ಕನ್ನಡಪ್ರಭ ವಾರ್ತೆ ಮದ್ದೂರು
ನಿಖಿಲ್ ಕುಮಾರಸ್ವಾಮಿ ರಾಜಕೀಯ ಕ್ಷೇತ್ರಕ್ಕೆ ಅರ್ಹನಲ್ಲದ ವ್ಯಕ್ತಿ ಎಂದು ಶಾಸಕ ಕೆ.ಎಂ.ಉದಯ್ ಬುಧವಾರ ಲೇವಡಿ ಮಾಡಿದರು. ತಾಲೂಕಿನ ಹುಳುಗನಹಳ್ಳಿಯಿಂದ ತಲಾ 4.99 ಲಕ್ಷ ರು. ವೆಚ್ಚದಲ್ಲಿ ಕದಲೀಪುರ ಗ್ರಾಮದವರಗೆ ರಸ್ತೆ ಅಭಿವೃದ್ಧಿ, ಕೆಸ್ತೂರು ಗ್ರಾಮದಿಂದ ಮಾಚಹಳ್ಳಿ ಕೆರೆ ಸೇರುವ ಹಳ್ಳಕ್ಕೆ ಚೆಕ್ ಡ್ಯಾಮ್ ನಿರ್ಮಾಣ ಹಾಗೂ ಕೆಸ್ತೂರು ಗ್ರಾಮದಿಂದ ಬೊಮ್ಮನಾಯಕನಹಳ್ಳಿ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರ ಮನಿ, ಹನಿ ಸರ್ಕಾರ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಶಾಸಕರು, ನಿಖಿಲ್ ರಾಜಕೀಯ ಕ್ಷೇತ್ರಕ್ಕೆ ಅರ್ಹನಲ್ಲ ಎಂದು ಕಳೆದ ಚುನಾವಣೆಗಳಲ್ಲಿ ಜನರೇ ಉತ್ತರ ನೀಡಿದ್ದಾರೆ. ಹೀಗಿದ್ದರೂ ಆತ ರಾಜಕೀಯದಲ್ಲಿ ಮುಂದುವರಿಯಲು ಒಲವು ವ್ಯಕ್ತಪಡಿಸಿರುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದರು.
ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುವಷ್ಟು ಪ್ರಬುದ್ಧನಾಗಿಲ್ಲ, ರಾಜಕೀಯದಲ್ಲಿ ಈಗಷ್ಟೇ ಕಣ್ಣು ಬಿಡುತ್ತಿರುವ, ಎಬಿಸಿಡಿ ಗೊತ್ತಿಲ್ಲದ ಬಚ್ಚಾ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಎನ್ನುವ ಬ್ರಾಂಡ್ ಬಿಟ್ಟರೆ ವ್ಯಕ್ತಿಗತವಾಗಿ ನಿಖಿಲ್ ರಾಜಕೀಯದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಟೀಕಿಸಿದರು.ರಾಜಕೀಯದಲ್ಲಿ ಅಪಪ್ರಬುದ್ಧನಾಗಿರುವ ನಿಖಿಲ್ ಕುಮಾರಸ್ವಾಮಿ ಅವರ ತಾತ ಮತ್ತು ಅಪ್ಪನ ಹೆಸರನ್ನು ಬಿಟ್ಟು ರಾಜಕೀಯ ಮಾಡಿ ತೋರಿಸಲಿ. ಅದನ್ನು ಬಿಟ್ಟು ಈತನಿಗೆ ಕಾಂಗ್ರೆಸ್ ಬಗ್ಗೆ ಟೀಕೆ ಮಾಡುವ ನೈತಿಕ ಹಕ್ಕು ಏನಿದೆ ಎಂದು ಪ್ರಶ್ನಿಸಿದರು.
ಸಹಕಾರ ಸಚಿವ ರಾಜಣ್ಣ ಶಾಸನ ಸಭೆಯಲ್ಲಿ ಹನಿ ಟ್ಯಾಪ್ ಹೇಳಿಕೆ ವೇಳೆ 48 ನಾಯಕರ ಸಿ.ಡಿ. ಮತ್ತು ನ್ಯಾಯಾಧೀಶರ ವಿಚಾರದ ಬಗ್ಗೆ ಯಾವುದೇ ಬದಲಾವಣೆ ಮಾಡಿಲ್ಲ. ವಾಸ್ತವದ ಸಂಗತಿಯನ್ನು ಹೇಳಿದ್ದಾರೆ. ಇದನ್ನು ಮಾಧ್ಯಮಗಳು ತಮಗಿಷ್ಟ ಬಂದ ರೀತಿಯಲ್ಲಿ ಪ್ರಸಾರ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.ಈ ವೇಳೆ ಹೆಮ್ಮನಹಳ್ಳಿ ಗ್ರಾಪಂ ಸದಸ್ಯ ನಂದೀಶ್ ಗೌಡ, ಪಿಡಿಒ ಲೀಲಾವತಿ, ಕೆಸ್ತೂರು ಕಾರ್ಯಕ್ರಮದಲ್ಲಿ ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಚಲುವರಾಜು, ಮಾಜಿ ಅಧ್ಯಕ್ಷ ಸಿ.ನಾಗೇಗೌಡ, ಮನ್ಮುಲ್ ನಿರ್ದೇಶಕ ಹರೀಶ್, ಎಪಿಎಂಸಿ ಮಾಜಿ ಅಧ್ಯಕ್ಷ ಕೆ. ದಾಸೇಗೌಡ, ಮುಖಂಡರಾದ ಗೋವಿಂದೇಗೌಡ, ಸಿಪಾಯಿ ಶ್ರೀನಿವಾಸ್, ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ನಾಗರಾಜು ಇದ್ದರು.