ಮೃತ ಕಿರಣ್ ಕುಟುಂಬಕ್ಕೆ ನಿಖಿಲ್ ಸಾಂತ್ವನ, ಪತ್ನಿಗೆ ಕೆಲಸದ ಭರವಸೆ

KannadaprabhaNewsNetwork |  
Published : Sep 23, 2024, 01:21 AM IST
22ಕೆಎಂಎನ್ ಡಿ19 | Kannada Prabha

ಸಾರಾಂಶ

ಬಿಕಾಂ ವ್ಯಾಸಂಗ ಮಾಡಿದ್ದ ಕಿರಣ್‌ಗೆ ಯಾವುದಾದರೊಂದು ಕಂಪನಿಯಲ್ಲಿ ಕೆಲಸ ಕೊಡಿಸಬೇಕೆಂದು ಮಾಜಿ ಶಾಸಕ ಸುರೇಶ್‌ ಗೌಡರು ಕೇಂದ್ರ ಸಚಿವ ಕುಮಾರಣ್ಣ ಅವರೊಂದಿಗೆ ಚರ್ಚಿಸಿದ್ದರು. ಆದರೆ, ಘಟನೆ ಬೇರೆಯಾಗಿದ್ದು, ಮೃತ ಕಿರಣ್‌ಗೆ ಕೊಡಿಸಬೇಕೆಂದುಕೊಂಡಿದ್ದ ಕೆಲಸವನ್ನು ಮುಂದಿನ ದಿನಗಳಲ್ಲಿ ಅವರ ಪತ್ನಿಗೆ ಕೊಡಿಸಲಾಗುವುದು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಗಲಭೆ ನಂತರ ಬಂಧನ ಭೀತಿಯಿಂದ ಗ್ರಾಮ ತೊರೆದು ಬ್ರೈನ್ ಸ್ಟ್ರೋಕ್‌ ಗೆ ಒಳಗಾಗಿ ಸಾವನ್ನಪ್ಪಿದ ಪಟ್ಟಣದ ಬದರಿಕೊಪ್ಪಲಿನ ಕಿರಣ್ ಅವರ ಅಂತಿಮ ದರ್ಶನ ಪಡೆದ ಜೆಡಿಎಸ್‌ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ವೈಯಕ್ತಿಕವಾಗಿ 1 ಲಕ್ಷ ರು. ಪರಿಹಾರ ವಿತರಿಸಿದರು.

ಮೃತ ಕಿರಣ್ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆಗೆ ಸ್ಥಳಕ್ಕಾಗಮಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಮತ್ತು ಮಾಜಿ ಶಾಸಕ ಸುರೇಶ್‌ಗೌಡ ಮೃತ ಕಿರಣ್ ಅವರ ಅಂತಿಮ ದರ್ಶನ ಮಾಡಿದ ಬಳಿಕ, ತಂದೆ ಕಳೆದುಕೊಂಡಿರುವ ಒಂದೂವರೆ ವರ್ಷದ ಮಗುವನ್ನು ಕೆಲಹೊತ್ತು ತೊಡೆಮೇಲೆ ಕೂರಿಸಿಕೊಂಡು ನಿಖಿಲ್ ಭಾವುಕರಾದರು.

ಈ ವೇಳೆ ಕುಟುಂಬಕ್ಕೆ ಇಂತಹ ಸ್ಥಿತಿ ಬರಬಾರದಿತ್ತು. ನಿಮ್ಮ ಕಷ್ಟದಲ್ಲಿ ನಾವಿದ್ದೇವೆ ಧೈರ್ಯತಂದುಕೊಂಡು ಮುಂದಿನ ಕಾರ್ಯ ನಡೆಸಿ ಎಂದು ಸಾಂತ್ವನ ಹೇಳಿ ವೈಯುಕ್ತಿಕವಾಗಿ 1 ಲಕ್ಷ ರು. ಆರ್ಥಿಕ ನೆರವು ನೀಡಿದರು.

ಕಿರಣ್ ಪತ್ನಿಗೆ ಕೆಲಸದ ಭರವಸೆ:

ಬಿಕಾಂ ವ್ಯಾಸಂಗ ಮಾಡಿದ್ದ ಕಿರಣ್‌ಗೆ ಯಾವುದಾದರೊಂದು ಕಂಪನಿಯಲ್ಲಿ ಕೆಲಸ ಕೊಡಿಸಬೇಕೆಂದು ಮಾಜಿ ಶಾಸಕ ಸುರೇಶ್‌ಗೌಡರು ಕೇಂದ್ರ ಸಚಿವ ಕುಮಾರಣ್ಣ ಅವರೊಂದಿಗೆ ಚರ್ಚಿಸಿದ್ದರು.

ಗಲಭೆ ಪ್ರಕರಣದಲ್ಲಿ ತನ್ನ ತಂದೆ ಕುಮಾರ್ ಜೈಲು ಸೇರಿದ್ದರು. ಜೊತೆಗೆ ಬಂಧನದ ಭೀತಿಯಿಂದ ಊರು ತೊರೆದು ಮಾನಸಿಕ ಖಿನ್ನತೆಗೊಳಗಾಗಿದ್ದ ಕಿರಣ್‌ಗೆ ಬ್ರೈನ್‌ಸ್ಟ್ರೋಕ್ ಹಾಗೂ ರಕ್ತದೊತ್ತಡದಲ್ಲಿ ಏರುಪೇರಾಗಿ ಸಾವನ್ನಪ್ಪಿರುವುದು ಬಹಳ ದುಃಖದ ಸಂಗತಿ. ಮೃತ ಕಿರಣ್‌ಗೆ ಕೊಡಿಸಬೇಕೆಂದುಕೊಂಡಿದ್ದ ಕೆಲಸವನ್ನು ಮುಂದಿನ ದಿನಗಳಲ್ಲಿ ಅವರ ಪತ್ನಿಗೆ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಮಾಜಿ ಶಾಸಕ ಸುರೇಶ್‌ಗೌಡ, ಕೆ.ಆರ್.ಪೇಟೆ ಶಾಸಕ ಮಂಜು, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ, ಮುಖಂಡ ನಿತೀಶ್, ಕಂಚಿನಕೋಟೆ ಮೂರ್ತಿ ಸೇರಿದಂತೆ ಹಲವರು ಇದ್ದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು