೆಯನ್ನು ರಾಜ್ಯ ಸರ್ಕಾರ ಕಿಮ್ಮತ್ತು ಕಟ್ಟಿ ಖರೀದಿಸಿ ಅದನ್ನು ಸ್ಮಾರಕ ಮಾಡಬೇಕೆಂದು ನಿರ್ಧರಿಸಿತ್ತು. ಅದರಂತೆ ಯಡಿಯೂರಪ್ಪ ಸಿಎಂ ಆದಾಗ ಬಜೆಟ್‌ನಲ್ಲಿ ಐದು ಕೋಟಿ ರು. ಅನುದಾನ ಕಾಯ್ದರಿಸಿತ್ತು. ಕಳೆದ 7 ವರ್ಷಗಳಿಂದ ಮನೆ ಖರೀದಿ ಪ್ರಕ್ರಿಯೆ ಜಿಲ್ಲಾಡಳಿತ ನಡೆಸಿದ್ದು ಅಂತಿಮಗೊಳಿಸಿಲ್ಲ. ಸರ್ಕಾರದ ಹೆಸರಿಗೆ ನೋಂದಣಿ ಮಾಡಿಸಿಕೊಡಲು ಎರಡು ಬಾರಿ ಅಮೇರಿಕಾದಿಂದ ನಿಜಲಿಂಗಪ್ಪ ಅವರ ಮೊಮ್ಮಗ ವಿನಯ್ ಬಂದು ವಾಪಾಸ್ಸು ಹೋಗಿದ್ದಾರೆ. ವಿಲ್‌ನಲ್ಲಿ ನಮೂದಿಸಿರುವ ಕೆಲ ತಾಂತ್ರಿಕ ಕಾರಣಗಳು ನೋಂದಣಿಗೆ ಅಡ್ಡಿಯಾಗಿವೆ.

ವಿಲ್ ಪೂರ್ವಾಪರ:

ನಿಜಲಿಂಗಪ್ಪನವರಿಗೆ ಒಟ್ಟು 9 ಜನ ಮಕ್ಕಳಿದ್ದು, ಅವರಲ್ಲಿ ಆರು ಹೆಣ್ಣು ಹಾಗೂ ಮೂವರು ಪುತ್ರರು. ಮೂವರಲ್ಲಿ ಹಿರಿಯ ಮಗ ಉಮಾಕಾಂತ್, ಎರಡನೇ ಮಗ ರಾಜಣ್ಣ ಮದುವೆಯಾಗದೆ ಬ್ರಹ್ಮಚಾರಿಗಳಾಗಿ ಉಳಿದರು. ಮೂರನೇ ಮಗ ಕಿರಣ್ ಶಂಕರ್ ಮಾತ್ರ ಮದುವೆಯಾಗಿದ್ದು ಅವರಿಗೆ ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ. ಇವರಿಬ್ಬರು ಹಾಲಿ ಅಮೇರಿಕಾದಲ್ಲಿ ನೆಲೆಸಿದ್ದಾರೆ. ನಿಜಲಿಂಗಪ್ಪ ಅವರಿಗೆ ಮೊಮ್ಮಗ ಅಂದರೆ ಕಿರಣ್ ಶಂಕರ್ ಪುತ್ರ ವಿನಯ್ ಮೇಲೆ ಪ್ರೀತಿ. ಹಾಗಾಗಿ ಶ್ವೇತ ಭವನಕ್ಕೆ ವಿನಯ್ ಅಂತ ನಾಮಕರಣ ಮಾಡಿದ್ದಾರೆ. ಮನೆ ವಿನಯ್‌ಗೆ ಸೇರಬೇಕೆಂದು ವಿಲ್ ಮಾಡಿದ್ದಾರೆ. ವಿಲ್ ಮಾಡುವಾಗ ತಮ್ಮ ಮೂವರು ಮಕ್ಕಳಾದ ಉಮಾಕಾಂತ್, ರಾಜಣ್ಣ, ಕಿರಣ್ ಶಂಕರ್ ಅನುಭವಿಸಿದ ನಂತರ ಮನೆ ವಿನಯ್ ಸೇರಬೇಕೆಂಬ ಅಂಶವನ್ನು ವಿಲ್‌ನಲ್ಲಿ ನಮೂದಿಸಿದ್ದರು.

ಈ ಪ್ರಮುಖ ಅಂಶದ ಕಾರಣ ಮುಂದಿಟ್ಟುಕೊಂಡು ಸಬ್ ರಿಜಿಸ್ಟ್ರಾರ್ ಮನೆಯನ್ನು ಸರ್ಕಾರದ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳಲು ನಿರಾಕರಿಸಿದ್ದರು. ಮೂರು ಜನ ಅನುಭವಿಸಿದ ಮೇಲೆ ವಿನಯ್ ಹೋಗುತ್ತೆ ಎಂದಿದ್ದರಿಂದ ರಿಜಿಸ್ಟರ್ ಮಾಡಲು ಉಪ ನೋಂದಣಾಧಿಕಾರಿ ಹಿಂದೇಟು ಹಾಕಿದ್ದರು.

ನಿಜಲಿಂಗಪ್ಪ ಅವರ ಮಕ್ಕಳ ಪೈಕಿ ಓರ್ವ ಮೃತಪಟ್ಟಿದ್ದಾನೆ. ಇಬ್ಬರು ಇದ್ದಾರೆ. ಆ ನಿವಾಸದ ಮೇಲೆ ನಮಗೆ ಯಾವುದೇ ಹಕ್ಕು ಇಲ್ಲವೆಂದು ಬರೆದುಕೊಡುವುದಾಗಿ ಇಬ್ಬರೂ ಮಕ್ಕಳು ಸ್ಪಷ್ಟಪಡಿಸಿದರೂ ಸಬ್ ರಿಜಿಸ್ಟಾರ್ ಒಪ್ಪಿಗೆ ಸೂಚಿಸಿಲ್ಲ. ಇಬ್ಬರು ಮಕ್ಕಳು ಅನುಭವಿಸಿದ ನಂತರವೇ ಎಂದಿರುವಾಗ ಸಾಧ್ಯವಿಲ್ಲವೆಂದಿದ್ದಾರೆ. ಹಾಗಾಗಿ ಸರ್ಕಾರ ಮನೆ ಖರೀದಿ ಮಾಡಲು ತಾಂತ್ರಿಕ ಅಂಶ ಎದುರಾಗಿತ್ತು. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಬಿಡುಗಡೆ ಮಾಡಲಾದ ₹5 ಕೋಟಿ ಅನುದಾನ ಈಗಲೂ ಜಿಲ್ಲಾಧಿಕಾರಿ ಖಾತೆಯಲ್ಲಿದೆ.

ಕಾಂಗ್ರೆಸ್ ಹೇಗೆ ಖರೀದಿಸುತ್ತದೆ:

ನಿಜಲಿಂಗಪ್ಪ ಅವರ ನಿವಾಸವನ್ನು ಸರ್ಕಾರಕ್ಕೆ ಖರೀದಿ ಮಾಡಲು ಸಾಧ್ಯವಾಗದೇ ಇರುವಾಗ ಕಾಂಗ್ರೆಸ್ ಪಕ್ಷ ಹೇಗೆ ಖರೀದಿಸುತ್ತದೆ, ಅದು ಹೇಗೆ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ನೋಂದಣಿಯಾಗುತ್ತದೆ ಎಂಬ ಪ್ರಶ್ನೆ ಉದ್ಭವವಾಗಿದೆ. ಸರ್ಕಾರಕ್ಕೆ ಮನೆ ಕೊಡುವುದಾಗಿ ಹೇಳಿ ಹತ್ತು ವರ್ಷಗಳಾಗಿವೆ. ನೋಂದಣಿ ಮಾಡಿಸಿಕೊಡಲು ನನ್ನ ಮಗ ಎರಡು ಬಾರಿ ಅಮೇರಿಕಾದಿಂದ ಬಂದು ವಾಪಾಸ್ಸು ಹೋಗಿದ್ದಾನೆ. ನಿಜಲಿಂಗಪ್ಪ ಅವರ ಕುಟುಂಬವನ್ನು ಸರ್ಕಾರ ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದ್ದು ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ಕೊಡುವುದಿಲ್ಲ. ಬೇರೆ ಯಾರೇ ಖರೀದಿಸಿದರೂ ಕೊಡುವುದಾಗಿ ನಿಜಲಿಂಗಪ್ಪ ಅವರ ಪುತ್ರ ಕಿರಣ್ ಶಂಕರ್ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌